ಭಾರತ ತಂಡದ ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ ಅವರು ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಸರಣಿಯ ಮೊದಲ ಮೂರು ಟಿ20 ಪಂದ್ಯಗಳಲ್ಲಿ 139 ರನ್ ಗಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅದ್ಭುತವಾಗಿ ಚೊಚ್ಚಲ ಪ್ರವೇಶ ಮಾಡಿದ್ದಾರೆ.
ಮೊದಲ 3 ಪಂದ್ಯಗಳಲ್ಲಿ 172 ರನ್ ಗಳಿಸಿರುವ ದೀಪಕ್ ಹೂಡಾ ನಂತರ, ತಿಲಕ್ ವರ್ಮಾ ಈಗಾಗಲೇ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಎರಡು ಪಂದ್ಯಗಳು ಈ ವಾರಾಂತ್ಯದಲ್ಲಿ ಯುಎಸ್‌ಎನ ಫ್ಲೋರಿಡಾದ ಫೋರ್ಟ್ ಲಾಡರ್‌ಡೇಲ್‌ನಲ್ಲಿ ನಡೆಯಲಿವೆ. ತಿಲಕ್ ವರ್ಮಾ ಅವರು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಬೃಹತ್ ದಾಖಲೆಯನ್ನು ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ.
2020-21ರಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ವಿರಾಟ್ ಕೊಹ್ಲಿ 3 ಅರ್ಧಶತಕಗಳೊಂದಿಗೆ 231 ರನ್ ಗಳಿಸುವ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆಯನ್ನು ಹೊಂದಿದ್ದಾರೆ.
ಇನ್ನು ಮುಂಬೈ ಇಂಡಿಯನ್ಸ್ ಬ್ಯಾಟರ್ ತಿಲಕ್ ವರ್ಮಾಗೆ ಕೊನೆಯ ಎರಡು ಟಿ20 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯ ದಾಖಲೆಯನ್ನು ಅಳಿಸಿ ಹಾಕಲು ಕೇವಲ 94 ರನ್‌ಗಳ ಅಗತ್ಯವಿದೆ. ಇದು ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲಿ ನಾಲ್ಕನೇ ಅತ್ಯುತ್ತಮವಾಗಿದೆ.

ಭಾರತದ ಇನ್ನೊಬ್ಬ ಬ್ಯಾಟರ್ ಕೆಎಲ್ ರಾಹುಲ್ ಅವರು 2019-20ರ ಟಿ20 ಸರಣಿಯಲ್ಲಿ ನ್ಯೂಜಿಲೆಂಡ್ ವಿರುದ್ಧ 224 ರನ್ ಗಳಿಸುವ ಮೂಲಕ 5ನೇ ಸ್ಥಾನದಲ್ಲಿದ್ದಾರೆ.
2022-23ರ ಟಿ20 ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ 290 ರನ್ ಗಳಿಸಿದ ನ್ಯೂಜಿಲೆಂಡ್‌ನ ಮಾರ್ಕ್ ಚಾಪ್‌ಮನ್ ಅವರು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವದಾಖಲೆ ತಮ್ಮದಾಗಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ 2020-21ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 255 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 2021-22ರ ಸರಣಿಯಲ್ಲಿ ಜಿಂಬಾಬ್ವೆ ವಿರುದ್ಧ 234 ರನ್‌ಗಳೊಂದಿಗೆ ಐರ್ಲೆಂಡ್‌ನ ಪಾಲ್ ಸ್ಟಿರ್ಲಿಂಗ್ ಮೂರನೇ ಸ್ಥಾನ ಹೊಂದಿದ್ದಾರೆ.
1. ಮಾರ್ಕ್ ಚಾಪ್‌ಮನ್ (ನ್ಯೂಜಿಲೆಂಡ್) - 2022-23ರಲ್ಲಿ ಪಾಕಿಸ್ತಾನ ವಿರುದ್ಧ 290 ರನ್
2. ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ) - 2020-21ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 255 ರನ್
3. ಪಾಲ್ ಸ್ಟಿರ್ಲಿಂಗ್ (ಐರ್ಲೆಂಡ್) - 2021-22ರಲ್ಲಿ ಜಿಂಬಾಬ್ವೆ ವಿರುದ್ಧ 234 ರನ್
4. ವಿರಾಟ್ ಕೊಹ್ಲಿ (ಭಾರತ) - 2020-21ರಲ್ಲಿ ಇಂಗ್ಲೆಂಡ್ ವಿರುದ್ಧ 231 ರನ್
5. ಕೆಎಲ್ ರಾಹುಲ್ (ಭಾರತ) - 2019-20ರಲ್ಲಿ ನ್ಯೂಜಿಲೆಂಡ್ ವಿರುದ್ಧ 227 ರನ್
ಇದೆ ವೇಳೆ ಭಾರತ ತಂಡದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಯುವ ಪ್ರತಿಭೆ ತಿಲಕ್ ವರ್ಮಾ ಅವರಲ್ಲಿ ನಂಬಿಕೆಯನ್ನು ತೋರಿಸಬೇಕು ಮತ್ತು ಅವರನ್ನು 2023ರ ಏಕದಿನ ವಿಶ್ವಕಪ್ ಭಾರತ ತಂಡಕ್ಕೆ ಸೇರಿಸಿಕೊಳ್ಳುವಂತೆ ರಾಷ್ಟ್ರೀಯ ಆಯ್ಕೆ ಸಮಿತಿ ಮತ್ತು ತಂಡದ ಮ್ಯಾನೇಜ್‌ಮೆಂಟ್ ಅನ್ನು ಒತ್ತಾಯಿಸಿದ್ದಾರೆ.
ತಿಲಕ್ ವರ್ಮಾ ಬಹು ಬ್ಯಾಟರ್‌ಗಳೊಂದಿಗೆ ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆಗಳಿಗೆ ಉತ್ತರವಾಗಬಲ್ಲರು. ಏಕೆಂದರೆ, ಕೆಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಅವರು ಗಾಯಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ.
ರವಿಚಂದ್ರನ್ ಅಶ್ವಿನ್ ಅವರ ಹೇಳಿಕೆಯನ್ನು ಆಯ್ಕೆ ಸಮಿತಿ ಮಾಜಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್ ಸಹ ಬೆಂಬಲಿಸಿದ್ದಾರೆ. ವಿಶ್ವಕಪ್ ವೇಳೆಗೆ ಶ್ರೇಯಸ್ ಅಯ್ಯರ್ ಪುನರಾಗಮನ ಮಾಡಲು ವಿಫಲವಾದರೆ, ತಿಲಕ್ ವರ್ಮಾ ಅವರನ್ನು ಅಂತಿಮ 15ರಲ್ಲಿ ನೋಡಲು ಮನಸ್ಸಿಲ್ಲ, ಆಡುವ 11ರ ಬಳಗದಲ್ಲಿರಬೇಕು ಎಂದಿದ್ದಾರೆ.
20 ವರ್ಷದ ಹೈದರಾಬಾದ್ ಎಡಗೈ ಆಟಗಾರ ತಿಲಕ್ ವರ್ಮಾ ವೆಸ್ಟ್ ಇಂಡೀಸ್‌ನಲ್ಲಿ ಮೂರು ಟಿ20 ಪಂದ್ಯಗಳಲ್ಲಿ 39, 50 ಮತ್ತು 49 ರನ್‌ಗಳೊಂದಿಗೆ ಎಲ್ಲರ ಗಮನ ಸೆಳೆದಿದ್ದಾರೆ.
"ತಿಲಕ್ ವರ್ಮಾ ಅವರು ಗಮನಾರ್ಹವಾಗಿ ಎಡಗೈ ಬ್ಯಾಟ್ಸ್‌ಮನ್ ಮತ್ತು ಟೀಮ್ ಇಂಡಿಯಾದ ಆಡುವ ಬಳಗದಲ್ಲಿ ಎಡಗೈ ಆಟಗಾರರ ಕೊರತೆಯಿದೆ. ರವೀಂದ್ರ ಜಡೇಜಾ ಅಗ್ರ 7ರಲ್ಲಿರುವ ಏಕೈಕ ಎಡಗೈ ಬ್ಯಾಟರ್," ಎಂದು ರವಿಚಂದ್ರನ್ ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.