ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಆರಂಬವಾಗಿದ್ದು ಮೊದಲ ಪಂದ್ಯ ಈಗಾಗಲೇ ಮುಕ್ತಾಯವಾಗಿದೆ. ಈ ಆರಂಭಿಕ ಪಂದ್ಯದಲ್ಲಿ ಎರಡು ತಂಡಗಳು ಕೂಡ ಪೈಪೋಟಿಯ ಪ್ರದರ್ಶನ ನೀಡಿತ್ತಾದರೂ ಭಾರತ ಈ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಚುಟುಕು ಮಾದರಿಯ ಸರಣಿಯಲ್ಲಿ ನೀರಸ ಆರಂಭ ಪಡೆದುಕೊಂಡಿದೆ.
ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಯಶಸ್ಸು ಸಾಧ್ಯವಾಗಲಿಲ್ಲ. ಹೀಗಾಗಿ 150 ರನ್‌ಗಳ ಸಾಧಾರಣ ಗುರಿ ಭಾರತ ತಂಡದ ಮುಂದಿದ್ದರೂ ಅದನ್ನು ತಲುಪುವಲ್ಲಿ ವಿಫಲವಾಯಿತು. ಹಾಗಾದರೆ ಈ ಪಂದ್ಯದಲ್ಲಿ ಸಾಕಷ್ಟು ಭರವಸೆ ಮೂಡಿಸಿದ್ದರೂ ಸಂಪೂರ್ಣವಾಗಿ ವಿಫಲವಾದ ಮೂವರು ಆಟಗಾರರು ಯಾರು? ಆ ಬಗ್ಗೆ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಟೀಮ್ ಇಂಡಿಯಾದ ಆರಂಭಿಕ ಆಟಗಾರನಾಗಿ ಎಲ್ಲಾ ಮಾದರಿಕಯಲ್ಲಿಯೂ ಭರವಸೆ ಮೂಡಿಸಿರುವ ಆಟಗಾರ ಶುಬ್ಮನ್ ಗಿಲ್. ಈ ಸರಣಿಗೂ ಮುನ್ನ ಕೊನೆಯ ಬಾರಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಪರವಾಗಿ ಕಣಕ್ಕಿಳಿದಿದ್ದ ಗಿಲ್ ಅಜೇಯ ಶತಕ ಬಾರಿಸಿ ಅಬ್ಬರಿಸಿದ್ದರು. ಹಾಗಾಗಿ ಈ ಸರಣಿಯಲ್ಲಿಯೂ ಸಾಕಷ್ಟು ನಿರೀಕ್ಷೆಗಳು ಗಿಲ್ ಮೇಲಿತ್ತು. ಆದರೆ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಅಕಿಲ್ ಹುಸೇನ್ ಎಸೆತಕ್ಕೆ ಮುನ್ನುಗ್ಗಿ ಬಾರಿಸಲು ಹೋಗಿ ಗಿಲ್ ನಿರಾಸೆ ಮೂಡಿಸಿದ್ದಾರೆ.
ಇನ್ನು ಈ ಪಂದ್ಯದಲ್ಲಿ ಶುಬ್ಮನ್ ಗಿಲ್‌ಗೆ ಜೊತೆಗಾರನಾಗಿ ಕಣಕ್ಕಿಳಿದ ಇಶಾನ್ ಕಿಶನ್ ಕೂಡ ನಿರಾಸೆ ಮುಡಿಸಿದ್ದಾರೆ. ಏಕದಿನ ಸರಣಿಯ ಮೂರು ಪಂದ್ಯಗಳಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಮೂರು ಅರ್ದ ಶತಕ ಸಿಡಿಸಿದ್ದ ಇಶಾನ್ ಕಿಶನ್ ಆ ಫಾರ್ಮ್ ಮುಂದುವರಿಸಲು ವಿಫಲವಾಗಿದ್ದಾರೆ. ಪವರ್‌ಪ್ಲೇ ಮುಕ್ತಾಯಕ್ಕೂ ಮುನ್ನವೇ ವಿಕೆಟ್ ಕಳೆದುಕೊಳ್ಳುವ ಮೂಲಕ ಇವರು ಕೂಡ ಟೀಮ್ ಇಂಡಿಯಾದ ಉಳಿದ ಆಟಗಾರರ ಮೇಲಿನ ಒತ್ತಡವನ್ನು ಹೆಚ್ಚಿಸಿದರು. ಇನ್ನು ಇಶಾನ್ ಕಿಶನ್ ಅವರ ಟಿ20 ದಾಖಲೆ ಕಳಪೆಯಾಗಿದೆ ಎಂಬುದು ಗಮನಿಸಬೇಕಾದ ಅಂಶ. ಅದ್ಭುತ ಸಾಮರ್ಥ್ಯವಿದ್ದರೂ ಈ ಯುವ ಆಟಗಾರ ಕಳೆದ 15 ಇನ್ನಿಂಗ್ಸ್‌ಗಳಲ್ಲಿ ಯಾವುದೇ ಅರ್ಧ ಶತಕ ಸಿಡಿಸಿಲ್ಲ. ಅದರಲ್ಲೂ ಕಳೆದ ಆರು ಪಂದ್ಯಗಳಲ್ಲಿ ಐದು ಬಾರಿ ಇಶಾನ್ ಒಂದಂಕಿಗೆ ವಿಕೆಟ್ ಕಳೆದುಕೊಂಡಿದ್ದಾರೆ.
ಭಾರತ ಈ ಪಂದ್ಯದಲ್ಲಿ ಕೇವಲ ಇಬ್ಬರು ಸ್ಪೆಶಲಿಸ್ಟ್ ವೇಗದ ಬೌಲರ್‌ಗಳೊಂದಿಗ ಕಣಕ್ಕಿಳಿದಿತ್ತು. ಅಕ್ಷರ್ ಪಟೇಲ್ ಬ್ಯಾಟಿಂಗ್ ಆಲ್‌ರೌಂಡರ್ ಆಗಿ ಸ್ಪಿನ್ ವಿಭಾಗದಲ್ಲಿ ತಂಡಕ್ಕೆ ನೆರವು ನೀಡುವ ನಿರೀಕ್ಷೆಹೊಂದಿದ್ದರು. ಆದರೆ ಅಕ್ಷರ್ ಪಟೇಲ್ ಕೇವಲ ಎರಡು ಓವರ್‌ಗಳ ಬೌಲಿಂಗ್‌ನಲ್ಲಿ 22 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯೆನಿಸಿದರು. ಇನ್ನು ಬ್ಯಾಟಿಂಗ್‌ನಲ್ಲಿಯೂ ಅಕ್ಷರ್ ಕೆಳ ಕ್ರಮಾಂಖದಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾದರು.