ಮುಂಬೈ ಟೆಸ್ಟ್: 22 ವರ್ಷಗಳ ನಂತರ ಕುಂಬ್ಳೆಯ 10 ವಿಕೆಟ್ ದಾಖಲೆ ಸರಿದೂಗಿಸಿದ ಅಜಾಜ್ ಪಟೇಲ್!

ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ನಡುವೆ ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ 10 ವಿಕೆಟ್ ಗೊಂಚಲು ಪಡೆಯುವುದರ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ.
ಹೌದು, ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ 47.5 ಓವರ್ ಬೌಲಿಂಗ್ ಮಾಡಿ 119 ರನ್ ನೀಡುವುದರ ಮೂಲಕ 10 ವಿಕೆಟ್ ಪಡೆದರು. ಹೀಗೆ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲಾ 10 ವಿಕೆಟ್‍ಗಳನ್ನು ಪಡೆದುಕೊಂಡ ವಿಶ್ವದ ಮೂರನೇ ಬೌಲರ್ ಎಂಬ ದಾಖಲೆಯನ್ನು ಅಜಾಜ್ ಪಟೇಲ್ ಈ ಪಂದ್ಯದ ಮೂಲಕ ಬರೆದಿದ್ದಾರೆ.
ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂಗ್ಲೆಂಡ್ ತಂಡದ ಬೌಲರ್ ಜೇಮ್ಸ್ ಚಾರ್ಲ್ಸ್ ಲೇಕರ್ ಹಾಗೂ ಭಾರತದ ಅನಿಲ್ ಕುಂಬ್ಳೆ ನಂತರ ಇನ್ನಿಂಗ್ಸ್‌ವೊಂದರಲ್ಲಿ 10 ವಿಕೆಟ್ ಪಡೆದ ಬೌಲರ್ ಎಂಬ ದಾಖಲೆಯನ್ನು ಅಜಾಜ್ ಪಟೇಲ್ ಬರೆದಿದ್ದಾರೆ.
ಇತ್ತ ಮೊದಲನೇ ಇನ್ನಿಂಗ್ಸ್ ಅಂತ್ಯಕ್ಕೆ 325 ರನ್‌ಗಳಿಗೆ ಟೀಮ್ಇಂಡಿಯಾ ಆಲ್ ಔಟ್ ಆಗಿದೆ. ಟೀಮ್ ಇಂಡಿಯಾ ಪರ ಆರಂಭಿಕ ಆಟಗಾರ ಮಯಾಂಕ್ ಅಗರ್ವಾಲ್ 150 ರನ್ ಗಳಿಸಿ ಮಿಂಚಿದರೆ, ಎರಡನೇ ದಿನದಾಟದಂದು ಜವಾಬ್ದಾರಿಯುತ ಆಟವನ್ನಾಡಿದ ಅಕ್ಷರ್ ಪಟೇಲ್ 52 ರನ್ ಗಳಿಸಿ ಮಿಂಚಿದರು.

22 ವರ್ಷಗಳ ನಂತರ 10 ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡ ಅಜಾಜ್ ಪಟೇಲ್
ಭಾರತವಿರುದ್ಧದ ಈ ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದ ಅಜಾಜ್ ಪಟೇಲ್ 22 ವರ್ಷಗಳ ನಂತರ ಈ ಸಾಧನೆ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ. ಹೌದು, ಟೆಸ್ಟ್ ಕ್ರಿಕೆಟ್‍ನಲ್ಲಿ 10 ವಿಕೆಟ್ ಗೊಂಚಲು ಪಡೆದ ಸಾಧನೆಯನ್ನು ಮೊದಲಿಗೆ ಇಂಗ್ಲೆಂಡ್ ತಂಡದ ಬೌಲರ್ ಜಿಮ್ ಲಾಕೆರ್ 1956ರಲ್ಲಿ ನಡೆದಿದ್ದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯವೊಂದರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡದ ಎಲ್ಲಾ 10 ವಿಕೆಟ್‍ಗಳನ್ನು ಪಡೆಯುವುದರ ಮೂಲಕ ಮಾಡಿದ್ದರು. ಇದಾದ ಬಳಿಕ 1999ರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ನಡೆದಿದ್ದ ಟೆಸ್ಟ್ ಪಂದ್ಯವೊಂದರ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಗೊಂಚಲನ್ನು ಪಡೆಯುವುದರ ಮೂಲಕ ಎರಡನೇ ಬಾರಿಗೆ ಈ ದಾಖಲೆ ಬರೆದಿದ್ದರು. ಹೀಗೆಭಾರತ ವಿರುದ್ಧದ ಈ ಪಂದ್ಯದಲ್ಲಿ ಅಜಾಜ್ ಪಟೇಲ್ ಇದೇ ಸಾಧನೆಯನ್ನು ಮತ್ತೊಮ್ಮೆ ಮಾಡುವುದರ ಮೂಲಕ 22 ವರ್ಷಗಳ ಬಳಿಕ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ.

ಅಜಾಜ್ ಪಟೇಲ್ ಮೂಲತಃ ಮುಂಬೈನವರು
ಹೀಗೆ ಮಹತ್ತರವಾದ ದಾಖಲೆಯನ್ನು ಬರೆದಿರುವ ನ್ಯೂಜಿಲೆಂಡ್ ತಂಡದ ಬೌಲರ್ ಅಜಾಜ್ ಪಟೇಲ್ ಹುಟ್ಟಿದ್ದು ಭಾರತದ ಮುಂಬೈ ನಗರದಲ್ಲಿ. ಹೌದು, ಅಜಾಜ್ ಪಟೇಲ್ ನ್ಯೂಜಿಲೆಂಡ್ ತಂಡದ ಆಟಗಾರನಾಗಿದ್ದರೂ ಸಹ ಆತ ಮೂಲತಃ ಭಾರತೀಯ. 1988ರ ಅಕ್ಟೋಬರ್ 21ರಂದು ಮುಂಬೈ ನಗರದಲ್ಲಿ ಜನಿಸಿದ್ದ ಅಜಾಜ್ ಪಟೇಲ್ 2018ರಲ್ಲಿ ನ್ಯೂಜಿಲೆಂಡ್ ಅಂತರರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡರು.

ಮೊದಲನೇ ಇನ್ನಿಂಗ್ಸ್‌ನಲ್ಲಿ ಅಬ್ಬರದ 150 ರನ್ ಕಲೆಹಾಕಿದ ಮಯಂಕ್ ಅಗರ್ವಾಲ್
ನ್ಯೂಜಿಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯದ ಮೊದಲನೇ ದಿನ ತಂಡದ ಮೇಲಿನ ಕ್ರಮಾಂಕದ ಆಟಗಾರರು ಸಾಲುಸಾಲಾಗಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಮಯಾಂಕ್ ಅಗರ್ವಾಲ್ ಮಾತ್ರ ಏಕಾಂಗಿ ಹೋರಾಟ ನಡೆಸಿದರು. ಮೊದಲನೇ ದಿನದಾಟದಂತ್ಯಕ್ಕೆ ವಿಕೆಟ್ ಕಳೆದುಕೊಳ್ಳದೆ ಶತಕ ಬಾರಿಸಿದ್ದ ಮಯಾಂಕ್ ಅಗರ್ವಾಲ್ ದ್ವಿತೀಯ ದಿನದಾಟದಂದು 150 ರನ್‌ಗಳ ಗುರಿಯನ್ನು ದಾಟಿದರು. ಹೀಗೆ 150 ರನ್ ಬಾರಿಸಿದ ಬೆನ್ನಲ್ಲೇ ಬೌಲರ್ ಅಜಾಜ್ ಪಟೇಲ್ ಅವರ ಎಸೆತದಲ್ಲಿ ಟಾಮ್ ಬ್ಲಂಡೆಲ್ ಅವರಿಗೆ ಕ್ಯಾಚ್ ನೀಡುವ ಮೂಲಕ ಮಯಾಂಕ್ ಅಗರ್ವಾಲ್ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಒಟ್ಟಾರೆ 311 ಎಸೆತಗಳನ್ನು ಎದುರಿಸಿದ ಮಯಾಂಕ್ ಅಗರ್ವಾಲ್ 150 ರನ್ ಗಳಿಸುವುದರ ಮೂಲಕ ಟೀಮ್ ಇಂಡಿಯಾಗೆ ಆಪದ್ಬಾಂಧವನಾಗಿ ನಿಂತರು. ಮಯಾಂಕ್ ಅಗರ್ವಾಲ್ ಅವರ ಈ ಇನ್ನಿಂಗ್ಸ್‌ನಲ್ಲಿ 17 ಬೌಂಡರಿ ಮತ್ತು 4 ಸಿಕ್ಸರ್ ಕೂಡ ಸೇರಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications