ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಸೋಲುವ ಮೂಲಕ ಸರಣಿಯನ್ನು ಕಳೆದುಕೊಂಡಿದೆ. ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತ ಬಳಿಕ ತಿರುಗಿಬಿದ್ದ ಭಾರತದ ಯುವಪಡೆ ನಂತರ ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಗೆಲ್ಲುವ ವಿಶ್ವಾಸದಲ್ಲಿದ್ದರು, ಕೊನೆಯ ಪಂದ್ಯದಲ್ಲಿ ಭಾರತದ ಲೆಕ್ಕಾಚಾರ ಉಲ್ಟಾ ಆಯಿತು.
ಸರಣಿ ಸೋತರು ಭಾರತ ಹಲವು ದಾಖಲೆಯಗಳನ್ನು ಬರೆಯುವಲ್ಲಿ ಸಫಲವಾಗಿದೆ. ನಾಲ್ಕನೇ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಗೆಲುವು ದಾಖಲಿಸಿದ ಬಳಿಕ ಹೊಸ ದಾಖಲೆ ಬರೆದಿದೆ. ಇದುವರೆಗೆ ಭಾರತ ತಂಡ 203 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 34 ಶತಕಗಳ ಜತೆಯಾಟ ನೀಡಿದೆ. ಇದೇ ಸಮಯದಲ್ಲಿ, 223 ಪಂದ್ಯಗಳನ್ನು ಆಡಿರುವ ಪಾಕಿಸ್ತಾನದ ಪರ 30 ಶತಕದ ಜೊತೆಯಾಟಗಳು ಮೂಡಿ ಬಂದಿವೆ.

ಈ ಪಟ್ಟಿಯಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕ್ರಮವಾಗಿ 26-26 ಶತಕಗಳ ಜೊತೆಯಾಟದೊಂದಿಗೆ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ. ಇದಲ್ಲದೆ, ನ್ಯೂಜಿಲೆಂಡ್ ತಂಡವು ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ 25 ಶತಕಗಳ ಜೊತೆಯಾಟವನ್ನು ಕಿವೀಸ್ ತಂಡ ಹೊಂದಿದೆ.
ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಶುಭಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ ಮೊದಲ ವಿಕೆಟ್‌ಗೆ 165 ರನ್ ಜೊತೆಯಾಟವನ್ನು ನೀಡಿದರು. ಇದು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತದ ಜಂಟಿ ಎರಡನೇ ಅತ್ಯಧಿಕ ಜೊತೆಯಾಟ. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಕೂಡ 2017 ರಲ್ಲಿ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ 165 ರನ್ಗಳ ಜೊತೆಯಾಟವನ್ನು ನೀಡಿದ್ದರು. ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ 176 ರನ್ ಜೊತೆಯಾಟ ನೀಡಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಈ ಜೋಡಿಯನ್ನು ಟೀಮ್ ಇಂಡಿಯಾದ ಭವಿಷ್ಯದ ಸ್ಟಾರ್ ಜೋಡಿ ಎಂದು ಪರಿಗಣಿಸಲಾಗಿದೆ. ಈ ಜೋಡಿಯ ಆಟವನ್ನು ನೋಡಿದ ಕ್ರಿಕೆಟ್ ಪಂಡಿತರು, ಈ ಯುವ ಆಟಗಾರರನ್ನು ಸಚಿನ್ ತೆಂಡುಲ್ಕರ್ ಹಾಗೂ ಸೌರವ್ ಗಂಗೂಲಿಗೆ ಹೋಲಿಸಿದ್ದಾರೆ. ಯುವ ಆಟಗಾರರ ಬ್ಯಾಟಿಂಗ್ ಧಾಟಿಯಲ್ಲಿ ಭವಿಷ್ಯದ ಆಶಾ ಕಿರಣ ಕಾಣುತ್ತಿರುವುದಂತೂ ಸುಳ್ಳು ಅಲ್ಲವೇ ಅಲ್ಲ. ಐಪಿಎಲ್‌ನಲ್ಲಿ ಮಾಡಿದ ಮೋಡಿಯ ಬ್ಯಾಟಿಂಗ್ ಅನ್ನೇ, ಈ ಸ್ಟಾರ್ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮುಂದುವರೆಸಿದ್ದಾರೆ.
4ನೇ ಟಿ20 ಪಂದ್ಯದ ಬಳಿಕ ಮಾತನಾಡಿದ ಯಶಸ್ವಿ ಜೈಸ್ವಾಲ್, ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಾಗಿರಲಿಲ್ಲ. ನಾನು ಸಹಾಯಕ ಸಿಬ್ಬಂದಿ ಮತ್ತು ಹಾರ್ದಿಕ್ ಭಾಯ್ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ನನ್ನನ್ನು ನಂಬಿದ್ದರು. ಇದು ನನಗೆ ಉತ್ತೇಜನ ನೀಡಿತು. ತಂಡದ ಅಗತ್ಯಕ್ಕೆ ತಕ್ಕಂತೆ ಆಡಿದ ಖುಷಿ ಇದೆ. ನಾನು ವೇಗವಾಗಿ ರನ್ ಗಳಿಸಲು ಪ್ರಯತ್ನಿಸುತ್ತಿದೆ. ಪವರ್ ಪ್ಲೇನಲ್ಲಿ ವೇಗವಾಗಿ ಆಡುವ ಸಾಮರ್ಥ್ಯ ಹೊಂದಿದ್ದೇನೆ. ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸುವುದೇ ನನ್ನ ಗುರಿಯಾಗಿತ್ತು. ಗಿಲ್ ಸಹ ನನಗೆ ಉತ್ತಮ ಸಾಥ್ ನೀಡಿದರು ಎಂದು ತಿಳಿಸಿದ್ದಾರೆ.