ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಸಾಕಷ್ಟು ಪ್ರಯೋಗಗಳು ಮತ್ತು ಯುವ ಆಟಗಾರರಿಗೆ ನೀಡಿದ ಅವಕಾಶಗಳಿಗೆ ಸಾಕ್ಷಿಯಾಗಿದೆ. ಭಾರತ ಕ್ರಿಕೆಟ್ ತಂಡವು ವೆಸ್ಟ್ ಇಂಡೀಸ್ ಪ್ರವಾಸವನ್ನು ಲಘುವಾಗಿ ತೆಗೆದುಕೊಂಡಿದೆ ಎಂದು ಭಾರತದ ಮಾಜಿ ಬ್ಯಾಟರ್ ಮೊಹಮ್ಮದ್ ಕೈಫ್ ಅಭಿಪ್ರಾಯಪಟ್ಟಿದ್ದಾರೆ.
ತಂಡದ ಬಗ್ಗೆ ಅಂತಿಮವಾಗಿ 2023ರ ಏಷ್ಯಾ ಕಪ್ ಪಂದ್ಯಾವಳಿಯಿಂದ ನಿರ್ಧಾರ ಮಾಡಬೇಕಿದೆ. ಅಲ್ಲಿ ಭಾರತ ತಮ್ಮ ಅತ್ಯುತ್ತಮ ಅಡುವ 11ರ ಬಳಗವನ್ನು ಕಣಕ್ಕಿಳಿಸಬೇಕು ಎಂದಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 1-0 ಅಂತರದಿಂದ, ಏಕದಿನ ಸರಣಿಯನ್ನು 2-1 ಅಂತರದಿಂದ ಭಾರತ ವಶಪಡಿಸಿಕೊಂಡಿದೆ. ಆದಾಗ್ಯೂ, ಭಾರತ ತಂಡದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಯಿತು.
ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರಂತಹ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಯಿತು. ಸಂಜು ಸ್ಯಾಮ್ಸನ್, ರುತುರಾಜ್ ಗಾಯಕ್ವಾಡ್, ಮುಖೇಶ್ ಕುಮಾರ್, ಸೂರ್ಯಕುಮಾರ್ ಯಾದವ್, ಜಯದೇವ್ ಉನಾದ್ಕಟ್ ಅವರಂತಹ ಯುವ ಆಟಗಾರರಿಗೆ ಅವಕಾಶ ನೀಡಲಾಯಿತು.
"ವೆಸ್ಟ್ ಇಂಡೀಸ್ ಪ್ರವಾಸವನ್ನು ತುಂಬಾ ಲಘುವಾಗಿ ತೆಗೆದುಕೊಳ್ಳಲಾಗಿದೆ. ಈ ಪ್ರವಾಸದ ಆಧಾರದ ಮೇಲೆ ನಾವು ಭಾರತ ತಂಡವನ್ನು ನಿರ್ಣಯಿಸಲಾಗುವುದಿಲ್ಲ. ವೆಸ್ಟ್ ಇಂಡೀಸ್ ತಂಡ ಸಾಕಷ್ಟು ಸಂಕಷ್ಟದಲ್ಲಿದೆ. 2023ರ ವಿಶ್ವಕಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಗಲಿಲ್ಲ".
"ತಂಡದ ಮ್ಯಾನೇಜ್‌ಮೆಂಟ್ ಏನು ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಪ್ರಕಾರ, ಏಷ್ಯಾ ಕಪ್‌ನೊಂದಿಗೆ ತಂಡದ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ," ಎಂದು ಮೊಹಮ್ಮದ್ ಕೈಫ್ ತಿಳಿಸಿದರು.
"2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ತಮ್ಮ ಅತ್ಯುತ್ತಮ ಆಡುವ 11ರ ಬಳಗವನ್ನು ಆಡಿಸಬೇಕೆಂದು ನಾನು ಬಯಸುತ್ತೇನೆ. ವೆಸ್ಟ್ ಇಂಡೀಸ್ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ವಿಶ್ರಾಂತಿ ತೆಗೆದುಕೊಳ್ಳವುದಾಗಿದ್ದರೆ, ಅವರು ಅಲ್ಲಿಗೆ ಹೋಗಬಾರದಿತ್ತು. ನೀವು ಅವರಿಗೆ ಬ್ರೇಕ್ ನೀಡಲು ಬಯಸಿದ್ದರೆ, ನೀವು ಹೊಸ ತಂಡವನ್ನು ಕಳುಹಿಸಬೇಕಿತ್ತು," ಎಂದು ಮೊಹಮ್ಮದ್ ಕೈಫ್ ಕಿಡಿಕಾರಿದರು.
ವೆಸ್ಟ್ ಇಂಡೀಸ್ ಪ್ರವಾಸ ಅಷ್ಟು ದೊಡ್ಡದಾಗಿರಲಿಲ್ಲ. ಭಾರತದ ಎರಡನೇ ತಂಡವೂ ಅವರನ್ನು ಸೋಲಿಸಬಹುದಿತ್ತು. ಆದರೆ ನಾನು ಸದ್ಯ ಯಾವುದೇ ನಿರ್ಧಾರಕ್ಕೆ ಬರುವುದಿಲ್ಲ ಎಂದು ಮೊಹಮ್ಮದ್ ಕೈಫ್ ಬುಧವಾರ ನವದೆಹಲಿಯಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮಗಳಿಗೆ ಹೇಳಿದರು.
"ನಾನು ಭಾರತ ತಂಡವನ್ನು ಏಷ್ಯಾ ಕಪ್‌ನಲ್ಲಿ ಆಡುವ ಹನ್ನೊಂದು ಆಟಗಾರರೊಂದಿಗೆ ನಿರ್ಣಯಿಸಲು ಪ್ರಾರಂಭಿಸುತ್ತೇನೆ. ವೆಸ್ಟ್ ಇಂಡೀಸ್ ಪ್ರವಾಸವನ್ನು ನೋಡಿದರೆ 17ರಿಂದ 18 ಆಟಗಾರರನ್ನು ಕಳಿಸಲಾಗಿತ್ತು. ಆದರೆ 15 ಮಂದಿಯ ತಂಡವನ್ನು ನಿರ್ಧರಿಸಲು, ಅತ್ಯುತ್ತಮ ಆಡುವ 11 ಆಟಗಾರರ ಬಗ್ಗೆ ಖಚಿತವಾಗಿರಬೇಕು," ಎಂದು ಮೊಹಮ್ಮದ್ ಕೈಫ್ ತಿಳಿಸಿದರು.
ಏಕದಿನ ವಿಶ್ವಕಪ್‌ನಲ್ಲಿ ಎದುರಾಳಿಯ ಯಾವುದೇ ಬೌಲರ್‌ಗೆ ವಿರಾಟ್ ಕೊಹ್ಲಿ ಭಾರತ ತಂಡದ ದೊಡ್ಡ ಅಂಶವಾಗುತ್ತಾರೆ ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಭಾವಿಸಿದರು. 2022ರ ಏಷ್ಯಾ ಕಪ್‌ನಿಂದ ಆಟದ ಎಲ್ಲಾ ಸ್ವರೂಪಗಳಲ್ಲಿ ವಿರಾಟ್ ಕೊಹ್ಲಿ ಅನೇಕ ಶತಕಗಳನ್ನು ಸಿಡಿಸಿದ್ದಾರೆ.
"ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕಳಪೆ ಫಾರ್ಮ್ ಹೊಂದಿದ್ದರು, ಇದೀಗ ಅವರು ಫಾರ್ಮ್‌ಗೆ ಮರಳಿದ್ದಾರೆ. ಕೊಹ್ಲಿ ಐಪಿಎಲ್‌ನಲ್ಲಿ ಮತ್ತು ಟಿ20 ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್ ಮುಂದುವರೆಸಿದ್ದಾರೆ. 2022ರ ಏಷ್ಯಾ ಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಶತಕ ಬಾರಿಸಿದ ನಂತರ ಕೊಹ್ಲಿ ಹಿಂತಿರುಗಿ ನೋಡಲಿಲ್ಲ. ಅವರ ಸದ್ಯದ ಫಾರ್ಮ್‌ನಲ್ಲಿ ಯಾವುದೇ ಬೌಲರ್‌ಗೆ ದೊಡ್ಡ ವಿಕೆಟ್ ಆಗಿರುತ್ತಾರೆ," ಎಂದು ಮೊಹಮ್ಮದ್ ಕೈಫ್ ಹೇಳಿದರು.