ಭಾನುವಾರ, ಆಗಸ್ಟ್ 13ರಂದು ಕೊನೆಯ ಪಂದ್ಯವನ್ನೂ ಸೋಲುವ ಮೂಲಕ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯನ್ನು ಭಾರತ ತಂಡ 3-2 ಅಂತರದಿಂದ ಕಳೆದುಕೊಂಡಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋತ ನಂತರ, ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಪುಟಿದೇದ್ದಿದ್ದ ಭಾರತ ತಂಡ ನಿರ್ಣಾಯಕ ಪಂದ್ಯದಲ್ಲಿ ಕೈಚೆಲ್ಲಿ ಕುಳಿತಿತು.
ಉಭಯ ತಂಡಗಳಿಗೆ ಗೆಲ್ಲಲೇಬೇಕಾಗಿದ್ದ ಐದನೇ ಪಂದ್ಯದಲ್ಲಿ ಅಂತಿಮವಾಗಿ, ರೋವ್ಮನ್ ಪೊವೆಲ್ ನಾಯಕತ್ವದ ಆತಿಥೇಯ ವೆಸ್ಟ್ ಇಂಡೀಸ್ ತಂಡ 9 ವಿಕೆಟ್‌ಗಲಿಂದ ಸೋಲಿಸಿ 3-2 ಅಂತರದಿಂದ ಸರಣಿ ಜಯಿಸಿತು.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ ಸೋಲು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ಎಲ್ಲ ಸ್ವರೂಪಗಳಾದ್ಯಂತ ಇತ್ತೀಚಿನ ತಿಂಗಳುಗಳಲ್ಲಿ ತಂಡಕ್ಕೆ ದೊಡ್ಡ ಸರಣಿ ಸೋಲಾಗಿದೆ.
ಪಂದ್ಯದ ನಂತರ ಮಾತನಾಡಿದ ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಸೋಲು ಬಹಳಷ್ಟು ವಿಷಯಗಳನ್ನು ಕಲಿಸುವ ಕಾರಣ, ಕೆಲವೊಮ್ಮೆ ಸೋಲುವುದು ಒಳ್ಳೆಯದಾಗಿರುತ್ತದೆ. ಭವಿಷ್ಯದಲ್ಲಿ ತಂಡದ ಪ್ರದರ್ಶನ ಸುಧಾರಿಸಲು ಈ ಅನುಭವವನ್ನು ಬಳಸುತ್ತೇವೆ ಎಂದು ಹೇಳಿದ್ದಾರೆ.
"ಟಿ20 ಪಂದ್ಯಗಳಲ್ಲಿ ಏನು ಮಾಡಬೇಕೆಂದು ಲೆಕ್ಕಾಚಾರ ಮಾಡಲು ನಮಗೆ ಸಾಕಷ್ಟು ಸಮಯವಿದೆ. ಕೆಲವೊಮ್ಮೆ ಸೋಲುವುದು ಒಳ್ಳೆಯದು, ಅದು ನಿಮಗೆ ಬಹಳಷ್ಟು ವಿಷಯಗಳನ್ನು ಕಲಿಸುತ್ತದೆ. ನಿಮ್ಮ ಆರೋಪಗಳನ್ನು ಒಪ್ಪಿಕೊಳ್ಳುತ್ತೇನೆ, ಧನಾತ್ಮಕವಾಗಿ ತೆಗೆದುಕೊಳ್ಳುತ್ತೇವೆ. ಒಂದು ತಂಡವಾಗಿ ನಾವು ಬಹಳಷ್ಟು ಕಲಿತಿದ್ದೇವೆ," ಎಂದು ಹಾರ್ದಿಕ್ ಪಾಂಡ್ಯ ಅಭಿಪ್ರಾಯಪಟ್ಟರು.

"ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ಗೆಲುವಿಗೆ ಅರ್ಹರಾಗಿದ್ದರು. ನಾವು ಸತತ ಎರಡು ಪಂದ್ಯಗಳನ್ನು ಗೆದ್ದ ನಂತರ, ಭಾನುವಾರ ಅವರು ನಮ್ಮ ಮೇಲೆ ಒತ್ತಡ ಹೇರಿದರು ಮತ್ತು ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದರು," ಎಂದು ವೆಸ್ಟ್ ಇಂಡೀಸ್ ತಂಡದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
"ಇಂದಿನ ಪಂದ್ಯ ಅತ್ಯಂತ ಏಕಪಕ್ಷೀಯ ಆಟದಂತೆ ತೋರುತ್ತಿತ್ತು. ಗೆಲ್ಲುವುದು ಮತ್ತು ಸೋಲುವುದು ಆಟದ ಒಂದು ಭಾಗವಾಗಿದೆ. ನಾವು ಕಲಿಕೆಯತ್ತಲೂ ಗಮನ ಹರಿಸಬೇಕು," ಎಂದು ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದರು.
ಚೊಚ್ಚಲ ಸರಣಿ ಆಡಿದ ಆಟಗಾರರ ಬಗ್ಗೆ ಹಾರ್ದಿಕ್ ಪಾಂಡ್ಯ ಫುಲ್ ಖುಷ್
ಭಾರತ ತಂಡದ ಪರ ಚೊಚ್ಚಲ ಟಿ20 ಸರಣಿ ಆಡಿದ ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಮುಖೇಶ್ ಕುಮಾರ್ ಅವರ ಪ್ರದರ್ಶನದ ಕುರಿತು ನಾಯಕ ಹಾರ್ದಿಕ್ ಪಾಂಡ್ಯ ಪ್ರಭಾವಿತರಾಗಿದ್ದಾರೆ.
ಈ ಸರಣಿಯಲ್ಲಿ ಮೂವರು ಚೊಚ್ಚಲ ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ ಮತ್ತು ತಮ್ಮ ಆಟದಲ್ಲಿ ನಂಬಿಕೆಯನ್ನು ಹೊಂದಿದ್ದಾರೆ. ತಂಡಕ್ಕೆ ಹೆಚ್ಚು ಅಗತ್ಯವಿರುವಾಗ ತಮ್ಮ ಉತ್ತಮ ಪ್ರದರ್ಶನ ನೀಡಲು ಮುಂದೆ ಬಂದಿದ್ದಾರೆ 29ರ ವರ್ಷದ ಹಾರ್ದಿಕ್ ಪಾಂಡ್ಯ ಮೆಚ್ಚುಗೆ ಸೂಚಿಸಿದರು.
ತಂಡದ ಪ್ರದರ್ಶನ ಬಗ್ಗೆ ನಾಯಕನಾಗಿ ನನಗೆ ಸಂತೋಷವಾಗಲಿಲ್ಲ. ಆದರೆ ಯುವ ಆಟಗಾರರು ತಮ್ಮ ಸಾಮರ್ಥ್ಯ ತೋರಿಸುವಲ್ಲಿ ಹಿಂದೆ ಬೀಳಲಿಲ್ಲ. ಭವಿಷ್ಯದಲ್ಲಿ ಇನ್ನಷ್ಟು ಪ್ರದರ್ಶನ ನೀಡುವ ಭರವಸೆ ಇದೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್‌ಗಳ ಸವಾಲಿನ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ 18 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿ ನಿರ್ಣಾಯಕ ಪಂದ್ಯವನ್ನು ಗೆದ್ದಿತು.
ವೆಸ್ಟ್ ಇಂಡೀಸ್ ತಂಡದ ಪರ ಬ್ರಾಂಡನ್ ಕಿಂಗ್ 55 ಎಸೆತಗಳಲ್ಲಿ 5 ಬೌಂಡರಿ ಮತ್ತು 6 ಸಿಕ್ಸರ್ ನೆರವಿನಿಂದ ಅಜೇಯ 85 ರನ್ ಬಾರಿಸಿ ಗೆಲುವಿನ ರೂವಾರಿಯಾದರು ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಭಾರತದ ಸೂರ್ಯಕುಮಾರ್ ಯಾದವ್ 45 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ಸಮೇತ 61 ರನ್ ಗಳಿಸಿ ತಂಡದ ಪರ ಏಕೈಕ ಗರಿಷ್ಠ ಸ್ಕೋರರ್ ಎನಿಸಿದರು.