ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ ಬಳಿಕ ಭಾರತದ ಟೆಸ್ಟ್ ತಂಡದಲ್ಲಿ ಕೆಲ ಬದಲಾವಣೆಗಳಾಗುವ ನಿರೀಕ್ಷೆಯಿತ್ತು. ಅದರಲ್ಲೂ ವೆಸ್ಟ ಇಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಆಟಗಾರರನ್ನು ಪರೀಕ್ಷೆಗೊಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಆದರೆ ಬಿಸಿಸಿಐ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಪೂರ್ಣಪ್ರಮಾಣದ ಟೆಸ್ಟ್ ತಂಡವನ್ನು ಕಳುಹಿಸುತ್ತಿದ್ದು ಇಂದು ತಂಡವನ್ನು ಪ್ರಕಟಿಸಿದೆ.
ರೋಹಿತ್ ಶರ್ಮಾ ನೇತೃತ್ವದ ಈ ತಂಡವನ್ನು ಬಿಸಿಸಿಐ ಇಂದು ಪ್ರಕಟಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಆಯ್ಕೆ ಮಾಡಿರುವ ತಂಡದಲ್ಲಿ ಮೂವರು ಹಿರಿಯ ಆಟಗಾರರನ್ನು ಕೈಬಿಡಲಾಗಿದೆ. ಆಯ್ಕೆ ಮಂಡಳಿ ತಂಡದಿಂದ ಕೈಬಿಟ್ಟಿರುವ ಮೂವರು ಅನುಭವಿ ಕ್ರಿಕೆಟಿಗರು ಯಾರು? ಈ ನಿರ್ಧಾರಕ್ಕೆ ಕಾರಣವೇನು? ಮುಂದೆ ಓದಿ

ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ಚೇತೇಶ್ವರ್ ಪೂಜಾರ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಆಯ್ಕೆ ಮಾಡಿರುವ ತಂಡದಿಂದ ಹೊರಬಿದ್ದಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಪೂಜಾರ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಪೂಜಾರ ಸುದೀರ್ಘ ಕಾಲದಿಂದ ಇಂಗ್ಲೆಂಡ್‌ನಲ್ಲಿದ್ದು ಕೌಂಟಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರೂ ಭಾರತ ತಂಡದ ಪರವಾಗಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ.
ಇದೀಗ ಹೊಸ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆವೃತ್ತಿ ಆರಂಭವಾಗುತ್ತಿರುವ ಕಾರಣ ಹಿರಿಯ ಆಟಗಾರನ ಬದಲಿಗೆ ಯುವ ಆಟಗಾರರ ಮೇಲೆ ನಂಬಿಕೆಯಿಡಲು ಆಯ್ಕೆ ಸಮಿತಿ ನಿರ್ಧರಿಸಿದಂತಿದೆ. ಕಳೆದ ವರ್ಷ ಒಂದು ಬಾರಿ ತಂಡದಿಂದ ಹೊರಬಿದ್ದ ಬಳಿಕ ಕಮ್‌ಬ್ಯಾಕ್ ಮಾಡಿದ್ದ ಪೂಜಾರ ಅವರಿಂದ ಇತ್ತೀಚೆಗೆ ನಿರೀಕ್ಷಿತ ಪ್ರದರ್ಶನ ಬಾರದಿರುವುದು ತಂಡದ ಹಿನ್ನಡೆಗೆ ಕಾರಣವಾಗುತ್ತಿದೆ.
ಅನುಭವಿ ವೇಗಿ ಉಮೇಶ್ ಯಾದವ್ ಇತ್ತೀಚೆಗೆ ತಮ್ಮ ಲಯವನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿತ್ತು. ಕಳೆದ ಐಪಿಎಲ್‌ನಲ್ಲಿಯೂ ಅಮೇಶ್ ಯಾದವ್ ಅವರ ಪ್ರದರ್ಶನ ಗಮನಾರ್ಹವಾಗಿರಲಿಲ್ಲ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಕ್ಕೆ ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು. ಅದಕ್ಕೆ ಪೂರಕವಾಗಿ ಉಮೇಶ್ ಯಾದವ್ ಫೈನಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದರು. ಜಸ್ಪ್ರೀತ್ ಬೂಮ್ರಾ ಅಲಭ್ಯವಾಗಿರುವ ಕಾರಣ ಆ ಸ್ಥಾನವನ್ನು ಸಮರ್ಥವಾಗಿ ತುಂಬುವ ದೃಷ್ಟಿಯಿಂದ ಯುವ ಆಟಗಾರರಿಗೆ ಅವಕಾಶ ನೀಡಲು ಇದೀಗ ಆಯ್ಕೆ ಮಂಡಳಿ ಮುಂದಾಗಿದೆ. ಅದರ ಭಾಗವಾಗಿ ಯುವ ವೇಗಿ ಮುಖೇಶ್ ಕುಮಾರ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಅಲ್ಲದೆ ನವ್‌ದೀಪ್ ಸೈನಿ ಕೂಡ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಇನ್ನು ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೀಮ್ ಇಂಡಿಯಾದ ಮತ್ತೋರ್ವ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಕುಡ ಸ್ಥಾನವನ್ನು ಪಡೆದುಕೊಂಡಿಲ್ಲ. ಆದರೆ ಶಮಿ ಅವರಿಗೆ ಈ ಸರಣಿಯಿಂದ ವಿಶರಾಂತಿ ನಿಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಏಕದಿನ ಹಾಗೂ ಟೆಸ್ಟ್ ಎರಡು ಮಾದರಿಯಲ್ಲಿಯೂ ಉತ್ತಮ ಪ್ರದರ್ಶನ ನೀಡಿಕೊಂಡು ಬರುತ್ತಿರುವ ಮೊಹಮ್ಮದ್ ಶಮಿ ಅವರನ್ನು ಈ ಕಾರಣದಿಂದಾಗಿ ಹೊರಗಿಡಲಾಗಿದೆ.
ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದ್ದು ಈ ಬಾರಿಯ ವಿಶ್ವಕಪ್ ಭಾರತದ ಆತಿಥ್ಯದಲ್ಲಿಯೇ ನಡೆಯಲಿದೆ. ಈ ಕಾರಣದಿಂದಾಗಿ ವಿಶ್ವಕಪ್ ತಂಡದಲ್ಲಿ ನಿರ್ಣಾಯಕ ಪಾತ್ರವಹಿಸಲಿರುವ ಶಮಿ ಅವರ ಕೆಲಸದ ಒತ್ತಡವನ್ನು ಕಡಿಮೆ ಮಾಡುವುದು ಆಯ್ಕೆ ಮಂಡಳಿ ಮುಂದಿರುವ ಸವಾಲಾಗಿರುವ ಕಾರಣ ಈ ಸರಣಿಯಿಂದ ಅವರು ಹೊರಗುಳಿಯುವಂತಾಗಿದೆ. ಅಲ್ಲದೆ ಈ ಮೂಲಕ ಯುವ ಆಟಗಾರರಿಗೂ ಅವಕಾಶ ದೊರೆತಂತಾಗುತ್ತದೆ.