
ಶ್ರೀಲಂಕಾ ವಿರುದ್ಧ ಸೀಮಿತ ಓವರ್‌ಗಳ ಸರಣಿಯ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದೆ. ಲಂಕಾ ತಂಡದ ಕೋಚ್ ಹಾಗೂ ದತ್ತಾಂಶ ವಿಶ್ಲೇಶಕ ಕೊರೊನಾವೈರಸ್‌ಗೆ ತುತ್ತಾಗಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಸರಣಿಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಶ್ರೀಲಂಕಾ ವಿರುದ್ಧದ ಈ ಸರಣಿ ಟೀಮ್ ಇಂಡಿಯಾ ನಾಯಕನಾಗಿರುವ ಶಿಖರ್ ಧವನ್ ಪಾಲಿಗೆ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.
ಟೀಮ್ ಇಂಡಿಯಾದ ಅನುಭವಿ ಆಟಗಾರ ಶಿಖರ್ ಧವನ್ ಭಾರತದ ಟಿ20 ತಂಡದಿಂದ ಹೊರಗಿದ್ದರು. ಶ್ರೀಲಂಕಾ ವಿರುದ್ಧದ ಸರಣಿಗೆ ಪ್ರಮುಖ ಆಟಗಾರರು ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾರಣ ಧವನ್ ನಾಯಕನಾಗಿ ಜವಾಬ್ಧಾರಿಯನ್ನು ವಹಿಸಿಕೊಂಡಿದ್ದಾರೆ. ಆದರೆ ಟಿ20 ವಿಶ್ವಕಪ್‌ನ ತಂಡದಲ್ಲಿ ಸ್ಥಾನ ಪಡೆಯುವ ದೃಷ್ಟಿಯಿಂದ ಧವನ್ ಪಾಲಿಗೆ ಈ ಪ್ರವಾಸ ಬಹಳಷ್ಟು ನಿರ್ಣಾಯಕವಾಗಿದೆ.
ಟಿ20 ತಂಡದಲ್ಲಿ ರೋಹಿತ್ ಶರ್ಮಾಗೆ ಕೆಎಲ್ ರಾಹುಲ್ ಕಳೆದ ಹಲವು ಸರಣಿಗಳಲ್ಲಿ ಸಾಥ್ ನೀಡುವ ಮೂಲಕ ಧವನ್ ಆಡುವ ಬಳಗದಿಂದ ಹೊರಗುಳಿಯುವಂತಾಗಿದೆ. ಚುಟುಕು ಕ್ರಿಕೆಟ್‌ನಲ್ಲಿ ರೋಹಿತ್ ರಾಹುಲ್ ಜೋಡಿ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಕಾರಣ ಈ ಜೋಡಿಯ ಬದಲಾವಣೆಗೆ ಅವಕಾಶ ತೆರೆದಿರಲಿಲ್ಲ. ಈ ಮಧ್ಯೆ ರಾಹುಲ್ ಕಳೆದ ಇಂಗ್ಲೆಂಡ್ ವಿರುದ್ಧದ ಸರಣಿಯ ಟಿ20 ಸರಣಿಯಲ್ಲಿ ಕೆಲ ಕಳಪೆ ಪ್ರದರ್ಶನ ನೀಡಿದ ನಂತರ ವಿರಾಟ್ ಕೊಹ್ಲಿ ಕೂಡ ಟಿ20 ಮಾದರಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯುವ ಬಗ್ಗೆ ಇಂಗಿತವನ್ನು ವ್ಯಕ್ತಪಡಿಸಿದ್ದರು.
ಈ ಎಲ್ಲಾ ಬೆಳವಣಿಗೆಗಳು ಶಿಖರ್ ಧವನ್ ಪಾಲಿಗೆ ಹಿನ್ನಡೆಯುಂಟು ಮಾಡುವಂತದ್ದೇ ಆಗಿದೆ. ಐಪಿಎಲ್‌ನಲ್ಲಿ ಧವನ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ತೀವ್ರ ಪೈಪೋಟಿಯ ಕಾರಣದಿಂದಾಗಿ ಧವನ್ ಈ ಬಾರಿಯ ವಿಶ್ವಕಪ್‌ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಕಠಿಣವಾಗಿರಲಿದೆ.
ಆದರೆ ಶ್ರೀಲಂಕಾ ಸರಣಿ ಧವನ್ ಪಾಲಿಗೆ ಮತ್ತೊಂದು ಅದ್ಭು ಅವಕಾಶವಾಗಿದೆ. ಧವನ್ ನಾಯಕನಾಗಿ ಈ ತಂಡವನ್ನು ಮುನ್ನಡೆಸುತ್ತಿದ್ದರೂ ಮುಂದಿನ ವಿಶ್ವಕಪ್‌ನಲ್ಲಿ ಸ್ಥಾನ ಪಡೆಯಲು ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಧವನ್ ಸ್ಥಾನ ಪಡೆಯುವ ಅವಕಾಶವಿದೆ.