ಗುರುವಾರ, ಜುಲೈ 27ರಂದು ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಆರಂಭವಾಗಲಿದೆ. ಈ ಸರಣಿಯು ಭಾರತ ತಂಡಕ್ಕೆ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಯ ಹಾದಿ ಪ್ರಾರಂಭವಾಗಲಿದೆ.
ಇದೇ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಇಬ್ಬರೂ ಏಕದಿನ ಕ್ರಿಕೆಟ್‌ನಲ್ಲಿ ಬೃಹತ್ ದಾಖಲೆಗಳನ್ನು ನಿರ್ಮಿಸಲು ತುದಿಗಾಲಲ್ಲಿ ನಿಂತಿದ್ದಾರೆ.

ಕಳೆದೆರಡು ದಶಕಗಳಲ್ಲಿ ಎರಡು ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಭಾರತ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಬಲಿಷ್ಠವಾಗಿದೆ.
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಕ್ರಿಕೆಟ್ ತಂಡವು ಸತತ 15 ಏಕದಿನ ದ್ವಿಪಕ್ಷೀಯ ಸರಣಿಗಳನ್ನು ಗೆದ್ದಿದೆ. 2006ರಲ್ಲಿ ಕೆರಿಬಿಯನ್ ತಂಡವು ಕೊನೆಯ ಬಾರಿಗೆ ಏಕದಿನ ಸರಣಿಯಲ್ಲಿ ಭಾರತವನ್ನು ಸೋಲಿಸಿದೆ.
ಇನ್ನು ಏಕದಿನ ಕ್ರಿಕೆಟ್‌ನಲ್ಲಿ 13,000 ರನ್ ಪೂರೈಸಲು ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿಗೆ ಮೂರು ಪಂದ್ಯಗಳ ಸರಣಿಯಲ್ಲಿ 102 ರನ್ ಅಗತ್ಯವಿದೆ. ಕೊಹ್ಲಿ ಈ ಹೆಗ್ಗುರುತನ್ನು ತಲುಪಿದ ವಿಶ್ವದ 5ನೇ ಬ್ಯಾಟರ್ ಮತ್ತು ಸಚಿನ್ ತೆಂಡೂಲ್ಕರ್ ನಂತರ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಲಿದ್ದಾರೆ.

ಸಚಿನ್ ತೆಂಡೂಲ್ಕರ್ - ಭಾರತ - 18,426
ಕುಮಾರ ಸಂಗಕ್ಕಾರ - ಶ್ರೀಲಂಕಾ - 14,234
ರಿಕಿ ಪಾಂಟಿಂಗ್ - ಆಸ್ಟ್ರೇಲಿಯಾ - 13,704
ಸನತ್ ಜಯಸೂರ್ಯ - ಶ್ರೀಲಂಕಾ - 13,430
ವಿರಾಟ್ ಕೊಹ್ಲಿ - ಭಾರತ - 12,898
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 274 ಏಕದಿನ ಪಂದ್ಯಗಳಲ್ಲಿ 57.32ರ ಸರಾಸರಿಯಲ್ಲಿ 46 ಶತಕ ಮತ್ತು 65 ಅರ್ಧಶತಕಗಳೊಂದಿಗೆ 12,898 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 50 ಶತಕ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲು ವಿರಾಟ್ ಕೊಹ್ಲಿಗೆ ಇನ್ನೂ 4 ಶತಕಗಳ ಅವಶ್ಯಕತೆ ಇದೆ.
ಇದೇ ವೇಳೆ ಏಕದಿನ ಕ್ರಿಕೆಟ್‌ನಲ್ಲಿ 13,000 ರನ್‌ಗಳ ಮೈಲುಗಲ್ಲು ಸ್ಥಾಪಿಸಿದರೆ, ಈ ಸಾಧನೆಯನ್ನು ಮಾಡಿದ ಅತ್ಯಂತ ವೇಗದ ಬ್ಯಾಟರ್ ಆಗುವ ಮೂಲಕ ವಿರಾಟ್ ಕೊಹ್ಲಿ ಅವರು ಭಾರತದ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.
ಸಚಿನ್ ತೆಂಡೂಲ್ಕರ್ 321 ಇನ್ನಿಂಗ್ಸ್‌ಗಳಲ್ಲಿ 13,000 ರನ್‌ಗಳ ಹೆಗ್ಗುರುತನ್ನು ತಲುಪಿದ್ದಾರೆ ಮತ್ತು ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಕೇವಲ 265 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ.
ಮತ್ತೊಂದೆಡೆ, ಹಾಲಿ ನಾಯಕ ರೋಹಿತ್ ಶರ್ಮಾಗೆ ಏಕದಿನ ಕ್ರಿಕೆಟ್‌ನಲ್ಲಿ 10,000 ರನ್ ಪೂರ್ಣಗೊಳಿಸಲು 175 ರನ್ ಅವಶ್ಯಕತೆ ಇದೆ. ರೋಹಿತ್ ಶರ್ಮಾ 30 ಶತಕ ಮತ್ತು 48 ಅರ್ಧಶತಕಗಳೊಂದಿಗೆ 48.25ರ ಸರಾಸರಿಯಲ್ಲಿ 9,825 ರನ್ ಗಳಿಸಿದ್ದಾರೆ.
ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10,000 ರನ್ ಗಳಿಸಿದ ವಿರಾಟ್ ಕೊಹ್ಲಿ ನಂತರ ರೋಹಿತ್ ಶರ್ಮಾ ಎರಡನೇ ವೇಗದ ಬ್ಯಾಟರ್ ಎನಿಸಬಹುದು.
213 ಏಕದಿನ ಪಂದ್ಯಗಳ 205 ಇನ್ನಿಂಗ್ಸ್‌ಗಳಲ್ಲಿ 10,000 ರನ್ ಮೈಲುಗಲ್ಲು ತಲುಪಿದ ನಂತರ ವಿರಾಟ್ ಕೊಹ್ಲಿ ವಿಶ್ವದಾಖಲೆ ಹೊಂದಿದ್ದಾರೆ. 266 ಏಕದಿನ ಪಂದ್ಯಗಳು ಮತ್ತು 259 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ಸಚಿನ್ ತೆಂಡೂಲ್ಕರ್ ಪ್ರಸ್ತುತ 2ನೇ ವೇಗದ ಬ್ಯಾಟರ್ ಎನಿಸಿದ್ದಾರೆ.
ಭಾರತದ ನಾಯಕ ರೋಹಿತ್ ಶರ್ಮಾ ಇದುವರೆಗೆ 243 ಏಕದಿನ ಪಂದ್ಯಗಳ 236 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಭಾರತ ಗುರುವಾರ ತನ್ನ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಆದರೆ ಟ್ರಿನಿಡಾಡ್‌ನಿಂದ ಆಗಮಿಸಿದ ತಂಡದ ಸದಸ್ಯರು ಹೆಚ್ಚುವರಿ ದಿನದ ವಿಶ್ರಾಂತಿಗೆ ವಿನಂತಿಸಿದ್ದಾರೆ.