IND vs WI: ಭಾರತ ವಿರುದ್ಧದ ಏಕದಿನ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ; ಸ್ಫೋಟಕ ಬ್ಯಾಟರ್ ವಾಪಸ್
ಸೋಮವಾರ, ಜುಲೈ 24ರಂದು ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್ ಓವಲ್‌ನಲ್ಲಿ ಮುಕ್ತಾಯಗೊಂಡ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮಳೆಯ ಕಾರಣದಿಂದ ಡ್ರಾನಲ್ಲಿ ಅಂತ್ಯಗೊಂಡಿತು.
ಡ್ರಾ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಲ್ಲಿ ವಶಪಡಿಸಿಕೊಂಡಿತು. ಇದೀಗ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ವೆಸ್ಟ್ ಇಂಡೀಸ್ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿ ಆಡಲಿದ್ದು, ಗೆಲುವಿನೊಂದಿಗೆ 2023ರ ಐಸಿಸಿ ಏಕದಿನ ವಿಶ್ವಕಪ್ ಹಾದಿಯನ್ನು ಪ್ರಾರಂಭಿಸಲು ನೋಡುತ್ತಿದೆ.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಗುರುವಾರ, ಜುಲೈ 27ರಂದು ನಡೆಯಲಿದೆ.
ಆತಿಥೇಯ ವೆಸ್ಟ್ ಇಂಡೀಸ್ ತಮ್ಮ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಏಕದಿನ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದು, ಸದ್ಯ ಅವರ ಪರಿಸ್ಥಿತಿ ಹೀನಾಯ ಸ್ಥಿತಿಯಲ್ಲಿದೆ. ನಿರಾಶಾದಾಯಕ ಏಕದಿನ ವಿಶ್ವಕಪ್ 2023ರ ಅರ್ಹತಾ ಪಂದ್ಯಾವಳಿಯ ಇಬ್ಬರು ಆಟಗಾರರಾದ ನಿಕೋಲಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಅವರನ್ನು ಭಾರತದ ವಿರುದ್ಧ ಏಕದಿನ ಸರಣಿಗೆ ಕೈಬಿಡಲಾಗಿದೆ.
ಕಳೆದ ತಿಂಗಳು ಜಿಂಬಾಬ್ವೆಯಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಅರ್ಹತಾ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಸ್ಫೋಟಕ ಎಡಗೈ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಅವರು ವೆಸ್ಟ್ ಇಂಡೀಸ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ.
ಮುಂಬರುವ ಏಕದಿನ ಸರಣಿ ಮತ್ತು ಐದು ಪಂದ್ಯಗಳ ಟಿ20 ಸರಣಿಗಾಗಿ ವೈಟ್-ಬಾಲ್ ಆಟಗಾರರನ್ನು ಸಿದ್ಧಪಡಿಸಲು ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ ನಾಲ್ಕು ದಿನಗಳ ಶಿಬಿರದ ನಂತರ, 15 ಸದಸ್ಯರ ವೆಸ್ಟ್ ಇಂಡೀಸ್ ತಂಡವನ್ನು ಮಂಗಳವಾರ, ಜುಲೈ 25ರಂದು ಪ್ರಕಟಿಸಲಾಯಿತು.
ವೆಸ್ಟ್ ಇಂಡೀಸ್ ಮಂಡಳಿ ಆಯ್ಕೆಗಾರರು ಎಡಗೈ ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೆಯರ್ ಮತ್ತು ವೇಗದ ಬೌಲರ್ ಒಶಾನೆ ಥಾಮಸ್ ಅವರಿಗೆ ತಂಡಕ್ಕೆ ವಾಪಸ್ ಆಗಲು ಕರೆ ಮಾಡಿದ್ದಾರೆ. ಇನ್ನು ವೇಗದ ಬೌಲರ್ ಜೇಡನ್ ಸೀಲ್ಸ್ ಮತ್ತು ಲೆಗ್ ಸ್ಪಿನ್ನರ್ ಯಾನಿಕ್ ಕ್ಯಾರಿಯಾ ಅವರ ಪುನರ್ವಸತಿ ನಂತರ ತಂಡಕ್ಕೆ ಸೇರಿಸಲಾಗಿದೆ. ಅಲ್ಲದೆ, ಎಡಗೈ ಸ್ಪಿನ್ನರ್ ಗುಡಾಕೇಶ್ ಮೋಟಿ ಕೂಡ ಗಾಯದಿಂದ ಚೇತರಿಸಿಕೊಂಡಿದ್ದು, ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
"ನಾವು ಒಶಾನೆ ಥಾಮಸ್ ಮತ್ತು ಶಿಮ್ರಾನ್ ಹೆಟ್ಮೆಯರ್ ಅವರನ್ನು ಮತ್ತೆ ರಾಷ್ಟ್ರೀಯ ತಂಡಕ್ಕೆ ಸ್ವಾಗತಿಸುತ್ತೇವೆ. ಇಬ್ಬರೂ ಈ ಮೊದಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವು ಯಶಸ್ಸಿನೊಂದಿಗೆ ಆಡಿದ್ದಾರೆ ಮತ್ತು ಅವರು ತಂಡಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತಾರೆ ಎಂದು ನಾವು ನಂಬುತ್ತೇವೆ," ಎಂದು ಮುಖ್ಯ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಹೇಳಿದ್ದಾರೆ.
"ಓಶಾನೆ ಥಾಮಸ್ ವೇಗದ ಬೌಲಿಂಗ್ ಮುನ್ನಡೆಸಲಿದ್ದು, ಹೊಸ ಚೆಂಡಿನೊಂದಿಗೆ ಸಂಭಾವ್ಯ ವಿಕೆಟ್-ಟೇಕರ್ ಆಗಿದ್ದಾನೆ. ಶಿಮ್ರಾನ್ ಹೆಟ್ಮೆಯರ್ ಬ್ಯಾಟಿಂಗ್ ಶೈಲಿಯು, ವಿಶೇಷವಾಗಿ ಇನ್ನಿಂಗ್ಸ್‌ನ ಮಧ್ಯಮ ಹಂತದಲ್ಲಿ ಪ್ರಮುಖವಾಗಿದೆ ಮತ್ತು ಆತ ಸಂಭಾವ್ಯ ಫಿನಿಶರ್ ಕೂಡ ಆಗಿದ್ದಾರೆ," ಎಂದು ಡೆಸ್ಮಂಡ್ ಹೇನ್ಸ್ ಕ್ರಿಕೆಟ್ ವೆಸ್ಟ್ ಇಂಡೀಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
2023ರ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆಡಿದ 14 ಪಂದ್ಯಗಳಲ್ಲಿ ಶಿಮ್ರಾನ್ ಹೆಟ್ಮೆಯರ್ ಒಂದು ಅರ್ಧಶತಕ ಮತ್ತು 152.28 ಸ್ಟ್ರೈಕ್-ರೇಟ್‌ನೊಂದಿಗೆ 300 ರನ್ ಗಳಿಸಿದರು. ಆದರೆ ಸಂಜು ಸ್ಯಾಮ್ಸನ್ ಬಳಗ ಪ್ಲೇಆಫ್ ಹಂತಕ್ಕೆ ಪ್ರವೇಶಿಸಲು ವಿಫಲವಾಯಿತು.
ಭಾರತ ವಿರುದ್ಧದ ಏಕದಿನ ಸರಣಿಗೆ ವೆಸ್ಟ್ ಇಂಡೀಸ್ ತಂಡ
ಶಾಯ್ ಹೋಪ್ (ನಾಯಕ), ರೋವ್ಮನ್ ಪೊವೆಲ್ (ಉಪನಾಯಕ), ಅಲಿಕ್ ಅಥಾನಾಜೆ, ಯಾನಿಕ್ ಕ್ಯಾರಿಯಾ, ಕೀಸಿ ಕಾರ್ಟಿ, ಡೊಮಿನಿಕ್ ಡ್ರೇಕ್ಸ್, ಶಿಮ್ರಾನ್ ಹೆಟ್ಮೆಯರ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಗುಡಾಕೇಶ್ ಮೋಟಿ, ಜೇಡನ್ ಸೀಲ್ಸ್, ರೊಮಾರಿಯೊ ಶೆಫರ್ಡ್, ಕೆವಿನ್ ಸಿಂಕ್ಲೇರ್, ಓಶೇನ್ ಥಾಮಸ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications