Ind vs NZ: ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಟೀಂ ಇಂಡಿಯಾ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರಗಳಿವು

ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲಿನ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಆಡಲು ಸಜ್ಜಾಗಿದೆ. ತಂಡದ ಹಲವು ಹಿರಿಯ ಆಟಗಾರರಿಗೆ ಸರಣಿಯಲ್ಲಿ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರು ಆಡುವ ಅವಕಾಶ ಪಡೆಯಲಿದ್ದಾರೆ. ಹಾರ್ದಿಕ್ ಪಾಂಡ್ಯ ಟಿ20 ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ.
ನವೆಂಬರ್ 18ರಂದು ಟಿ20 ಸರಣಿಯ ಮೊದಲನೇ ಪಂದ್ಯ ನಡೆಯಲಿದೆ. ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಕೂಡ ವಿಶ್ರಾಂತಿಯಲ್ಲಿದ್ದು, ಕೋಚಿಂಗ್ ಹೊಣೆಯನ್ನು ವಿವಿಎಸ್ ಲಕ್ಷ್ಮಣ್ ವಹಿಸಿಕೊಂಡಿದ್ದಾರೆ.
2024ರ ಟಿ20 ವಿಶ್ವಕಪ್‌ಗಾಗಿ ಭಾರತ ತಂಡವನ್ನು ಸಜ್ಜುಗೊಳಿಸಲು ಬಿಸಿಸಿಐ ಈಗಿನಿಂದಲೇ ಹಲವು ಆಟಗಾರರಿಗೆ ಅವಕಾಶ ನೀಡಲು ನಿರ್ಧರಿಸಿದೆ. 2021ರ ಟಿ20 ವಿಶ್ವಕಪ್ ಸೋಲಿನ ಬಳಿಕ ಭಾರತ ಆಕ್ರಮಣಕಾರಿ ಆಟದ ಮಾದರಿಯನ್ನು ಅಳವಡಿಸಿಕೊಂಡಿತ್ತು. 2022ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಆರಂಭಿಕ ಜೋಡಿ ಯಾವುದೇ ಆಕ್ರಮಣಕಾರಿ ಮನೋಭಾವ ತೋರಲೇ ಇಲ್ಲ.
ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ತಂಡದಲ್ಲಿದ್ದ ಹಲವು ಕೊರತೆಗಳನ್ನು ನೀಗಿಸಲು ಕೆಲಸ ಮಾಡಬೇಕಾಗಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ವಿವಿಎಸ್ ಲಕ್ಷ್ಮಣ್ ಮುಂದೆ ಹಲವು ಸವಾಲುಗಳಿವೆ.

ಆರಂಭಿಕ ಆಟಗಾರರು ಯಾರು?
ಈ ಬಾರಿಯ ಟಿ20 ವಿಶ್ವಕಪ್ ಭಾರತದ ಆರಂಭಿಕ ಜೋಡಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಸಂಪೂರ್ಣವಾಗಿ ವಿಫಲರಾದರು. ಭಾರತ ತಂಡ ಟೂರ್ನಿಯಲ್ಲಿ ಮೊದಲ ಆರು ಓವರ್ ಗಳಲ್ಲಿ ಸರಾಸರಿ ಗಳಿಸಿದ್ದು ಕೇವಲ 37 ರನ್.
ಈಗ ಭಾರತದ ಆರಂಭಿಕ ಜೋಡಿಯನ್ನು ಬದಲಾಯಿಸಬೇಕಾಗಿದ್ದು, ತಂಡದಲ್ಲಿ ನಾಲ್ಕು ಆಯ್ಕೆಗಳನ್ನು ನೋಡಬಹುದು. ಶುಭ್‌ಮನ್ ಗಿಲ್, ಸಂಜು ಸ್ಯಾಮ್ಸನ್, ಇಶಾನ್ ಕಿಶನ್, ಮತ್ತು ರಿಷಬ್ ಪಂತ್. ಎಡಗೈ ಮತ್ತು ಬಲಗೈ ಆಟಗಾರರು ಇರುವುದರಿಂದ ಈ ನಾಲ್ವರಲ್ಲಿ ಇಬ್ಬರನ್ನು ಆಯ್ಕೆ ಮಾಡುವ ಸವಾಲು ಈಗ ಲಕ್ಷ್ಮಣ್ ಮತ್ತು ಪಾಂಡ್ಯ ಮೇಲಿದೆ.
IPL 2023: ಪೋಲಾರ್ಡ್ ಕೈಬಿಡುವ ಮುನ್ನ ಮುಂಬೈ ಇಂಡಿಯನ್ಸ್ ಸ್ವಲ್ಪ ಯೋಚಿಸಲಿ; ಮಾಜಿ ಕ್ರಿಕೆಟರ್

ಯುವ ತಂಡದಲ್ಲಿ ಫಿನಿಶರ್ ಪಾತ್ರ ಯಾರದ್ದು
ಟಿ20 ವಿಶ್ವಕಪ್‌ಗೆ ಮುನ್ನ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರವನ್ನು ನಿರ್ವಹಿಸಿದ್ದರು. ಅದೇ ಕಾರಣಕ್ಕೆ ಅವರನ್ನು ವಿಶ್ವಕಪ್‌ಗೆ ಆಯ್ಕೆ ಮಾಡಲಾಯಿತು. ಆದರೆ, ವಿಶ್ವಕಪ್‌ನಲ್ಲಿ ಅವರು ತಮ್ಮ ಸಾಮರ್ಥ್ಯ ತೋರಲು ವಿಫಲರಾದರು.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಈ ಪಾತ್ರವನ್ನು ಯಾರು ನಿಭಾಯಿಸುತ್ತಾರೆ ಎನ್ನುವ ಕುತೂಹಲ ಇದೆ. ಕೊನೆಯ ಹಂತದಲ್ಲಿ ವೇಗವಾಗಿ ರನ್ ಗಳಿಸುವ ಆಟಗಾರನನ್ನು ಈ ಪಾತ್ರಕ್ಕೆ ಅಣಿಗೊಳಿಸಬೇಕಿದೆ. ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್, ಸಂಜು ಸ್ಯಾಮ್ಸನ್ ಈ ಪಾತ್ರಕ್ಕೆ ಸೂಕ್ತರಾಗಿದ್ದಾರೆ. ಇವರು ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದನ್ನು ನೋಡಬೇಕಿದೆ.

ಪಾಂಡ್ಯಗೆ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ?
ಟೀಂ ಇಂಡಿಯಾದ ನಾಯಕನ ಜವಾಬ್ದಾರಿ ಹೊತ್ತಿರುವ ಹಾರ್ದಿಕ್ ಪಾಂಡ್ಯ ಈಗ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದನ್ನು ನೋಡಬೇಕಿದೆ. ಅವರು ಟಿ20 ವಿಶ್ವಕಪ್‌ನಲ್ಲಿ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಐಪಿಎಲ್‌ನಲ್ಲಿ ಗುಜರಾತ್ ತಂಡದಲ್ಲಿ ಅವರು 3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಜವಾಬ್ದಾರಿಯುತ ಇನ್ನಿಂಗ್ಸ್ ಆಡಿದ್ದಾರೆ.
ತಂಡದಲ್ಲಿ ಈಗ ಹೆಚ್ಚಿನ ಅನುಭವಿ ಬ್ಯಾಟರ್ ಆಗಿರುವುದರಿಂದ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಲಿದ್ದು, ಸೂರ್ಯಕುಮಾರ್ ಜೊತೆ ಪಾಂಡ್ಯ ಸಿಡಿದರೆ ಭಾರತದ ಗೆಲುವು ಸುಲಭವಾಗಲಿದೆ.

ಬೌಲಿಂಗ್ ಆಯ್ಕೆಯಲ್ಲಿ ಹಲವು ಸವಾಲುಗಳು
ಟಿ20 ವಿಶ್ವಕಪ್‌ನಲ್ಲಿ ಭಾರತ ಯುಜುವೇಂದ್ರ ಚಹಾಲ್‌ಗೆ ಒಂದು ಅವಕಾಶವನ್ನು ನೀಡಲಿಲ್ಲ. ಅಕ್ಷರ್ ಪಟೇಲ್ ಮತ್ತು ಆರ್ ಅಶ್ವಿನ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಇವರಿಬ್ಬರೂ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.
ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಯುಜುವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್‌ರನ್ನು ಆಡಿಸುವ ಮೂಲಕ ಸ್ಪಿನ್ ದಾಳಿಯನ್ನು ಕಠಿಣವಾಗಿಸಬಹುದು. ಇನ್ನು ವೇಗದ ಬೌಲಿಂಗ್‌ನಲ್ಲಿ ಉಮ್ರಾನ್ ಮಲಿಕ್, ಮೊಹಮ್ಮದ್ ಸಿರಾಜ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್ ಇದ್ದಾರೆ. ಯುವ ವೇಗಿ ಉಮ್ರಾನ್ ಮಲಿಕ್ ಮತ್ತು ಮೊಹಮ್ಮದ್ ಸಿರಾಜ್‌ಗೆ ಅವಕಾಶ ನೀಡುವ ಸಾಧ್ಯತೆ ಇದೆ.
ನ್ಯೂಜಿಲೆಂಡ್ ನೆಲದಲ್ಲಿ ಕಿವೀಸ್ ಪಡೆಯನ್ನು ಸೋಲಿಸುವುದು ಸುಲಭವಲ್ಲ, ಆದರೂ, ಬಿಸಿಸಿಐ ಯುವ ಆಟಗಾರರ ಮೇಲೆ ವಿಶ್ವಾಸವಿರಿಸಿದ್ದು, ಆಕ್ರಮಣಕಾರಿ ಆಟವನ್ನು ಮೈಗೂಡಿಸಿಕೊಂಡರೆ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸುವುದು ಟೀಂ ಇಂಡಿಯಾಗೆ ಸುಲಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications