ಉತ್ತರಪ್ರದೇಶ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ 2023ರ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ಒಂದು ಪಂದ್ಯದ ಕೊನೆಯ ಓವರ್‌ನಲ್ಲಿ ಐದು ಎಸೆತಗಳಲ್ಲಿ ಸತತ 5 ಸಿಕ್ಸರ್ ಬಾರಿಸಿ ತಮ್ಮ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು.
ರಿಂಕು ಸಿಂಗ್ ಇನ್ನು ಕೆಲವು ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದರು. ಇದೀಗ ಆಗಸ್ಟ್ 3ರಂದು ಪ್ರಾರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗಾಗಿ ಭಾರತ ತಂಡದಿಂದ ಚೊಚ್ಚಲ ಕರೆಯನ್ನು ಸ್ವೀಕರಿಸಲು ಸಜ್ಜಾಗಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯು ಶುಕ್ರವಾರ, ಜೂನ್ 23ರಂದು ರೋಹಿತ್ ಶರ್ಮಾ ನಾಯಕತ್ವದ ಏಕದಿನ ಮತ್ತು ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡಗಳನ್ನು ಪ್ರಕಟಿಸಿದೆ.
ಇದೇ ವೇಳೆ ಟೆಸ್ಟ್ ಮತ್ತು ಏಕದಿನ ಸರಣಿ ನಂತರದ ಟಿ20 ಸರಣಿಗೆ ಭಾರತ ತಂಡವನ್ನು ಇನ್ನೂ ಪ್ರಕಟಿಸಿಲ್ಲ. ಒಂದು ವೇಳೆ ಆಯ್ಕೆ ಸಮಿತಿಯು ರೋಹಿತ್ ಶರ್ಮಾಗೆ ವಿಶ್ರಾಂತಿ ನೀಡಲು ನಿರ್ಧರಿಸಿದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ನಾಯಕ ಹಾರ್ದಿಕ್ ಪಾಂಡ್ಯ ನೇತೃತ್ವದ ಟಿ20 ಭಾರತ ತಂಡಕ್ಕೆ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ನಂಬಿಕಸ್ಥ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ವೆಸ್ಟ್ ಇಂಡೀಸ್ ವಿರುದ್ಧದ ಟಿ20 ತಂಡದಲ್ಲಿ ರಿಂಕು ಸಿಂಗ್‌ಗೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.
2023ರ ವಿಶ್ವಕಪ್ ಬಳಿಕ ಈತನೇ ಭಾರತ ವೈಟ್ ಬಾಲ್ ತಂಡದ ನಾಯಕನಾಗಬೇಕು: ಮಾಜಿ ಮುಖ್ಯ ಕೋಚ್
ಐಪಿಎಲ್ 2023ರ 16ನೇ ಸೀಸನ್‌ನಲ್ಲಿ ರಿಂಕು ಸಿಂಗ್ ಆಡಿದ 14 ಪಂದ್ಯಗಳಲ್ಲಿ 59.25ರ ಸರಾಸರಿಯಲ್ಲಿ 149.52ರ ಸ್ಟ್ರೈಕ್ ರೇಟ್‌ನಲ್ಲಿ 474 ರನ್‌ಗಳನ್ನು ಗಳಿಸಿದ್ದಾರೆ.
ಇನ್ನು ರಿಂಕು ಸಿಂಗ್ ಅವರ ಕೆಕೆಆರ್ ತಂಡದ ಸಹ ಆಟಗಾರ ಉಮೇಶ್ ಯಾದವ್ ಅವರನ್ನು ಕೈಬಿಡಲಾಗಿಲ್ಲ. ಆದರೆ ವಾಸ್ತವವಾಗಿ ಗಾಯಗೊಂಡಿದ್ದಾರೆ ಎಂದು ವರದಿ ಹೇಳಿದೆ. "ಉಮೇಶ್ ಯಾದವ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಎನ್‌ಸಿಎನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ," ಎಂದು ಬಿಸಿಸಿಐ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಇದೇ ವೇಳೆ ಜುಲೈ 12ರಿಂದ ಆರಂಭವಾಗುವ ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಕೈಬಿಡಲಾಗಿರುವ ಚೇತೇಶ್ವರ ಪೂಜಾರ ಅವರಿಗೆ ಖಾಯಂ ಆಗಿ ಬಾಗಿಲು ಮುಚ್ಚಲಾಗಿಲ್ಲ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
"ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೂ ಮುನ್ನ 15 ತಿಂಗಳ ಕಾಲ ತಂಡದಿಂದ ಹೊರಗಿದ್ದ ಅಜಿಂಕ್ಯ ರಹಾನೆ ಅವರನ್ನು ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ತಂಡದ ಉಪನಾಯಕರನ್ನಾಗಿ ಮಾಡಲಾಗಿದೆ. ಯಾರು ಬೇಕಾದರೂ ಪುನರಾಗಮನ ಮಾಡಬಹುದು. ಯಾವುದೇ ಹಿರಿಯ ಆಟಗಾರನಿಗೆ ಬಾಗಿಲು ಮುಚ್ಚಲಾಗಿಲ್ಲ," ಎಂದು ವರದಿ ಸೇರಿಸಲಾಗಿದೆ.
ಇನ್ನು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ವೇಗಿ ಮೊಹಮ್ಮದ್ ಶಮಿ ಟಿ20 ಸರಣಿಯಿಂದಲೂ ವಿಶ್ರಾಂತಿ ಪಡೆಯುವ ಸಾಧ್ಯತೆ ಹೆಚ್ಚಳವಾಗಿದೆ.