ಭಾರತಕ್ಕೆ ಬನ್ನಿ ಎಂದಿದ್ದಕ್ಕೆ ರಶೀದ್ ಕೊಟ್ಟ ಉತ್ತರವೇನು ಗೊತ್ತಾ?

ನವದೆಹಲಿ, ಮೇ 28: ಸನ್ ರೈಸರ್ಸ್ ತಂಡದ ಸ್ಪಿನ್ ಬಲಾಡ್ಯ, ಅಫ್ಘಾನಿಸ್ತಾನ್ ನ ಆಟಗಾರ ರಶೀದ್ ಖಾನ್ ಅವರು ಸುದ್ದಿಯಾಗುತ್ತಿರುವುದು ಇನ್ನೂ ನಿಂತಿಲ್ಲ. ರಶೀದ್ ಖಾನ್ ಅದ್ಭುತ ಆಟವನ್ನು ನೋಡಿ ಸಂಭ್ರಮಿಸಿದ ಭಾರತದ ಕ್ರಿಕೆಟ್ ಪ್ರೇಮಿಗಳು ಪ್ರೀತಿಯಿಂದ ಖಾನ್ ಅವರನ್ನು 'ನಮ್ಮ ದೇಶಕ್ಕೆ ಬನ್ನಿ' ಎಂದಿದ್ದರು. ಅದಕ್ಕೆ ರಶೀದ್ ಈಗ ಪ್ರತಿಕ್ರಿಯಿಸಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆದಿದ್ದ ಐಪಿಎಲ್ ಕ್ವಾಲಿಫೈಯರ್ 2ರಲ್ಲಿ ಕೋಲ್ಕತ್ತಾ ಎದುರು ಸನ್ ರೈಸರ್ಸ್ ಹೈದರಾಬಾದ್ ತಂಡ ರಶೀದ್ ಖಾನ್ ಸಾಹಸದಿಂದ 14 ರನ್ ಜಯ ಸಾಧಿಸುವುದರೊಂದಿಗೆ ಫೈನಲ್ ಗೆ ಲಗ್ಗೆಯಿಟ್ಟಿತ್ತು.
ಈ ಪಂದ್ಯದಲ್ಲಿ ರಶೀದ್ ಖಾನ್ ಮಾರಕ ಸ್ಪಿನ್ ದಾಳಿಯ ಮೂಲಕ 19 ರನ್ ಗೆ 3 ವಿಕೆಟ್ ಕೆಡವಿದ್ದರಲ್ಲದೆ 10 ಎಸೆತಗಳಲ್ಲಿ 34 ರನ್ ಗಳನ್ನೂ ಸಿಡಿಸಿ ಹೈದರಾಬಾದ್ ಗೆಲುವಿಗೆ ಕಾರಣರಾಗಿದ್ದರು. ಈ ಸಂದರ್ಭ ರಶೀದ್ ಅನೇಕ ಕ್ರೀಡಾಭಿಮಾನಿಗಳ ಪ್ರಶಂಸೆಗೆ ಒಳಗಾಗಿದ್ದರು. ಭಾರತ ಅಭಿಮಾನಿಗಳು (ಕೆಲವರು ತಮಾಷೆಯಾಗಿ, ಇನ್ನು ಕೆಲವರು ಸೀರಿಯಸ್ಸಾಗಿ) ರಶೀದ್ ಗೆ ಭಾರತೀಯ ಪೌರತ್ವ ಕೊಡಿಸಬೇಕೆಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಲ್ಲಿ ಬೇಡಿಕೆಯನ್ನಿಟ್ಟಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ್ದ ಅಫ್ಘಾನಿಸ್ತಾನದ ಅಧ್ಯಕ್ಷ ಹಮೀದ್ ಕರ್ಝಾಯಿ ಅವರು ಟ್ವೀಟ್ ಮೂಲಕ, 'ರಶೀದ್ ಅವರು ಕ್ರಿಕೆಟ್ ಲೋಕದ ಆಸ್ತಿ. ಅವರನ್ನು ನಾವು ಬಿಟ್ಟುಕೊಡುವುದಿಲ್ಲ' ಎಂದು ಬರೆದಿದ್ದರು. ಈಗ ಸ್ವತಃ ರಶೀದ್ ಖಾನ್ ಅವರೇ ಪ್ರತಿಕ್ರಿಯಿಸಿ, 'ನಾನೊಬ್ಬ ಹೆಮ್ಮೆಯ ಅಫ್ಘಾನಿ. ನಾನು ನನ್ನ ದೇಶದಲ್ಲೇ ಇದ್ದು ಸೇವೆ ಸಲ್ಲಿಸುತ್ತೇನೆ. ನನ್ನ ದೇಶಕ್ಕಾಗಿ ಶ್ರಮಿಸುತ್ತೇನೆ. ನಾವು ಶಾಂತಿ ಪಸರಿಸುತ್ತೇವೆ. ನಮ್ಮ ದೇಶಕ್ಕೆ ನಾವು ಬೇಕಾಗಿದ್ದೇವೆ' ಎಂದಿದ್ದಾರೆ.
ರಶೀದ್ ಹೇಳಿದ ಮಾತು ಪ್ರತಿ ದೇಶ ಪ್ರೇಮಿಯೂ ಹೇಳುವಂತದ್ದೇ. ಹಾಗಂತ ಭಾರತದಲ್ಲಿ ಐಪಿಎಲ್ ನಲ್ಲಿ ಪಾಲ್ಗೊಂಡಿರುವುದಕ್ಕೆ ರಶೀದ್ ಖುಷಿಯನ್ನೂ ವ್ಯಕ್ತಪಡಿಸಿದ್ದಾರೆ. ಇವೆಲ್ಲದಕ್ಕಿಂತ ಮಿಗಿಲಾಗಿ ಕ್ರಿಡೆಗೆ, ಅಲ್ಲಿರುವ ಸ್ಫೂರ್ತಿಗೆ, ಪ್ರೀತಿಗೆ ದೇಶ-ಭಾಷೆ-ಗಡಿಯ ಹಂಗಿಲ್ಲ. ರಶೀದ್ ನಂತ ಯಾರೇ ಕ್ರೀಡಾಪಟು ನಮ್ಮ ನೆಲದಲ್ಲಿ ಆಡುವಾಗ ಅವರು ನಮ್ಮವರೇ. ನಾವು ಭಾರತೀಯರು ವಿದೇಶಿ ನೆಲದಲ್ಲಿ ಆಡುವಾಗ ಆ ಮಣ್ಣನ್ನೂ ಗೌರವಿಸುವವರೇ ಅಲ್ಲವೆ?
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications