
ಬೆಂಗಳೂರು, ಜೂನ್ 15: ಏಕದಿನ ಮತ್ತು ಟಿ 2೦ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿ ಗಮನ ಸೆಳೆದಿದ್ದ ಅಫ್ಘಾನಿಸ್ತಾನ, ತನ್ನ ಟೆಸ್ಟ್ ಕ್ರಿಕೆಟ್‌ನ ಪಾದಾರ್ಪಣೆಯ ಐತಿಹಾಸಿಕ ಪಂದ್ಯದಲ್ಲಿ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 262 ರನ್‌ಗಳ ಸೋಲು ಕಂಡಿದೆ.
ಎರಡನೆಯ ಇನ್ನಿಂಗ್ಸ್‌ನಲ್ಲಿ ಅಫ್ಘಾನಿಸ್ತಾನ ಕೇವಲ 103 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಅನುಭವಿ ಭಾರತ ತಂಡಕ್ಕೆ ಸುಲಭದ ತುತ್ತಾಯಿತು.
ಭಾರತ vs ಆಫ್ಘಾನಿಸ್ತಾನ ಸ್ಕೋರ್ ಕಾರ್ಡ್
ಎರಡೂ ಇನ್ನಿಂಗ್ಸ್‌ಗಳಲ್ಲಿ ತೀವ್ರ ಹೆಣಗಾಡಿ ನೂರರ ಗಡಿ ದಾಟಿದ್ದೇ ಅದರ ಸಾಧನೆಯಾಯಿತು. ಚಿನ್ನಸ್ವಾಮಿ ಅಂಗಳದಲ್ಲಿ ಒಂದೇ ದಿನದಲ್ಲಿ 24 ವಿಕೆಟ್‌ಗಳು ಪತನಗೊಂಡವು.
ಐದು ದಿನಗಳ ಪಂದ್ಯಕ್ಕೆ ಮೊದಲ ದಿನ ಮಳೆಯ ಅಡ್ಡಿಪಡಿಸಿದ್ದರೂ ಎರಡೇ ದಿನಕ್ಕೆ ಪಂದ್ಯ ಮುಕ್ತಾಯವಾಯಿತು. ಈ ಮೂಲಕ ಅಫ್ಘಾನಿಸ್ತಾನ ಟೆಸ್ಟ್ ಬದುಕನ್ನು ಕಹಿ ಅನುಭವದೊಂದಿಗೆ ಆರಂಭಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 109 ರನ್‌ಗೆ ಆಲೌಟ್ ಆಗಿ 365 ರನ್‌ಗಳ ಹಿನ್ನಡೆ ಅನುಭವಿಸಿದ ಅಫ್ಘಾನಿಸ್ತಾನದ ತಂಡದ ಮೇಲೆ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಫಾಲೊಆನ್ ಹೇರಿದರು. ಎರಡನೆಯ ಇನ್ನಿಂಗ್ಸ್‌ನಲ್ಲಿಯೂ ಪಟಪಟನೆ ವಿಕೆಟ್‌ಗಳನ್ನು ಕಳೆದುಕೊಂಡ ಆಫ್ಘನ್ನರು ಪ್ರತಿರೋಧ ತೋರುವ ಪ್ರಯತ್ನ ಮಾಡಲಿಲ್ಲ.
ಏಕದಿನ ಮತ್ತು ಟಿ 10ಯ ಗುಂಗಿನಿಂದ ಹೊರಬರದ ಆಫ್ಘನ್ ಆಟಗಾರರು ದೀರ್ಘಾವಧಿಯ ಕ್ರಿಕೆಟ್ ಆಡಲು ಇನ್ನೂ ಮಾನಸಿಕವಾಗಿ ಸಿದ್ಧತೆ ನಡೆಸಬೇಕಾಗಿದೆ ಎಂಬುದು ಈ ಪಂದ್ಯದಿಂದ ಸಾಬೀತಾಯಿತು.
ಭಾರತದ ವಿರುದ್ಧದ ಮೊದಲ ಇನ್ನಿಂಗ್ಸ್ ಬೌಲಿಂಗ್‌ನಲ್ಲಿ ಕೊನೆಯ ಹಂತದಲ್ಲಿ ತಿರುಗೇಟು ನೀಡಿದ್ದ ಆಫ್ಘನ್ ಆಟಗಾರರು, ಬ್ಯಾಟಿಂಗ್‌ನಲ್ಲಿ ಭಾರತದ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ, ಅಷ್ಟೇನೂ ಸ್ವಿಂಗ್ ಅಥವಾ ಸ್ಪಿನ್‌ಗೆ ನೆರವು ನೀಡದ ಪ್ಲಾಟ್ ಪಿಚ್‌ನಲ್ಲಿಯೂ ಆಫ್ಘನ್ ಆಟಗಾರರು ರನ್ ಗಳಿಸಲು ಪರದಾಡಿದರು.ಪೆವಿಲಿಯನ್‌ಗೆ ತೆರಳಲು ಆತುರ ತೋರಿದರು.
ಟೆಸ್ಟ್ ಕ್ರಿಕೆಟ್‌ನ ತಾಳ್ಮೆ ಮತ್ತು ತಂತ್ರಗಳನ್ನು ಅರಿಯದೆ ವೇಗದಿಂದ ರನ್ ಗಳಿಸಲು ಆಫ್ಘನ್ ಬ್ಯಾಟ್ಸ್‌ಮನ್‌ಗಳು ಮುಂದಾದರು. ಅಲ್ಲದೆ ಭಾರತದ ಅನುಭವಿ ಬೌಲಿಂಗ್ ಪಡೆಯನ್ನು ಎದುರಿಸುವಷ್ಟು ಸಮರ್ಥ ಬ್ಯಾಟ್ಸ್‌ಮನ್‌ಗಳು ತಂಡದಲ್ಲಿ ಇರಲಿಲ್ಲ.
ಎಡಗೈ ಬ್ಯಾಟ್ಸ್‌ಮನ್ ಹಷ್ಮತುಲ್ಲಾಹ್ ಶಾಹಿದಿ ಮಾತ್ರ ಕೊಂಚ ಪ್ರತಿರೋಧ ಒಡ್ಡಿದರು. ಅವರಿಗೆ ನಾಯಕ ಅಸ್ಗರ್ ಸ್ಟಾನಿಕ್‌ಜೈ ಸ್ವಲ್ಪ ಕಾಲ ಸಾಥ್ ನೀಡಿದರು. ಆದರೆ, ಉಳಿದ ಯಾವ ಆಟಗಾರನಿಂದಲೂ ಕ್ರೀಸ್‌ನಲ್ಲಿ ಉಳಿಯುವ ಸಂಯಮ ಕಂಡುಬರಲಿಲ್ಲ.
ಭಾರತ ತಂಡದ ಪರ ಎರಡನೆಯ ಇನ್ನಿಂಗ್ಸ್‌ನಲ್ಲಿ ರವೀಂದ್ರ ಜಡೇಜಾ 4, ಉಮೇಶ್ ಯಾದವ್ 3, ಇಶಾಂತ್ ಶರ್ಮಾ 2, ಆರ್. ಅಶ್ವಿನ್ 1 ವಿಕೆಟ್ ಪಡೆದರು.