IND vs WI 5th T20: ಫೀನಿಕ್ಸ್‌ನಂತೆ ಎದ್ದುಬಂದ ಭಾರತ; ಸರಣಿ ಗೆಲುವಿನತ್ತ ಉಭಯ ತಂಡಗಳ ಚಿತ್ತ
ಭಾನುವಾರ, ಆಗಸ್ಟ್ 13ರಂದು ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂನಲ್ಲಿ ನಡೆಯಲಿರುವ ಐದನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ಮತ್ತು ಪ್ರವಾಸಿ ಭಾರತ ತಂಡಗಳು ಸೆಣಸಾಡಲಿವೆ.
ಯುವ ಭಾರತೀಯ ತಂಡವು ತನ್ನ ಗೆಲುವಿನ ಆವೇಗವನ್ನು ಮುಂದುವರಿಸಲು ಮತ್ತು ಐದು ಪಂದ್ಯಗಳ ಟಿ20 ಸರಣಿಯನ್ನು ವಶಪಡಿಸಿಕೊಳ್ಳಲು ಎದುರು ನೋಡುತ್ತಿದೆ. ಮತ್ತೊಂದೆಡೆ, ವೆಸ್ಟ್ ಇಂಡೀಸ್ ತಂಡ ಗೆಲುವಿನ ಲಯಕ್ಕೆ ಮರಳಿ, ಭಾರತ ವಿರುದ್ಧ ಮೊದಲ ಸರಣಿ ಗೆಲುವಿನ ಕನಸು ಕಾಣುತ್ತಿದೆ.

ಗಮನಾರ್ಹವಾಗಿ, ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯನ್ನು ಈವರೆಗೆ 2-2 ಅಂತರದಲ್ಲಿ ಸಮಬಲಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿ ರೋಚಕ ಹಣಾಹಣಿಗೆ ವೇದಿಕೆ ಸಿದ್ಧಪಡಿಸಿದೆ.
ಇದಕ್ಕೂ ಮೊದಲು ಅತಿಥೇಯ ವೆಸ್ಟ್ ಇಂಡೀಸ್ ಸತತ ಎರಡು ಗೆಲುವುಗಳನ್ನು ಸಾಧಿಸುವ ಮೂಲಕ ಅದ್ಭುತವಾಗಿ ಸರಣಿ ಆರಂಬಿಸಿತು. ಮೊದಲ ಪಂದ್ಯ ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂ, ಎರಡನೇ ಪಂದ್ಯ ಗಯಾನಾದಲ್ಲಿ ಗೆದ್ದಿತು.
ಅನಂತರ, ಗಯಾನಾದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ ಸಾಹಸದಿಂದ ವೆಸ್ಟ್ ಇಂಡೀಸ್ ವಿರುದ್ಧ ಗೆಲುವಿನ ಹಳಿಗೆ ಮರಳಿತು. ನಂತರ, ನಾಲ್ಕನೇ ಟಿ20 ಪಂದ್ಯದಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಸರಣಿ ಸಮಬಲಗೊಳಿಸಿಕೊಂಡಿತು.

ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಹಾರ್ದಿಕ್ ಪಾಂಡ್ಯ ನಾಯಕತ್ವದ ಭಾರತ ತಂಡ, ಅದೇ ಗೆಲುವಿನ ನಾಗಾಲೋಟವನ್ನು ಮುಂದುವರೆಸಿ ಐದನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜಯದತ್ತ ದೃಷ್ಟಿ ನೆಟ್ಟಿದೆ.
ನಾಲ್ಕನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 178 ರನ್‌ಗಳ ಸವಾಲಿನ ಮೊತ್ತ ಕಲೆಹಾಕಿತು. ಅರ್ಶ್‌ದೀಪ್ ಸಿಂಗ್ ನಿರ್ಣಾಯಕ ಮೂರು ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2 ವಿಕೆಟ್ ಪಡೆದರು. ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಾಲ್ ಮತ್ತು ಮುಖೇಶ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ಇನ್ನು 179 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಮತ್ತು ಶುಭ್ಮನ್ ಗಿಲ್ 165 ರನ್‌ಗಳ ದಾಖಲೆಯ ಆರಂಭಿಕ ಜೊತೆಯಾಟ ನೀಡಿದರು ಮತ್ತು ಭಾರತವನ್ನು 9 ವಿಕೆಟ್‌ಗಳ ಗೆಲುವಿನತ್ತ ಮುನ್ನಡೆಸಿದರು.
ಇದೀಗ ಐದನೇ ಪಂದ್ಯವು ಸರಣಿ ನಿರ್ಧಾರಕ ಪಂದ್ಯವಾಗಿದ್ದು ಉಭಯ ತಂಡಗಳಿಂದ ರೋಚಕ ಪ್ರದರ್ಶನ ನಿರೀಕ್ಷಿಸಬಹುದು. ಭಾರತ ತನ್ನ ಗೆಲುವಿನ ಆವೇಗವನ್ನು ಕಾಯ್ದುಕೊಂಡು ಸರಣಿ ಕೈವಶ ಮಾಡಿಕೊಳ್ಳುತ್ತದೆಯೇ ಅಥವಾ ರೋವ್ಮನ್ ಪೊವೆಲ್ ನಾಯಕತ್ವದ ವೆಸ್ಟ್ ಇಂಡೀಸ್ ಪುಟಿದೇಳುತ್ತದೆಯೇ? ಎಂಬುದಕ್ಕೆ ಭಾನುವಾರ ನಡೆಯುವ ಪಂದ್ಯದ ಫಲಿತಾಂಶ ನಿರ್ಧರಿಸಲಿದೆ.
"ಸರಣಿ ಈಗ 2-2ರಲ್ಲಿ ಅಮಬಲಗೊಂಡಿದೆ. ಎರಡೂ ತಂಡಗಳು ಇದನ್ನು ತಲುಪಲು ಉತ್ತಮವಾಗಿ ಆಡಿವೆ. ಭಾನುವಾರದ ಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲುವಾಗಲಿದೆ. ನಮ್ಮ ತಂಡವನ್ನು ಮುನ್ನಡೆಸಲು ನಾನು ಸಿದ್ಧನಾಗಿದ್ದೇನೆ," ಎಂದು 4ನೇ ಟಿ20 ಪಂದ್ಯ ಸೋತ ನಂತರ ರೋವ್ಮನ್ ಪೊವೆಲ್ ಹೇಳಿದರು.
5ನೇ ಟಿ20 ಪಂದ್ಯದಲ್ಲಿ ಭಾರತ vs ವೆಸ್ಟ್ ಇಂಡೀಸ್ ಸಂಭಾವ್ಯ ಆಡುವ 11ರ ಬಳಗ
ಭಾರತ: ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಹಾಲ್, ಮುಖೇಶ್ ಕುಮಾರ್.
ವೆಸ್ಟ್ ಇಂಡೀಸ್: ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್ಮನ್ ಪೊವೆಲ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಅಕೇಲ್ ಹೋಸೇನ್, ಓಬೆಡ್ ಮೆಕಾಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications