ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಗುರುವಾರದಿಂದ ಆರಂಭವಾಗಲಿದೆ. ಟೆಸ್ಟ್ ಹಾಗೂ ಏಕದಿನ ಸರಣಿಗಳನ್ನು ಗೆದ್ದುಕೊಂಡಿರುವ ಟೀಮ್ ಇಂಡಿಯಾ ಟೆಸ್ಟ್ ಸರಣಿಯಲ್ಲಿಯೂ ಅಂಥಾದ್ದೇ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದು ಯುವ ಪಡೆಯೊಂದಿಗೆ ಹಾರ್ದಿಕ್ ಬಳಗ ಮಿಂಚಲು ಸಜ್ಜಾಗಿದೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ಟಿ20 ಸರಣಿಯಿಂದಲೂ ಹೊರಗುಳಿದಿದ್ದು ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಭಾರತ ತಂಡ ಕಣಕ್ಕಿಳಿಯುತ್ತಿದೆ. ಇನ್ನು ಈ ಸರಣಿಯಲ್ಲಿ ಕೆಲ ಯುವ ಆಟಗಾರರಿಗೆ ಅವಕಾಶ ದೊರೆಯುತ್ತಿದ್ದು ಚುಟುಕು ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಸಜ್ಜಾಗುತ್ತಿದ್ದಾರೆ. ಇನ್ನು ಈ ಐದು ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾಗೆ ಕೆಲ ಆಟಗಾರರು ವೈಯಕ್ತಿಕ ಮೈಲಿಗಲ್ಲಿನ ಮೇಲೆ ಕಣ್ಣಿಟ್ಟಿದ್ದಾರೆ.

ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಏಕದಿನ ಸರಣಿಯಲ್ಲಿ ಸಂಪೂರ್ಣವಾಗಿ ಬೆಂಚ್ ಕಾದಿದ್ದರು. ಕುಲ್‌ದೀಪ್ ಯಾದವ್ ಸರಣಿಯಲ್ಲಿ ಅವಕಾಶ ಗಿಟ್ಟಿಸಿಕೊಂಡ ಕಾರಣ ಚಹಲ್‌ಗೆ ಅವಕಾಶ ದೊರೆತಿರಲಿಲ್ಲ. ಆದರೆ ಟಿ20 ಸರಣಿಯಲ್ಲಿ ಚಾಹಲ್‌ಗೆ ಆಡುವ ಬಳಗದಲ್ಲಿ ಅವಕಾಶ ದೊರೆಯುವ ಸಾಧ್ಯತೆಗಳು ಹೆಚ್ಚಿದ್ದು ಈ ಸಂದರ್ಭದಲ್ಲಿ ಅವರು ಅಂತಾರಾಷ್ಟ್ರೀಯ ಟಿ0 ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಮೈಲಿಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ. ಆಡಿರುವ 75 ಪಂದ್ಯಗಳಲ್ಲಿ ಚಾಹಲ್ 91 ವಿಕೆಟ್‌ಗಳನ್ನು ಪಡೆದುಕೊಂಡಿದ್ದು ಇನ್ನು 9 ವಿಕೆಟ್‌ಗಳು ಈ ಮೈಲಿಗಲ್ಲು ಸಾಧಿಸಲು ಅಗತ್ಯವಿದೆ. ಈ ಸಾಧನೆ ಮಾಡುವ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಅವಕಾಶ ಚಾಹಲ್ ಮುಂದಿದ್ದು ವಿಶ್ವದಲ್ಲಿ 8ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್‌ಗೆ ಆಡುವ ಬಳಗದಲ್ಲಿ ಅವಕಾಶ ದೊರೆಯುವ ಬಗ್ಗೆ ಸ್ಪಷ್ಟತೆಯಿಲ್ಲ. ಯುವ ಆಟಗಾರರಿಂದ ಸಾಕಷ್ಟು ಸ್ಪರ್ಧೆಗಳು ಇರುವ ಕಾರಣ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಸಾಕಷ್ಟು ಹರಸಾಹಸಪಡಬೇಕಿದೆ. ಆದರೆ ಅವಕಾಶ ದೊರೆತಾದ ಕನಿಷ್ಠ 21 ರನ್‌ಗಳನ್ನು ಗಳಿಸಿದರೆ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳ ಮೈಲಿಗಲ್ಲು ದಾಟಲಿದ್ದಾರೆ. ಈವರೆಗೆ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ 241 ಪಂದ್ಯಗಳ 234 ಇನ್ನಿಂಗ್ಸ್‌ಗಳಲ್ಲಿ ಆಡಿದ್ದು 5979 ರನ್‌ಗಳನ್ನು ಕಲೆಹಾಕಿದ್ದಾರೆ. 28.60 ಸರಾಸರಿ ಹೊಂದಿದ್ದು ಮೂರು ಶತಕ ಹಾಗೂ 38 ಅರ್ಧ ಶತಕ ಸಿಡಿಸಿದ್ದಾರೆ.
ಇನ್ನು ಟೀಮ್ ಇಂಡಿಯಾದ ಯುವ ಆಟಗಾರ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಮಟ್ಟದಲ್ಲಿ 17 ಟಿ20 ಪಂದ್ಯಗಳನ್ನು ಆಡಿದ ಅನುಭವ ಮಾತ್ರವೇ ಹೊಂದಿದ್ದರು ಕೂಡ ಒಟ್ಟಾರೆಯಾಗಿ 167 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಒಟ್ಟಾರೆಯಾಗಿ ಟಿ20 ಮಾದರಿಯಲ್ಲಿ ಇಶಾನ್ ಕಿಶನ್ ಈವರೆಗೆ 4292 ರನ್‌ಗಳನ್ನು ಗಳಿಸಿದ್ದು 3 ಶತಕ ಹಾಗೂ 24 ಅರ್ಧ ಶತಕ ಬಾರಿಸಿದ್ದಾರೆ. ಈ ಸಂದರ್ಭದಲ್ಲಿ ಅವರು 185 ಸಿಕ್ಸರ್‌ಗಳನ್ನು ಬಾರಿಸಿದ್ದು ಟಿ20 ಮಾದರಿಯಲ್ಲಿ 200 ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳಲು ಇನ್ನು ಕೇವಲ 15 ಸಿಕ್ಸರ್‌ಗಳ ಅಗತ್ಯ ಮಾತ್ರವೇ ಇದೆ.
ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಅಕ್ಷರ್ ಪಟೇಲ್ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಆಡುವ ಅವಕಾಶ ಪಡೆದುಕೊಂಡಿದ್ದರು. ಆದರೆ ಟಿ20 ಸರಣಿಯಲ್ಲಿ ಎಲ್ಲಾ ಐದು ಪಂದ್ಯಗಳಲ್ಲಿಯೂ ಅವರು ಅವಕಾಶ ಗಿಟ್ಟಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇದು ಅವರಿಗೆ ಟಿ20 ಮಾದರಿಯಲ್ಲಿ 200 ವಿಕೆಟ್‌ಗಳ ಮೈಲಿಗಲ್ಲು ದಾಟುವ ಅವಕಾಶ ನೀಡುವ ಸಾಧ್ಯತೆಯಿದೆ. ಸದ್ಯ ಅಕ್ಷರ್ ಪಟೇಲ್ ಟಿ20 ಮಾದರಿಯಲ್ಲಿ 188 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.
ಕಳೆದ ವರ್ಷ ಎಲ್ಲಾ ತಂಡಗಳು ಕೂಡ ಟಿ20 ಸರಣಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಆಡಿದ್ದವು. ಅದಕ್ಕೆ ಕಾರಣ ಟಿ20 ವಿಶ್ವಕಪ್. ಟೀಮ್ ಇಂಡಿಯಾ ಪರವಾಗಿ ಸೂರ್ಯಕುಮಾರ್ ಯಾದವ್ ಕಳೆದ ವರ್ಷ ಅಮೋಘ ಪ್ರದರ್ಶನ ನೀಡಿದ್ದು ಟಿ20 ಮಾದರಿಯಲ್ಲಿ ನಂಬರ್ 1 ಬ್ಯಾಟರ್ ಆಗಿಯೂ ಹೊರಹೊಮ್ಮಿದ್ದಾರೆ. ಇನ್ನು ಕಳೆದ ವರ್ಷ ಸೂರ್ಯಕುಮಾರ್ ಯಾದವ್ ಟಿ20ಐನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದೀಗ ಈ ಬಾರಿ ಮತ್ತೆ ಆ ಸಾಧನೆ ಮಾಡಿವ ಅವಕಾಶವನ್ನು ಹೊಂದಿದ್ದಾರೆ ಸೂರ್ಯಕುಮಾರ್ ಯಾದವ್. ಈ ವರ್ಷ ಚುಟುಕು ಮಾದರಿಯಲ್ಲಿ ಸೂರ್ಯ 16 ಸಿಕ್ಸರ್‌ಗಳನ್ನು ಬಾರಿಸಿದ್ದು 20 ಸಿಕ್ಸರ್ ಸಿಡಿಸಿರುವ ಪೋರ್ಚುಗಲ್ ಕ್ರಿಕೆಟಿಗ ಕುಲ್‌ದೀಪ್ ಘೋಲಿಯಾ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು ಇದನ್ನು ಹಿಂದಿಕ್ಕುವ ಅದ್ಭುತ ಅವಕಾಶ ಹೊಂದಿದ್ದಾರೆ.