ಶತಕ ಗಳಿಸದೆಯೇ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಶುಬ್ಮನ್ ಗಿಲ್!

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ಅದ್ಭುತ ಪ್ರದರ್ಶನ ನೀಡಿ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು ವೈಟ್‌ವಾಶ್ ಮಾಡಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ ಭಾರತ ತಂಡ. ಆದರೆ ಈ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಶುಬ್ಮನ್ ಗಿಲ್ ಶತಕಗಳಿಸುವ ಅವಕಾಶದಿಂದ ಕೇವಲ 2 ರನ್‌ಗಳಿಮದ ವಂಚಿತವಾದರು.
ಮಳೆಯ ಕಾರಣದಿಂದಾಗಿ ಭಾರತದ ಇನ್ನಿಂಗ್ಸ್ ಸ್ಥಗಿತಗೊಳಿಸಿದಾಗ ಗಿಲ್ 98 ರನ್‌ಗಳಿಸಿ ಅಜೇಯವಾಗಿದ್ದರು. 98 ಎಸೆತಗಳನ್ನು ಎದುರಿಸಿದ ಶುಬ್ಮನ್ ಗಿಲ್ 7 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ್ದರು. ಆದರೆ ಮಳೆ ಪಂದ್ಯಕ್ಕೆ ಅಡ್ಡಿಯುಂಟು ಮಾಡಿದ ಕಾರಣ ಅದ್ಭುತ ಶತಕವನ್ನು ಗಳಿಸುವ ಅವಕಾಶದಿಂದ ಭಾರತದ ಯುವ ಆಟಗಾರ ವಂಚಿತವಾಗಿದ್ದಾರೆ. ಈ ಮೂಲಕ ಶುಬ್ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿದು 90ರಲ್ಲಿ ಔಟಾಗದೆ ಉಳಿದ ಬ್ಯಾಟರ್‌ಗಳ ಪಟ್ಟಿಗೆ ಸೇರಿಕೊಂಡಿದ್ದಾರೆ.

ದಿಗ್ಗಜರ ಸಾಲಿಗೆ ಶುಬ್ಮನ್ ಗಿಲ್
ಶುಬ್ಮನ್ ಗಿಲ್ ವಿಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 98 ರನ್‌ಗಳಿಸಿ ಅಜೇಯವಾಗುಳಿದ ಕಾರಣ ದಿಗ್ಗಜರ ಆಟಗಾರರು ಇರುವ ವಿಶೇಷ ಪಟ್ಟಿಗೆ ಸೇರಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿದು 90ರಲ್ಲಿ ಔಟಾಗದೆ ಉಳಿದ ಭಾರತೀಯ ಆಟಗಾರರ ಪಟ್ಟಿಗೆ ಶುಬ್ಮನ್ ಗಿಲ್ ಕೂಡ ಸೇರಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಹಾಗೂ ಕ್ರಿಸ್ ಶ್ರೀಕಾಂತ್ ಕೂಡ ಇದ್ದಾರೆ.

90ರಲ್ಲಿ ಅಜೇಯವಾಗುಳಿದ ಆರಂಭಿಕ ಆಟಗಾರರು
ಕ್ರಿಸ್ ಶ್ರೀಕಾಂತ್ - 93* vs ಆಸ್ಟ್ರೇಲಿಯಾ, 1985, ಮೆಲ್ಬೋರ್ನ್
ಸುನಿಲ್ ಗವಾಸ್ಕರ್ - 92* vs ಆಸ್ಟ್ರೇಲಿಯಾ, 1986, ಸಿಡ್ನಿ
ಸಚಿನ್ ತೆಂಡೂಲ್ಕರ್ - 96* vs ಶ್ರೀಲಂಕಾ, 2009, ಕಟಕ್
ವೀರೇಂದ್ರ ಸೆಹ್ವಾಗ್ - 99* vs ಶ್ರೀಲಂಕಾ, 2010, ದಾಂಬುಲಾ
ಶಿಖರ್ ಧವನ್ - 97* vs ಇಂಗ್ಲೆಂಡ್, 2014, ಬರ್ಮಿಂಗ್‌ಹ್ಯಾಮ್
ಶುಬ್ಮನ್ ಗಿಲ್ - 98* vs ವೆಸ್ಟ್ ಇಂಡೀಸ್, 2022, ಟ್ರಿನಿಡಾಡ್

ನನ್ನ ನಿಯಂತ್ರಣದಲ್ಲಿರಲಿಲ್ಲ ಎಂದು ಬೇಸರಿಸಿದ ಗಿಲ್
ಇನ್ನು ಚೊಚ್ಚಲ ಶತಕ ಬಾರಿಸಲು ಅಸಾಧ್ಯವಾಗಿರುವ ವಿಚಾರವಾಗಿ ಶುಬ್ಮನ್ ಗಿಲ್ ಪ್ರತಿಕ್ರಿಯೆ ನೀಡಿದ್ದಾರೆ. "ಶತಕಗಳಿಸಬಹುದು ಎಂದು ನಾನು ಭಾವಿಸಿದ್ದೆ. ಆದರೆ ಮಳೆ ನನ್ನ ನಿಯಂತ್ರಣದಲ್ಲಿ ಇಲ್ಲ. ಮೊದಲ ಎರಡು ಪಂದ್ಯಗಳಲ್ಲಿ ವಿಕೆಟ್ ಕಳೆದುಕೊಂಡ ರೀತಿಯಿಂದಾಗಿ ನಾನು ಸಾಕಷ್ಟು ಬೇಸರಿಸಿಕೊಂಡಿದ್ದೆ. ಇಂದು ನಾನು ಎಸೆತಗಳಿಗೆ ಅನುಗುಣವಾಗಿ ಆಟವಾಡುವ ಪ್ರಯತ್ನ ನಡೆಸಿದ್ದೆ. ಈ ಮೂಲ ಇನ್ನಿಂಗ್ಸ್ ಬೆಳೆಸುವ ಪ್ರಯತ್ನ ಮಾಡಿದ್ದೆ. ನಾನು ಮತ್ತೊಂದು ಓವರ್‌ನಲ್ಲಿ ಶತಕವನ್ನು ಬಾರಿಸುವ ನಿರೀಕ್ಷೆಯಲ್ಲಿದ್ದೆ. ಇಲ್ಲಿ ಪಿಚ್ ಎಲ್ಲಾ ಮೂರು ಪಂದ್ಯಗಳಲ್ಲಿಯೂ ಅದ್ಭುತವಾಗಿ ವರ್ತಿಸಿದೆ. 30ನೇ ಓವರ್‌ನ ಬಳಿಕ ಚೆಂಡು ಹಿಡಿತಕ್ಕೆ ಸಿಗುತ್ತಿತ್ತು. ನನ್ನ ಪ್ರದರ್ಶನದಿಂದಾಗಿ ಖುಷಿಯಾಗಿದೆ" ಎಂದಿದ್ದಾರೆ ಶುಬ್ಮನ್ ಗಿಲ್.

ಐದು ಪಂದ್ಯಗಳ ಟಿ20 ಸರಣಿ
ಇದೀಗ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಐದು ಪಂದ್ಯಗಳ ಟಿ20 ಸರಣಿಯನ್ನಾಡಲು ಸಜ್ಜಾಗಿದೆ. ಚುಟಕು ಸರಣಿಗೆ ರೋಹಿತ್ ಶರ್ಮಾ ಸೇರಿದಂತೆ ಕೆಲ ಪ್ರಮುಖ ಆಟಗಾರರು ಮರಳಿದ್ದು ಸರಣಿಯ ಕುತೂಹಲ ಹೆಚ್ಚಾಗಿದೆ. ಆರ್ ಅಶ್ವಿನ್, ದಿನೇಶ್ ಕಾರ್ತಿಕ್, ರಿಷಭ್ ಪಂತ್, ಕುಲ್ದೀಪ್ ಯಾದವ್ ಮುಂತಾದ ಆಟಗಾರರು ಚುಟುಕು ಸರಣಿಯಲ್ಲಿ ಭಾರತದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಈ ಆಟಗಾರರು ಏಕದಿನ ಸರಣಿಯಿಂದ ಹೊರಗುಳಿದಿದ್ದರು.
ಭಾರತದ ಟಿ20 ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ದಿನೇಶ್ ಕಾರ್ತಿಕ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications