
ಏಕದಿನ ಸರಣಿಯ ಬಳಿಕ ಭಾರತದ ವಿರುದ್ಧ ಟಿ20 ಸರಣಿಯನ್ನು ಕೂಡ ವೆಸ್ಟ್ ಇಂಡೀಸ್ 3-0 ಅಂತರದಿಂದ ವೈಟ್‌ವಾಶ್‌ಗೆ ಒಳಗಾಗಿ ಭಾರತಕ್ಕೆ ಒಪ್ಪಿಸಿದೆ. ಈ ಸೋಲಿನ ಬಳಿಕ ವೆಸ್ಟ್ ಇಂಡೀಸ್ ತಂಡದ ನಾಯಕ ಕಿರಾನ್ ಪೊಲಾರ್ಡ್ ತಂಡದ ಸದಸ್ಯರನ್ನು ಹುರಿದುಂಬಿಸಿದ್ದಾರೆ. ಸರಣಿಯನ್ನು ಭಾರೀ ಅಂತರದಿಂದ ಕಳೆದುಕೊಂಡರೂ ನಾವು ಅವಮಾನಪಡಬೇಕಾಗಿಲ್ಲ. ತಂಡವಾಗಿ ಭಾರತದ ವಿರುದ್ಧ ಅದ್ಭುತವಾದ ಹೋರಾಟವನ್ನು ಪ್ರದರ್ಶಿಸಿದ್ದೇವೆ ಎಂದು ಕಿರಾನ್ ಪೊಲಾರ್ಡ್ ಹೇಳಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಭಾನುವಾರ ನಡೆದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಸೂರ್ಯಕುಮಾರ್ ಯಾದವ್ ಅವರ ಸ್ಪೋಟಕ 65 ರನ್‌ಗಳ ಪ್ರದರ್ಶನದ ಕಾರಣದಿಂದಾಗಿ ಹಾಗೂ ಭಾರತದ ಬೌಲರ್‌ಗಳ ಸಾಂಘಿಕ ಪ್ರದರ್ಶನದಿಂದಾಗಿ ವೆಸ್ಟ್ ಇಂಡಿಸ್ ವಿರುದ್ಧ 17 ರನ್‌ಗಳ ಅಂತರದ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ವೆಸ್ಟ್ ಇಂಡೀಸ್ ಭಾರತದ ಪ್ರವಾಸದಲ್ಲಿ ಒಂದೇ ಒಂದು ಗೆಲುವು ಕಾಣದೆ ವಾಪಾಸಾಗಬೇಕಾದ ಪರಿಸ್ಥಿತಿ ಉಂಟಾಯಿತು. ಹಾಗಿದ್ದರೂ ತಂಡದ ಆಟಗಾರರಿಗೆ ನಾಯಕ ಕಿರಾನ್ ಪೊಲಾರ್ಡ್ ಸ್ಪೂರ್ತಿಯ ಮಾತುಗಳನ್ನಾಡಿದ್ದಾರೆ.
"ಹೌದು, ನಾವು 3-0 ಅಂತರದಿಂದ ಸರಣಿ ಸೋತಿದ್ದೇವೆ. ಆದರೆ ನಮ್ಮ ಆಟಗಾರರು ಅದ್ಭುತವಾದ ಹೋರಾಟವನ್ನು ಪ್ರದರ್ಶಿಸಿದ್ದು ಉತ್ತಮ ಭರವಸೆ ಮೂಡಿಸಿದ್ದಾರೆ. ಹಾಗಾಗಿ ನಾವು ಈ ಸರಣಿಯಲ್ಲಿ ಪಡೆದಿರುವುದನ್ನು ನೋಡಿದರೆ ಸರಣಿ ಸೋಲಿಗೆ ಅವಮಾನವನ್ನು ಪಡುವ ಅಗತ್ಯವಿಲ್ಲ" ಎಂದು ಕಿರಾನ್ ಪೊಲಾರ್ಡ್ ಪಂದ್ಯದ ಮುಕ್ತಾಯದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ.
"ಸೋಲನ್ನು ಸ್ವೀಕರಿಸಲು ನಾವು ಬೇಸರಗೊಂಡಿದ್ದೇವೆ, ಇದನ್ನು ನಾನು ಒತ್ತಿ ಹೇಳುತ್ತಿದ್ದೇನೆ. ಆದರೆ ಇದು ಕೇವಲ ಅಷ್ಟು ಮಾತ್ರವಲ್ಲ. ನಾವೆಲ್ಲಾ ಇಲ್ಲಿ ಕ್ರಿಕೆಟ್ ಆಟವನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದೇವೆ" ಎಂದಿದ್ದಾರೆ ಪೊಲಾರ್ಡ್. ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಸರಣಿಯನ್ನು ಸಮಬಲಗೊಳಿಸುವ ಅದ್ಭುತ ಅವಕಾಶವಿತ್ತು. ವಿಂಡೀಸ್ ಪಡೆಯ ಸ್ಪೋಟಕ ಆಟಗಾರರಾದ ರೋಮನ್ ಪೋವೆಲ್ ಹಾಗೂ ನಿಕೋಲಸ್ ಪೂರನ್ ಈ ಪಂದ್ಯದಲ್ಲಿ ಭರ್ಜರಿ ಅರ್ಧ ಶತಕ ಸಿಡಿಸಿದಲ್ಲದೆ ಶತಕದ ಜೊತೆಯಾಟವನ್ನು ಕೂಡ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ಭುವನೇಶ್ವರ್ ಕುಮಾರ್ ನಿಡಿದ ಅದ್ಭುತ ಬೌಲಿಂಗ್ ಪ್ರದರ್ಶನದಿಂದಾಗಿ ಭಾರತ ಪಂದ್ಯದಲ್ಲಿ ಮತ್ತೆ ಹಿಡಿತ ಸಾಧಿಸಲು ಯಶಸ್ವಿಯಾಯಿತು. ಈ ಮೂಲಕ ಪಂದ್ಯವನ್ನು ಭಾರತ 8 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ.
ಇನ್ನು ಈ ಸರಿಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ದೊರೆತ ದೊಡ್ಡ ಬಲವೆಂದರೆ ನಿಕೋಲಸ್ ಪೂರನ್ ಫಾರ್ಮ್‌ಗೆ ಮರಳಿರುವುದು. ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಾ ಬಂದಿದ್ದ ಪೂರನ್ ಟಿ20 ಸರಣಿಯಲ್ಲಿ ಅತ್ಯುನ್ನತ ಫಾರ್ಮ್ ಪ್ರದರ್ಶಿಸಿದ್ದಾರೆ. ಮೂರು ಪಂದ್ಯಗಳಲ್ಲಿಯೂ ಭರ್ಜರಿ ಅರ್ಧ ಶತಕ ಸಿಡಿಸಿರುವ ಪೂರನ್ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿದ್ದಾರೆ. 61.33ರ ಸರಾಸರಿಯಲ್ಲಿ ಪೂರನ್ 184 ರನ್ ಗಳಿಸಿದ್ದಾರೆ.
"ನನ್ನ ಪ್ರಕಾರ ಇದೊಂದು ಅತ್ಯುತ್ತಮವಾದ ಸರಣಿಯಾಗಿತ್ತು. ಎಲ್ಲಾ ಆಟಗಾರರು ಕೂಡ ಮುಂದೆ ಬಂದು ತಮ್ಮ ಪ್ರಯತ್ನಗಳನ್ನು ನಡೆಸಿದ್ದಾರೆ. ಇಲ್ಲಿ ಮಾಡಿರುವ ತಪ್ಪುಗಳನ್ನು ಅರಿತುಕೊಳ್ಳಲು ಕೆಲ ಸಮಯಗಳ ಅಗತ್ಯವಿದ್ದು ಅದರ ಮೇಲೆ ನಾವು ಗಮನಹರಿಸಲಿದ್ದೇವೆ. ನಿಕೋಲಸ್ ಅದ್ಭುತವಾದ ಫಾರ್ಮ್ ಪ್ರದರ್ಶಿಸಿದ್ದಾರೆ. ನಾವು ಅವರಿಂದ ನಿರೀಕ್ಷಿಸಿದ್ದ ಸ್ಥಿರತೆಯನ್ನು ಪಡೆದುಕೊಂಡಿದ್ದೇವೆ. ಆತನೋರ್ವ ಯುವ ಆಟಗಾರನಾಗಿದ್ದು ಆತನಿಂದ ಸ್ಥಿರ ಪ್ರದರ್ಶನವನ್ನು ನಾವು ಬಯಸುತ್ತೇವೆ" ಎಂದು ಪೊಲಾರ್ಡ್ ಹೇಳಿದ್ದಾರೆ.