
ಇತ್ತೀಚಿಗೆ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರೋಹಿತ್ ಶರ್ಮಾ ಪಡೆ 1-2 ಅಂತರದಿಂದ ಸೋತು ಮುಖಭಂಗ ಅನುಭವಿಸಿತು.
ಸರಣಿ ನಿರ್ಣಾಯಕವಾಗಿದ್ದ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ತಂಡ 270 ರನ್‌ಗಳ ಗುರಿ ಬೆನ್ನಟ್ಟುವಲ್ಲಿ ವಿಫಲವಾಗಿ 21 ರನ್‌ಗಳಿಂದ ಸೋಲು ಕಂಡಿತು. ಈ ವೇಳೆ ಭಾರತದ ಬ್ಯಾಟಿಂಗ್ ಕ್ರಮಾಂಕ ದೊಡ್ಡ ಜೊತೆಯಾಟ ನಿರ್ಮಿಸುವಲ್ಲಿ ಯಶಸ್ವಿಯಾಗಲಿಲ್ಲ.
ಅದರಲ್ಲಿಯೂ ಮೈದಾನದ ಸುತ್ತಲೂ ಆಡುವ ಸಾಮರ್ಥ್ಯದಿಂದಾಗಿ ಭಾರತದ 360 ಡಿಗ್ರಿ ಬ್ಯಾಟ್ಸ್‌ಮನ್ ಎಂದೇ ಕರೆಯಲ್ಪಡುವ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವಿರುದ್ಧ ಸತತ ಮೂರನೇ ಗೋಲ್ಡನ್ ಡಕ್‌ಗೆ ಔಟಾಗಿದ್ದು ಅಚ್ಚರಿಯಾಗಿತ್ತು.
ಸೂರ್ಯಕುಮಾರ್ ಯಾದವ್ ಪ್ರಸ್ತುತ ಟಿ20 ಕ್ರಿಕೆಟ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕದ ಬ್ಯಾಟರ್ ಆಗಿದ್ದಾರೆ. ಚೆನ್ನೈನಲ್ಲಿ ನಡೆದ ಪಂದ್ಯದ 36ನೇ ಓವರ್‌ನ ಮೊದಲ ಎಸೆತದಲ್ಲೇ ಆಶ್ಟನ್ ಅಗರ್‌ಗೆ ವಿಕೆಟ್ ನೀಡಿದರು. ಮೊದಲೆರಡು ಪಂದ್ಯಗಳಲ್ಲಿ ಮಿಚೆಲ್ ಸ್ಟಾರ್ಕ್ ಅವರು ಎಲ್‌ಬಿಡಬ್ಲ್ಯೂ ಬಲೆಗೆ ಬೀಳಿಸಿದ್ದರು.

ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಅವರ ಕಳಪೆ ಬ್ಯಾಟಿಂಗ್ ಪ್ರದರ್ಶನಕ್ಕೆ ಮಾಜಿ ಕ್ರಿಕೆಟಿಗರಿಂದ ಭಾರೀ ಟೀಕೆಗೆ ಕಾರಣವಾಗಿದೆ. ಕೆಲವರು ಭಾರತದ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಅವರ ಸ್ಥಾನವನ್ನು ಪ್ರಶ್ನಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಈವರೆಗೆ ಏಕದಿನ ಕ್ರಿಕೆಟ್‌ನಲ್ಲಿನ ಅಂಕಿಅಂಶ ನೋಡುವುದಾದರೆ, 21 ಇನ್ನಿಂಗ್ಸ್‌ಗಳಲ್ಲಿ 24ರ ಸರಾಸರಿಯಲ್ಲಿ ಕೇವಲ 433 ರನ್ ಗಳಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಆಡುತ್ತಿರುವ ರೀತಿಗೂ ಏಕದಿನ ಕ್ರಿಕೆಟಿಗೂ ಅಜಗಜಾಂತರ ವ್ಯತ್ಯಾಸವಿದೆ.
ಇದೆ ವೇಳೆ ಭಾರತ ತಂಡದ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಸರಣಿ ಟ್ವೀಟ್ ಮಾಡಿ, ಟಿ20 ಕ್ರಿಕೆಟ್‌ನಲ್ಲಿ ಖ್ಯಾತಿಯನ್ನು ಆಧರಿಸಿ ಬೇರೆ ಸ್ವರೂಪದ ಆಟಗಳಿಗೆ ಸೂರ್ಯಕುಮಾರ್ ಯಾದವ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಭಾರತ ತಂಡದ ಮ್ಯಾನೇಜ್‌ಮೆಂಟ್ ಅನ್ನು ಟೀಕಿಸಿದ್ದಾರೆ.
"ಭಾರತ ತಂಡದಲ್ಲಿ ಕೆಲವು ಆಟಗಾರರು ಮಾತ್ರ ಹೇಗೆ ರಕ್ಷಣೆ ಪಡೆಯುತ್ತಾರೆ ಎಂಬುದಕ್ಕೆ ಸೂರ್ಯಕುಮಾರ್ ಯಾದವ್ ಉತ್ತಮ ಉದಾಹರಣೆ. ಟಿ20 ಕ್ರಿಕೆಟ್ 50 ಓವರ್‌ಗಳ ಆಟಕ್ಕಿಂತ ಭಿನ್ನವಾಗಿದೆ. ಕೇವಲ ಕೆಂಪು ಚೆಂಡು ಮತ್ತು ಬಿಳಿ ಚೆಂಡು ಕ್ರಿಕೆಟ್ ಎಂದು ಪ್ರತ್ಯೇಕಿಸಬೇಡಿ".
"ಸೂರ್ಯಕುಮಾರ್ ಯಾದವ್ ಭಾರತ ಟೆಸ್ಟ್ ತಂಡದ ಭಾಗವಾಗಿದ್ದರು. ಎಲ್ಲಾ ಫಾರ್ಮ್ಯಾಟ್ ಕ್ರಿಕೆಟ್‌ಗೆ ಟಿ20 ಪ್ರದರ್ಶನದ ಆಧಾರದ ಮೇಲೆ ಆಟಗಾರನನ್ನು ಆಯ್ಕೆ ಮಾಡುವುದು ಸಾಧ್ಯವಿಲ್ಲ," ಎಂದು ಲಕ್ಷ್ಮಣ್ ಶಿವರಾಮಕೃಷ್ಣನ್ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು ಮಾಜಿ ಕ್ರಿಕೆಟಿಗರ ಟೀಕೆಗಳ ಹೊರತಾಗಿಯೂ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯುವ ಏಕದಿನ ವಿಶ್ವಕಪ್‌ನಲ್ಲಿ ಸೂರ್ಯಕುಮಾರ್ ಯಾದವ್ ಆಡುವ ನಿರೀಕ್ಷೆಯನ್ನು ಬೆಂಬಲಿಸಿದ್ದಾರೆ.
ಸೂರ್ಯಕುಮಾರ್ ಯಾದವ್ ಮತ್ತು ರೋಹಿತ್ ಶರ್ಮಾ 2023ರ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಲಿದ್ದಾರೆ. ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಏಪ್ರಿಲ್ 2ರಂದು ಆಡಲಿದೆ.