IND vs WI: ಒಟ್ಟು 20 ಟಿ20 ಮುಖಾಮುಖಿ ಪಂದ್ಯಗಳಲ್ಲಿ 13 ಪಂದ್ಯಗಳನ್ನು ಗೆದ್ದ ಬಲಿಷ್ಠ ತಂಡವಿದು!

ವೆಸ್ಟ್ ಇಂಡೀಸ್ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಕೆರಿಬಿಯನ್ನರ ವಿರುದ್ಧ ಸೀಮಿತ ಓವರ್ ಸರಣಿಗಳಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಇತ್ತಂಡಗಳ ನಡುವೆ ಮೊದಲಿಗೆ ಆಯೋಜನೆಯಾಗಿದ್ದ 3 ಪಂದ್ಯಗಳ ಏಕದಿನ ಸರಣಿ ಈಗಾಗಲೇ ಮುಕ್ತಾಯಗೊಂಡಿದ್ದು, ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಟೀಮ್ ಇಂಡಿಯಾ ವೈಟ್ ವಾಶ್ ಸಾಧನೆ ಮಾಡಿದೆ. ಈ ಮೂಲಕ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಶಿಖರ್ ಧವನ್ ವೆಸ್ಟ್ ಇಂಡೀಸ್ ನೆಲದಲ್ಲಿ ವೈಟ್ ವಾಶ್ ಸಾಧನೆ ಮಾಡಿದ ಮೊದಲ ಭಾರತೀಯ ನಾಯಕ ಎಂಬ ದಾಖಲೆಯನ್ನು ಬರೆದರು.
ಹೀಗೆ ವೆಸ್ಟ್ ಇಂಡೀಸ್ ತಂಡವನ್ನು ಅದರ ತವರಿನಲ್ಲಿಯೇ ಮಣಿಸುವುದರ ಮೂಲಕ ದಾಖಲೆಯನ್ನು ಬರೆದಿರುವ ಟೀಮ್ ಇಂಡಿಯಾ ಇದೀಗ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿದೆ. ಇದೇ ವರ್ಷ ಏಷ್ಯಾಕಪ್ ಮತ್ತು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಗಳು ಇರುವ ಕಾರಣ ವೆಸ್ಟ್ ಇಂಡೀಸ್ ವಿರುದ್ಧದ ಈ ಟಿ ಟ್ವೆಂಟಿ ಸರಣಿ ಟೀಮ್ ಇಂಡಿಯಾಗೆ ಆ ಟೂರ್ನಿಗಳಿಗೆ ಸಿದ್ಧತೆ ನಡೆಸಿಕೊಳ್ಳಲು ಸಿಕ್ಕಿರುವ ಅವಕಾಶ ಎಂದೂ ಸಹ ಹೇಳಬಹುದು.
ಹೀಗೆ ಇತ್ತಂಡಗಳ ನಡುವಿನ ಈ ಟಿ ಟ್ವೆಂಟಿ ಸರಣಿ ಮಹತ್ವದ್ದಾಗಿದ್ದು, ಏಕದಿನ ಸರಣಿಯಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದ ಭಾರತ ತಂಡದ ಪೂರ್ಣಾವಧಿ ನಾಯಕ ರೋಹಿತ್ ಶರ್ಮಾ ಈ ಸರಣಿಯಲ್ಲಿ ತಂಡ ಸೇರಿದ್ದು ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಹೀಗೆ ರೋಹಿತ್ ಶರ್ಮಾ ಆಗಮನ ತಂಡಕ್ಕೆ ಮತ್ತಷ್ಟು ಬಲವನ್ನು ಒದಗಿಸಿದ್ದು, ಟೀಮ್ ಇಂಡಿಯಾ ಈ ಸರಣಿಯಲ್ಲಿಯೂ ಸಹ ವಿಜೇತ ತಂಡವಾಗಿ ಹೊರಹೊಮ್ಮುವತ್ತ ಕಣ್ಣಿಟ್ಟಿದ್ದರೆ, ಆತಿಥೇಯ ವೆಸ್ಟ್ ಇಂಡೀಸ್ ಈ ಸರಣಿಯಲ್ಲಾದರೂ ಗೆದ್ದು ಏಕದಿನ ಸರಣಿಯಲ್ಲಾದ ಮುಖಭಂಗದ ಪ್ರತೀಕಾರ ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ. ಇತ್ತಂಡಗಳ ನಡುವಿನ ಪ್ರಥಮ ಟಿ ಟ್ವೆಂಟಿ ಪಂದ್ಯ ಬ್ರಿಯಾನ್ ಲಾರಾ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ( ಜುಲೈ 29 ) ನಡೆಯಲಿದ್ದು, ಎರಡೂ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು ಎಷ್ಟು ಟಿ ಟ್ವೆಂಟಿ ಪಂದ್ಯಗಳು ನಡೆದಿವೆ ಹಾಗೂ ಈ ಪೈಕಿ ಯಾವ ತಂಡ ಹೆಚ್ಚು ಪಂದ್ಯಗಳಲ್ಲಿ ಗೆದ್ದು ಬಲಿಷ್ಠವಾಗಿದೆ ಎಂಬುದರ ಕುರಿತಾದ ಮುಖಾಮುಖಿಯ ಫಲಿತಾಂಶದ ಮಾಹಿತಿ ಈ ಕೆಳಕಂಡಂತಿದೆ.

ಭಾರತ vs ವೆಸ್ಟ್ ಇಂಡೀಸ್ ಟಿ ಟ್ವೆಂಟಿ ಮುಖಾಮುಖಿಯ ಫಲಿತಾಂಶ
ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 20 ಟಿ ಟ್ವೆಂಟಿ ಮುಖಾಮುಖಿ ಪಂದ್ಯಗಳು ನಡೆದಿದ್ದು, ಈ ಪೈಕಿ ಟೀಮ್ ಇಂಡಿಯಾ 13 ಪಂದ್ಯಗಳಲ್ಲಿ ಗೆದ್ದಿದ್ದು, ವೆಸ್ಟ್ ಇಂಡೀಸ್ 6 ಪಂದ್ಯಗಳಲ್ಲಿ ಜಯ ಸಾಧಿಸಿದೆ ಹಾಗೂ ಉಳಿದೊಂದು ಪಂದ್ಯ ಯಾವುದೇ ಫಲಿತಾಂಶವಿಲ್ಲದೇ ಅಂತ್ಯಗೊಂಡಿದೆ. ಈ ಮೂಲಕ ಇತ್ತಂಡಗಳ ನಡುವಿನ ಒಟ್ಟಾರೆ ಟಿ ಟ್ವೆಂಟಿ ಪಂದ್ಯಗಳ ಮುಖಾಮುಖಿಯಲ್ಲಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಟೀಮ್ ಇಂಡಿಯಾ ಸ್ಪಷ್ಟ ಮೇಲುಗೈ ಸಾಧಿಸಿದೆ.

ಕಳೆದ ಟಿ ಟ್ವೆಂಟಿ ಸರಣಿಯ ಫಲಿತಾಂಶ
ಇದೇ ವರ್ಷದ ಫೆಬ್ರವರಿ ತಿಂಗಳಿನಲ್ಲಿ ವೆಸ್ಟ್ ಇಂಡೀಸ್ ಭಾರತ ಪ್ರವಾಸವನ್ನು ಕೈಗೊಂಡಿದ್ದಾಗ ಕೋಲ್ಕತಾದ ಈಡನ್ ಗಾರ್ಡನ್ಸ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಸೆಣಸಾಟವನ್ನು ನಡೆಸಿತ್ತು. ಈ ಎಲ್ಲಾ ಪಂದ್ಯಗಳಲ್ಲಿಯೂ ಟೀಮ್ ಇಂಡಿಯಾ ಜಯ ಸಾಧಿಸಿ ವೆಸ್ಟ್ ಇಂಡೀಸ್ ತಂಡಕ್ಕೆ ವೈಟ್ ವಾಷ್ ಬಳಿದಿತ್ತು.

ಟಿ ಟ್ವೆಂಟಿ ಸರಣಿಗೆ ಪ್ರಕಟವಾಗಿರುವ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಸರ್ ಪಟೇಲ್, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಕೆಎಲ್ ರಾಹುಲ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್ , ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್: ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್ (ಉಪನಾಯಕ), ಶಮರ್ ಬ್ರೂಕ್ಸ್, ಡೊಮಿನಿಕ್ ಡ್ರೇಕ್ಸ್, ಶಿಮ್ರಾನ್ ಹೆಟ್ಮೆಯರ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಓಬೆಡ್ ಮೆಕಾಯ್, ಕೀಮೋ ಪಾಲ್, ರೊಮಾರಿಯೊ ಶೆಫರ್ಡ್, ಒಡೆವನ್ ಶೆಫರ್ಡ್, ಥಾಮಸ್, ಹೇಡನ್ ವಾಲ್ಷ್ ಜೂನಿಯರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications