ಗುರುವಾರ, ಆಗಸ್ಟ್ 3ರಂದು ಟ್ರಿನಿಡಾಡ್‌ನ ತರೂಬಾದ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು ಪ್ರವಾಸಿ ಭಾರತದ ವಿರುದ್ಧ ಸವಾಲಿನ ಮೊತ್ತವನ್ನು ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡ ನಿಕೋಲಸ್ ಪೂರನ್ ಮತ್ತು ನಾಯಕ ರೋವ್ಮನ್ ಪೊವೆಲ್ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿದ್ದು, ಭಾರತಕ್ಕೆ 150 ರನ್‌ಗಳ ಗೆಲುವಿನ ಗುರಿ ನೀಡಿದೆ.

ವೆಸ್ಟ್ ಇಂಡೀಸ್‌ನ ಇನ್ನಿಂಗ್ಸ್ ಆರಂಭಿಸಿದ ಬ್ರಾಂಡನ್ ಕಿಂಗ್ ಮತ್ತು ಕೈಲ್ ಮೇಯರ್ಸ್ ಮೊದಲ ವಿಕೆಟ್‌ಗೆ 4.1 ಓವರ್‌ಗಳಲ್ಲಿ 29 ರನ್‌ಗಳ ಜೊತೆಯಾಟ ನೀಡಿದರು. 1 ರನ್ ಗಳಿಸಿದ ಕೈಲ್ ಮೇಯರ್ಸ್ ಯುಜ್ವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂಗೆ ಬಿದ್ದರು.
ಬಳಿಕ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಮೇತ 28 ರನ್ ಗಳಿಸಿದ್ದ ಬ್ರಾಂಡನ್ ಕಿಂಗ್ ಕೂಡ ಯುಜ್ವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಆಗಿ ಪೆವಿಲಿಯನ್ ಸೇರಿದರು. ನಂತರ ಬಂದ ಜಾನ್ಸನ್ ಚಾರ್ಲ್ಸ್ 3 ರನ್ ಗಳಿಸಿ ಔಟಾದರು.
ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ 34 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ರೋವ್ಮನ್ ಪೊವೆಲ್ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 48 ರನ್ ಗಳಿಸಿ ಅರ್ಶ್‌ದೀಪ್ ಸಿಂಗ್ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚ್ ನೀಡಿದರು.

ಶಿಮ್ರಾನ್ ಹೆಟ್ಮೆಯರ್ 10 ರನ್ ಮತ್ತು ರೊಮಾರಿಯೋ ಶಫರ್ಡ್ ಅಜೇಯ 4 ರನ್ ಮತ್ತು ಜೇಸನ್ ಹೋಲ್ಡರ್ ಅಜೇಯ 6 ರನ್ ಗಳಿಸಿ ತಂಡದ ಮೊತ್ತ 150ರ ಗಡಿ ಸಮೀಪಿಸಲು ನೆರವಾದರು.
ಬೌಲಿಂಗ್‌ನಲ್ಲಿ ಭಾರತ ತಂಡದ ಪರ ಅರ್ಶ್‌ದೀಪ್ ಸಿಂಗ್ 4 ಓವರ್‌ಗಳಲ್ಲಿ 31 ರನ್ ನೀಡಿ 2 ವಿಕೆಟ್, ಯುಜ್ವೇಂದ್ರ ಚಹಾಲ್ 3 ಓವರ್‌ಗಳಲ್ಲಿ 24 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಉಳಿದಂತೆ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.
ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿದ ಮುಖೇಶ್ ಕುಮಾರ್ ಮತ್ತು ಆಲ್‌ರೌಂಡರ್ ಅಕ್ಷರ್ ಪಟೇಲ್ ವಿಕೆಟ್ ರಹಿತರಾದರು.
ಇತ್ತೀಚೆಗೆ ಮುಕ್ತಾಯಗೊಂಡ ಉಭಯ ತಂಡಗಳ ನಡುವಿನ ಏಕದಿನ ಸರಣಿಯಲ್ಲಿ ಭಾರತ ತಂಡವು 2-1 ಅಂತರದಲ್ಲಿ ಗೆಲುವು ಸಾಧಿಸಿತು. ಇದೀಗ ಟಿ20 ಸರಣಿಯಲ್ಲಿ ಅದೇ ಪ್ರಾಬಲ್ಯ ಸಾಧಿಸಲು ಎದುರು ನೋಡುತ್ತಿದೆ.
ಈ ಪಂದ್ಯದಲ್ಲಿ ತಿಲಕ್ ವರ್ಮಾ ಮತ್ತು ಮುಖೇಶ್ ಕುಮಾರ್ ಅವರು ಭಾರತ ತಂಡದ ಆಡುವ 11ರ ಬಳಗದಲ್ಲಿ ಸ್ಥಾನ ಪಡೆಯುವ ಮೂಲಕ ಟಿ20 ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು.
ಭಾರತ vs ವೆಸ್ಟ್ ಇಂಡೀಸ್ ಆಡುವ 11ರ ಬಳಗ
ವೆಸ್ಟ್ ಇಂಡೀಸ್: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶಫರ್ಡ್, ಅಕೀಲ್ ಹೊಸೈನ್, ಅಲ್ಝಾರಿ ಜೋಸೆಫ್, ಒಮೆಡ್ ಮಕಾಯ್.
ಭಾರತ: ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್, ಅರ್ಶ್‌ದೀಪ್ ಸಿಂಗ್, ಮುಖೇಶ್ ಕುಮಾರ್.