ಮೊದಲ ಟೆಸ್ಟ್‌ಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಪ್ರಕಟ


ಅಡಿಲೇಡ್, ಡಿಸೆಂಬರ್ 5: ಗುರುವಾರದಿಂದ (ಡಿ. 6) ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಭಾರತದ ಅಂತಿಮ 12ರ ಬಳಗವನ್ನು ಪ್ರಕಟಿಸಲಾಗಿದೆ.
ಇತ್ತೀಚಿನ ವೆಸ್ಟ್ ಇಂಡೀಸ್ ಸರಣಿಯಿಂದ ಒಂದು ದಿನ ಮುಂಚೆಯೇ ತಂಡ ಪ್ರಕಟಿಸುವ ಸಂಪ್ರದಾಯವನ್ನು ಭಾರತ ಆರಂಭಿಸಿದ್ದು, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಒಂದು ದಿನ ಮುನ್ನವೇ ಆಡುವ ಬಳಗದ ಪಟ್ಟಿ ಸಿದ್ಧವಾಗಿದೆ.
ಭಾರತದಲ್ಲಿ ಯಾವುದೇ ಅಚ್ಚರಿಯ ಆಯ್ಕೆಗಳನ್ನು ಮಾಡಿಲ್ಲ. ಮೊದಲ ಟೆಸ್ಟ್‌ನಲ್ಲಿ ಅನುಭವಿಗಳೊಂದಿಗೆ ಕಣಕ್ಕಿಳಿದು ಆಸ್ಟ್ರೇಲಿಯಾ ಮೇಲೆ ಒತ್ತಡ ಹೇರುವುದು ಭಾರತದ ಗುರಿ. ರಿಷಬ್ ಪಂತ್ ಮತ್ತು ಹನುಮ ವಿಹಾರಿ ಹೊರತುಪಡಿಸಿದರೆ ಉಳಿದ ಆಟಗಾರರು ಉತ್ತಮ ಅನುಭವ ಹೊಂದಿದ್ದಾರೆ. ಅದರಲ್ಲಿಯೂ ಆಸ್ಟ್ರೇಲಿಯಾದ ಪಿಚ್‌ಗಳಲ್ಲಿ ಆಡಿರುವುದು ಅವರಿಗೆ ನೆರವಾಗಬಹುದು.
ಆಸ್ಟ್ರೇಲಿಯಾ ಕೂಡ ತನ್ನ ಆಡುವ ಅಂತಿಮ ಹನ್ನೆರಡರ ತಂಡವನ್ನು ಪ್ರಕಟಿಸಿದೆ. ಹೊಸ ಪ್ರತಿಭೆ ಮಾರ್ಕಸ್ ಹ್ಯಾರಿಸ್ ಭಾರತದ ವಿರುದ್ಧ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕನ್ನು ಆರಂಭಿಸುವುದು ಖಚಿತವಾಗಿದೆ.

ರಾಹುಲ್-ವಿಜಯ್ ಆರಂಭಿಕರು
ಗಾಯಾಳು ಪೃಥ್ವಿ ಶಾ ಈ ಟೆಸ್ಟ್‌ನಲ್ಲಿ ಆಡುತ್ತಿಲ್ಲ. ಹೀಗಾಗಿ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಲು ಪೈಪೋಟಿ ನಡೆಸುತ್ತಿದ್ದ ಕೆಎಲ್ ರಾಹುಲ್ ಮತ್ತು ಮುರಳಿ ವಿಜಯ್ ಇಬ್ಬರಿಗೂ ಸ್ಥಾನ ದೊರೆತಿದ್ದು, ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ.
ಇನ್ನು ಮೂರನೇ ಕ್ರಮಾಂಕದಲ್ಲಿ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ ಇದ್ದಾರೆ. ವಿಕೆಟ್ ಕೀಪಿಂಗ್ ಹೊಣೆಗಾರಿಕೆಯನ್ನು ರಿಷಬ್ ಪಂತ್ ನಿಭಾಯಿಸಲಿದ್ದಾರೆ.
ಕಾಲು ಉಳುಕಿಸಿಕೊಂಡ ಪೃಥ್ವಿ, ಆಸೀಸ್ ವಿರುದ್ಧದ ಮೊದಲ ಟೆಸ್ಟ್ ಗೆ ಅನುಮಾನ

ಮಧ್ಯಮ ಕ್ರಮಾಂಕದ ಕುತೂಹಲ
ಮಧ್ಯಮ ಕ್ರಮಾಂಕದಲ್ಲಿ ಯಾರು ಸ್ಥಾನ ಪಡೆದುಕೊಳ್ಳಲಿದ್ದಾರೆ ಎನ್ನುವುದೇ ಈಗ ಕುತೂಹಲದ ಸಂಗತಿಯಾಗಿದೆ. ಈ ಸ್ಥಾನಕ್ಕೆ ಹನುಮ ವಿಹಾರಿ ಮತ್ತು ರೋಹಿತ್ ಶರ್ಮಾ ನಡುವೆ ಪೈಪೋಟಿ ಇದೆ. ಅನುಭವಿ ರೋಹಿತ್ ಶರ್ಮಾ ಅವರಿಗೆ ಪ್ರಾಶಸ್ತ್ಯ ನೀಡುವ ಸಾಧ್ಯತೆ ಹೆಚ್ಚು.
ತಂಡದಲ್ಲಿ ಅಶ್ವಿನ್ ಒಬ್ಬರೇ ಸ್ಪಿನ್ನರ್ ಇರುವುದರಿಂದ ಬೌಲಿಂಗ್ ಮಾಡುವವರೂ ಮುಖ್ಯವಾಗುತ್ತಾರೆ. ರೋಹಿತ್ ಕೂಡ ಸ್ಪಿನ್ ಬೌಲಿಂಗ್ ಆಯ್ಕೆ ಆದರೂ, ವಿಹಾರಿ ಅವರಿಗಿಂತ ಉತ್ತಮ ಬೌಲಿಂಗ್ ಸಾಮರ್ಥ್ಯ ಹೊಂದಿದ್ದಾರೆ. ಮುರಳಿ ವಿಜಯ್ ಕೂಡ ಸ್ಪಿನ್ ಬೌಲಿಂಗ್‌ನಲ್ಲಿ ಅಲ್ಪ ಕಾಣಿಕೆ ನೀಡಬಲ್ಲರು.

ಅಶ್ವಿನ್ ಏಕೈಕ ಸ್ಪಿನ್ನರ್
ಇನ್ನು ಬೌಲಿಂಗ್ ವಿಭಾಗದಲ್ಲಿ ಅನುಭವಿಗಳಾದ ಆರ್. ಅಶ್ವಿನ್ ಮತ್ತು ಇಶಾಂತ್ ಶರ್ಮಾ ಮೇಲೆ ಹೆಚ್ಚಿನ ಹೊಣೆ ಇದೆ. ಉತ್ತಮ ಪ್ರದರ್ಶನ ನೀಡಿದ್ದರೂ, ಎಡಗೈ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಆಡುವ ಬಳಗದಲ್ಲಿ ಸ್ಥಾನ ಪಡೆದಿಲ್ಲ. ವೇಗಿಗಳಿಗೆ ಲಾಭ ನೀಡುವ ಪಿಚ್‌ನಲ್ಲಿ ಅಶ್ವಿನ್ ಮಾತ್ರ ಅವಕಾಶ ಪಡೆದಿದ್ದಾರೆ.

ಭುವಿ, ಉಮೇಶ್‌ಗೆ ಸ್ಥಾನವಿಲ್ಲ
ವೇಗದ ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವ ಕೆಲಸ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಮತ್ತು ಜಸ್ ಪ್ರೀತ್ ಬೂಮ್ರಾ ಅವರದ್ದು. ಭುವನೇಶ್ವರ್ ಕುಮಾರ್ ಮತ್ತು ಉಮೇಶ್ ಯಾದವ್ ಆಡುವ ಬಳಗದಲ್ಲಿ ಅವಕಾಶ ಪಡೆದಿಲ್ಲ.
ದೆಹಲಿ ಸುಲ್ತಾನ ಗಂಭೀರ ವದನ ಗೌತಮ ತಿವಿಕ್ರಮ
ಮಾರ್ಕಸ್ ಹ್ಯಾರಿಸ್ ಪಾದಾರ್ಪಣೆ
ವಿಕ್ಟೋರಿಯಾದ ಆರಂಭಿಕ ಆಟಗಾರ ಮಾರ್ಕಸ್ ಹ್ಯಾರಿಸ್ ಪಾದಾರ್ಪಣೆ ಮಾಡಲಿದ್ದಾರೆ. ಆರೋನ್ ಫಿಂಚ್ ಜೊತೆ ಅವರು ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಕಳಪೆ ಫಾರ್ಮ್‌ನಲ್ಲಿರುವ ಆಲ್‌ರೌಂಡರ್ ಮಿಚೆಲ್ ಮಾರ್ಷ್ ಬದಲು ಪೀಟರ್ ಹ್ಯಾಂಡ್‌ಸ್ಕಂಬ್ ತಂಡಕ್ಕೆ ಮರಳಿದ್ದಾರೆ. ಮತ್ತೊಬ್ಬ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಮೂರನೇ ಕ್ರಮಾಂಕದಲ್ಲಿ ಆಡಲಿದ್ದಾರೆ.
ಶಾನ್ ಮಾರ್ಷ್, ಹ್ಯಾಂಡ್‌ಸ್ಕಂಬ್, ನಾಯಕ ಟಿಮ್ ಪೈನ್ ಮತ್ತು ಟ್ರಾವಿಸ್ ಹೆಡ್ ಮಧ್ಯಮ ಕ್ರಮಾಂಕದ ಜವಾಬ್ದಾರಿ ನಿಭಾಯಿಸಲಿದ್ದಾರೆ.

ನಾಲ್ವರು ಮುಂಚೂಣಿ ಬೌಲರ್‌ಗಳು
ಆಲ್‌ರೌಂಡರ್ ಮಿಷೆಲ್ ಮಾರ್ಷ್ ಗೈರಿನಲ್ಲಿ ನಾಲ್ವರು ಪ್ರಮುಖ ಬೌಲರ್‌ಗಳು ಮಾತ್ರ ಉಳಿದುಕೊಳ್ಳಲಿದ್ದಾರೆ. ನಥಾನ್ ಲಿಯಾನ್ ಸ್ಪಿನ್ ವಿಭಾಗದಲ್ಲಿ ಏಕಾಂಗಿಯಾಗಿದ್ದಾರೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ವೇಗದ ಬೌಲರ್‌ಗಳಾಗಿದ್ದಾರೆ.

ಭಾರತ ತಂಡ
ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ (ಉಪ ನಾಯಕ), ಕೆಎಲ್ ರಾಹುಲ್, ಮುರಳಿ ವಿಜಯ್, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್ ಪ್ರೀತ್ ಬೂಮ್ರಾ.
ಆಸ್ಟ್ರೇಲಿಯಾ ತಂಡ
ಟಿಮ್ ಪೈನ್ (ನಾಯಕ & ವಿಕೆಟ್ ಕೀಪರ್), ಮಾರ್ಕಸ್ ಹ್ಯಾರಿಸ್, ಆರೋನ್ ಫಿಂಚ್, ಉಸ್ಮಾನ್ ಖವಾಜಾ, ಶಾನ್ ಮಾರ್ಷ್, ಪೀಟರ್ ಹ್ಯಾಂಡ್ ಸ್ಕಂಬ್, ಟ್ರಾವಿಸ್ ಹೆಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್, ನಥಾನ್ ಲಿಯಾನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications