ಕಿವೀಸ್ ವಿರುದ್ಧ 372 ರನ್‌ಗಳ ಭರ್ಜರಿ ಜಯ ಸಾಧಿಸಿ ಹಿಂದೆಂದೂ ಮಾಡಿರದ ಸಾಧನೆ ಮಾಡಿದ ಭಾರತ

ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದ ನ್ಯೂಜಿಲೆಂಡ್ ಭಾರತ ಪ್ರವಾಸವನ್ನು ಕೈಗೊಂಡು 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಮತ್ತು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸೋತು ಮುಖಭಂಗಕ್ಕೊಳಗಾಗಿದೆ.
ಮೊದಲಿಗೆ ಟೀಮ್ ಇಂಡಿಯಾ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಸೋಲುವುದರ ಮೂಲಕ ವೈಟ್ ವಾಷ್ ಮುಖಭಂಗಕ್ಕೆ ಒಳಗಾದ ಕಿವೀಸ್ ನಂತರ ನಡೆದ 2 ಪಂದ್ಯಗಳ ಟೆಸ್ಟ್ ಸರಣಿ ಪೈಕಿಯ ಮೊದಲನೇ ಪಂದ್ಯದಲ್ಲಿ ಸೋಲಿನ ಸುಳಿಯಿಂದ ಪಾರಾಗಿ ಡ್ರಾ ಮಾಡಿಕೊಂಡಿತು. ಆದರೆ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾವನ್ನು ಎದುರಿಸಲಾಗದೇ ಮಣ್ಣು ಮುಕ್ಕಿದೆ. ಹೌದು, ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಪೈಪೋಟಿ ನೀಡುವುದರ ಮೂಲಕ ಸೋಲಿನ ಸುಳಿಯಿಂದ ಪಾರಾಗಿದ್ದ ನ್ಯೂಜಿಲೆಂಡ್ ಮುಂಬೈ ಟೆಸ್ಟ್ ಪಂದ್ಯದಲ್ಲಿ ಚಕ್ರವ್ಯೂಹಕ್ಕೆ ಸಿಲುಕಿಕೊಂಡಂತೆ ಟೀಮ್ ಇಂಡಿಯಾ ಆಟಗಾರರ ಮುಂದೆ ಮಂಡಿಯೂರಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಮೊದಲಿಗೆ ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಆರಿಸಿಕೊಂಡರು. ಹೀಗೆ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ನ್ಯೂಜಿಲೆಂಡ್ ಬೌಲರ್ ಅಜಾಜ್ ಪಟೇಲ್ ತಲೆನೋವಾಗಿ ಪರಿಣಮಿಸಿದರು. ತಂಡದ ಪ್ರಮುಖ ಆಟಗಾರರೇ ಅಜಾಜ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡ್ ನಡೆಸಿದರೆ, ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ ಮಾತ್ರ 150 ರನ್ ಗಳಿಸುವುದರ ಮೂಲಕ ತಂಡಕ್ಕೆ ಆಪತ್ಬಾಂಧವರಾದರು. ಇನ್ನುಳಿದಂತೆ ಶುಬ್ ಮನ್ ಗಿಲ್, ಅಕ್ಷರ್ ಪಟೇಲ್ ಮತ್ತು ರವಿಚಂದ್ರನ್ ಅಶ್ವಿನ್ ಜವಾಬ್ದಾರಿಯುತ ಆಟದ ನೆರವಿನಿಂದ ಟೀಮ್ ಇಂಡಿಯಾ 325 ರನ್ ಕಲೆಹಾಕಿತು. ಅತ್ತ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಟೀಮ್ ಇಂಡಿಯಾ ಬೌಲರ್‌ಗಳ ಎದುರು ಮಂಕಾಗಿ ಕೇವಲ 62 ರನ್‌ಗಳಿಗೆ ಆಲ್ ಔಟ್ ಆಯಿತು. ಹೀಗೆ ಮೊದಲನೇ ಇನ್ನಿಂಗ್ಸ್‌ನಲ್ಲಿಯೇ ದೊಡ್ಡ ಮುನ್ನಡೆ ಕಾಯ್ದುಕೊಂಡ ಭಾರತ ಫಾಲೋ ಆನ್ ತೆಗೆದುಕೊಳ್ಳದೇ ತನ್ನ ಎರಡನೇ ಇನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು.
ಹೀಗೆ ಎರಡನೇ ಇನ್ನಿಂಗ್ಸ್‌ನಲ್ಲಿ ತಂಡದ ಆಟಗಾರರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 276 ರನ್ ಕಲೆಹಾಕಿ ಡಿಕ್ಲೇರ್ ಮಾಡಿಕೊಂಡಿತು. ಈ ಮೂಲಕ ಟೀಮ್ ಇಂಡಿಯಾ 539 ರನ್ ಮುನ್ನಡೆ ಸಾಧಿಸಿ ನ್ಯೂಜಿಲೆಂಡ್ ತಂಡಕ್ಕೆ ಗೆಲ್ಲಲು ಬರೋಬ್ಬರಿ 540 ರನ್‌ಗಳ ಬೃಹತ್ ಮೊತ್ತದ ಗುರಿಯನ್ನು ನೀಡಿತು. ಆದರೆ ಈ ಮೊತ್ತವನ್ನು ಬೆನ್ನತ್ತುವಲ್ಲಿ ವಿಫಲವಾದ ನ್ಯೂಜಿಲೆಂಡ್ 167 ರನ್‌ಗಳಿಗೆ ಆಲ್ ಔಟ್ ಆಗುವುದರ ಮೂಲಕ ಪಂದ್ಯದಲ್ಲಿ ಹೀನಾಯವಾಗಿ ಸೋತು ಟೆಸ್ಟ್ ಸರಣಿಯನ್ನು ಕೂಡ ಕೈಚೆಲ್ಲಿತು. ಇತ್ತ ಟೀಮ್ ಇಂಡಿಯಾ 372 ರನ್‌ಗಳ ಅಂತರದ ಭರ್ಜರಿ ಜಯ ಸಾಧಿಸುವುದರ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ಸಾಧಿಸಿರದ ದೊಡ್ಡ ಗೆಲುವನ್ನು ಪಡೆದುಕೊಳ್ಳುವುದರ ಮೂಲಕ ದಾಖಲೆಯನ್ನು ನಿರ್ಮಿಸಿದೆ. ಹೀಗೆ ಟೀಮ್ ಇಂಡಿಯಾ ದಾಖಲಿಸಿರುವ ಟೆಸ್ಟ್ ಕ್ರಿಕೆಟ್ ಇತಿಹಾಸದ ದೊಡ್ಡ ಗೆಲುವಿನ ವಿವರ ಈ ಕೆಳಕಂಡಂತಿದೆ..

ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ದೊಡ್ಡ ಗೆಲುವು!
ಹೌದು, ನ್ಯೂಜಿಲೆಂಡ್ ವಿರುದ್ಧದ ಈ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 372 ರನ್‌ಗಳ ಅಂತರದಿಂದ ದಾಖಲಿಸಿರುವ ಗೆಲುವೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಾನು ಹೆಚ್ಚು ರನ್‌ಗಳ ಅಂತರದಿಂದ ದಾಖಲಿಸಿರುವ ಗೆಲುವಾಗಿದೆ. ಈ ಮೂಲಕ ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ರನ್ ಅಂತರದಿಂದ ಗೆದ್ದ ದಾಖಲೆಯನ್ನು ಟೀಮ್ ಇಂಡಿಯಾ ಬರೆದಿದೆ.
ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್‌ಗಳ ಅಂತರದಿಂದ ಗೆದ್ದಿರುವ ಪಂದ್ಯಗಳ ಮಾಹಿತಿ ಈ ಕೆಳಕಂಡಂತಿದೆ.
ನ್ಯೂಜಿಲೆಂಡ್ ವಿರುದ್ಧ 372 ರನ್‌ಗಳ ಗೆಲುವು ( 2021 )
ದ. ಆಫ್ರಿಕಾ ವಿರುದ್ಧ 337 ರನ್‌ಗಳ ಗೆಲುವು ( 2015 )
ನ್ಯೂಜಿಲೆಂಡ್ ವಿರುದ್ಧ 321 ರನ್‌ಗಳ ಗೆಲುವು ( 2016 )
ಆಸ್ಟ್ರೇಲಿಯಾ ವಿರುದ್ಧ 320 ರನ್‌ಗಳ ಗೆಲುವು ( 2008 )
ವೆಸ್ಟ್ ಇಂಡೀಸ್ ವಿರುದ್ಧ 318 ರನ್‌ಗಳ ಗೆಲುವು ( 2019 )

ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠ, ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ
ನ್ಯೂಜಿಲೆಂಡ್ ವಿರುದ್ಧದ ಈ ಪಂದ್ಯದಲ್ಲಿ ಮೊದಲನೇ ಇನ್ನಿಂಗ್ಸ್‌ನಲ್ಲಿ 150 ರನ್ ದಾಖಲಿಸುವುದರ ಮೂಲಕ ಆಪದ್ಬಾಂಧವನಾದ ಮಯಾಂಕ್ ಅಗರ್ವಾಲ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೂಡ 62 ರನ್ ಗಳಿಸಿ ಜವಾಬ್ದಾರಿಯುತ ಆಟವನ್ನಾಡಿದರು. ಹೀಗೆ ಎರಡೂ ಇನ್ನಿಂಗ್ಸ್‌ನಲ್ಲಿಯೂ ಉತ್ತಮ ಆಟವನ್ನಾಡಿದ ಮಯಾಂಕ್ ಅಗರ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು ನ್ಯೂಜಿಲೆಂಡ್ ವಿರುದ್ಧದ ಮೊದಲನೇ ಟೆಸ್ಟ್ ಪಂದ್ಯದಲ್ಲಿ 6 ವಿಕೆಟ್ ಮತ್ತು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ 8 ವಿಕೆಟ್ ಪಡೆದಿರುವ ರವಿಚಂದ್ರನ್ ಅಶ್ವಿನ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲಿದೆ ಟೀಮ್ ಇಂಡಿಯಾ
ನ್ಯೂಜಿಲೆಂಡ್ ವಿರುದ್ಧದ ಈ ಟೆಸ್ಟ್ ಪಂದ್ಯ ನಡೆಯುವ ಮುನ್ನ ಅತ್ಯುತ್ತಮ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಅಮೋಘ ಗೆಲುವು ಸಾಧಿಸಿರುವುದರಿಂದ ಅಗ್ರ ಸ್ಥಾನಕ್ಕೇರಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications