ಶನಿವಾರ, ಸೆಪ್ಟೆಂಬರ್ 1ರಂದು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡುತ್ತಿವೆ.
ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಹೀಗಾಗಿ ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡ ಮೊದಲು ಬೌಲಿಂಗ್ ಮಾಡುತ್ತಿದೆ.

ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಭಾರತ ಕ್ರಿಕೆಟ್ ತಂಡಕ್ಕೆ ಪುನರಾಗಮನ ಮಾಡಿದ್ದಾರೆ. ಪಾಕಿಸ್ತಾನ ವಿರುದ್ಧ ರೋಹಿತ್ ಶರ್ಮಾ ನಾಯಕತ್ವದ ಆಡುವ 11ರ ಬಳಗದಲ್ಲಿ ಮೂವರು ವೇಗದ ಬೌಲರ್‌ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಭಾರತ ತಂಡದ ಆಡುವ ಬಳಗದಲ್ಲಿ ಒಂದು ವರ್ಷದ ಬಳಿಕ ಜಸ್ಪ್ರೀತ್ ಬುಮ್ರಾ ಏಕದಿನ ಸ್ವರೂಪಕ್ಕೆ ಮರಳಿದ್ದರೆ, ವೇಗದ ಆಲ್‌ರೌಂಡರ್ ರೂಪದಲ್ಲಿ ಶಾರ್ದೂಲ್ ಠಾಕೂರ್ ಅವಕಾಶ ನೀಡಲಾಗಿದೆ. ಇನ್ನು ಮೊಹಮ್ಮದ್ ಸಿರಾಜ್ ಅವರು ನಿರೀಕ್ಷಿತ ವೇಗದ ಬೌಲಿಂಗ್ ಆಯ್ಕೆಯಾಗಿದೆ.
ಆದರೆ, ಅನುಭವಿ ವೇಗಿ ಮೊಹಮ್ಮದ್ ಶಮಿ ಅವರನ್ನು ಭಾರತ ತಂಡದ ಆಡುವ 11ರ ಬಳಗದಿಂದ ಹೊರಗಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. ಇನ್ನು ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಮತ್ತು ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇದೇ ವೇಳೆ ವಿಕೆಟ್ ಕೀಪರ್ ಆಯ್ಕೆಯಾಗಿ ಇಶಾನ್ ಕಿಶನ್ ತಂಡದಲ್ಲಿದ್ದಾರೆ. ಆದರೆ, 4ನೇ ಕ್ರಮಾಂಕದಲ್ಲಿ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಾರೆಯೇ?, ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡುತ್ತಾರೆಯೇ ಎಂಬುದು ಕುತೂಹಲಕಾರಿಯಾಗಿದೆ. ಇನ್ನು ಭಾರತ ತಂಡದ ಮ್ಯಾನೇಜ್‌ಮೆಂಟ್ ವಿರಾಟ್ ಕೊಹ್ಲಿಯನ್ನು ನೋಡುತ್ತದೆಯೇ ಎಂಬ ಪ್ರಶ್ನೆಗಳಿವೆ.
ಇದೇ ವೇಳೆ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅವರು ಆಡುವ 11ರ ಬಳಗದಿಂದ ಮೊಹಮ್ಮದ್ ಶಮಿಯನ್ನು ಹೊರಗಿಡುವ ಭಾರತ ತಂಡದ ನಿರ್ಧಾರವನ್ನು ಖಂಡಿಸಿದರು.
ಮೊಹಮ್ಮದ್ ಶಮಿ ಚೆಂಡಿನೊಂದಿಗೆ ಹೆಚ್ಚು ಬೆದರಿಕೆ ಹಾಕುತ್ತಿದ್ದರು ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದು, ಶಾರ್ದೂಲ್ ಠಾಕೂರ್ ಅವರ ಸೇರ್ಪಡೆಯು ಭಾರತದ ಬ್ಯಾಟಿಂಗ್‌ನಲ್ಲಿ 'ಅಭದ್ರತೆಯನ್ನು' ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
"ಶಾರ್ದೂಲ್ ಠಾಕೂರ್ ಅವರಿಗಿಂತ ಮೊಹಮ್ಮದ್ ಶಮಿ ಪಾಕಿಸ್ತಾನಕ್ಕೆ ಹೆಚ್ಚು ಬೆದರಿಕೆ ಹಾಕುತ್ತಿದ್ದರು. ನೀವು ಬ್ಯಾಟಿಂಗ್ ಡೆಪ್ತ್ ಬಗ್ಗೆ ಮಾತನಾಡುತ್ತೀರಿ, ಆದರೆ ಬೌಲಿಂಗ್ ಡೆಪ್ತ್ ಕೂಡ ಮುಖ್ಯವಾಗಿದೆ. ಇದು ನಿಮ್ಮ ಬ್ಯಾಟಿಂಗ್‌ನಲ್ಲಿನ ಅಭದ್ರತೆಯನ್ನು ತೋರಿಸುತ್ತದೆ," ಎಂದು ಟಾಸ್ ನಂತರ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಸಂಜಯ್ ಮಂಜ್ರೇಕರ್ ಹೇಳಿದರು.
ಟಾಸ್ ಗೆದ್ದ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ, "ನಾವು ಮೊದಲು ಬ್ಯಾಟಿಂಗ್ ಮಾಡುತ್ತೇವೆ. ಸುತ್ತಲೂ ಮೋಡವಿದೆ, ಆದರೆ ಅದರ ಬಗ್ಗೆ ಹೆಚ್ಚು ಯೋಚನೆ ಮಾಡಲ್ಲ. ಉತ್ತಮ ಕ್ರಿಕೆಟ್ ಆಡಬೇಕು ಮತ್ತು ಸವಾಲನ್ನು ಸ್ವೀಕರಿಸಬೇಕು. ವೆಸ್ಟ್ ಇಂಡೀಸ್ ಸರಣಿ ನಂತರ, ಸ್ವಲ್ಪ ಸಮಯದ ವಿಶ್ರಾಂತಿ ಪಡೆದಿದ್ದೇವೆ," ಎಂದರು.
"ಬೆಂಗಳೂರಿನಲ್ಲಿ ಎಲ್ಲರೂ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ನಾವು ಏನನ್ನು ಸಾಧಿಸಿತ್ತೇವೆ ಎಂಬುದನ್ನು ನೋಡೋಣ. ಇದು ಗುಣಮಟ್ಟದ ಎದುರಾಳಿಯೊಂದಿಗೆ ಗುಣಮಟ್ಟದ ಪಂದ್ಯಾವಳಿಯಾಗಿದೆ. ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬುಮ್ರಾ ಮರಳಿದ್ದಾರೆ ಮತ್ತು ನಮಗೆ ಮೂವರು ವೇಗಿಗಳು ಸಿಕ್ಕಿದ್ದಾರೆ," ಎಂದು ಟಾಸ್‌ನಲ್ಲಿ ನಾಯಕ ರೋಹಿತ್ ಶರ್ಮಾ ತಿಳಿಸಿದರು.
ಪಾಕಿಸ್ತಾನ ವಿರುದ್ಧ ಗೆದ್ದು ಭಾರತ ತಂಡವು ತಮ್ಮ ಅಭಿಯಾನವನ್ನು ಸಕಾರಾತ್ಮಕ ಫಲಿತಾಂಶದೊಂದಿಗೆ ಆರಂಭಿಸಲು ಎದುರು ನೋಡುತ್ತಿದೆ. ಪಾಕಿಸ್ತಾನ ತಂಡವು ನೇಪಾಳ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಉತ್ತಮವಾಗಿ ಗೆದ್ದಿದೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಸುಮಾರು ಒಂದು ದಶಕದಿಂದ ದ್ವಿಪಕ್ಷೀಯ ಸರಣಿಯನ್ನು ಆಡದ ಕಾರಣ ಕ್ರಿಕೆಟ್ ಅಭಿಮಾನಿಗಳಿಗೆ ಇದು ಹೈ-ವೋಲ್ಟೇಜ್ ಮುಖಾಮುಖಿಯಾಗಿದೆ.
ಇದರ ಪರಿಣಾಮವಾಗಿ ಮೈದಾನದಲ್ಲಿ ಪೈಪೋಟಿಗೆ ಸಾಕ್ಷಿಯಾಗುವ ಏಕೈಕ ಅವಕಾಶವೆಂದರೆ ಏಷ್ಯಾ ಕಪ್ ಅಥವಾ ಐಸಿಸಿ ಪಂದ್ಯಾವಳಿಗಳು. ಇನ್ನು ಭಾರತ ವಿರುದ್ಧದ ಪಂದ್ಯಕ್ಕೆ ಪಾಕಿಸ್ತಾನ ತಂಡ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ.
ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಪಾಕಿಸ್ತಾನ: ಬಾಬರ್ ಅಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಇಮಾಮ್-ಉಲ್-ಹಕ್, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಹಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ.