
ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 1-2 ಅಂತರದಿಂದ ಸೋತು ಮುಖಭಂಗ ಅನುಭವಿಸಿತು.
ಈ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ವೈಫಲ್ಯ ಎದ್ದುಕಂಡಿತು. ಅದರಲ್ಲಿಯೂ ಸೂರ್ಯಕುಮಾರ್ ಯಾದವ್ ಇಡೀ ಸರಣಿಯಲ್ಲಿ ಕೇವಲ ಮೂರು ಎಸೆತಗಳನ್ನು ಎದುರಿಸಿ ಯಾವುದೇ ರನ್ ಗಳಿಸಿದೆ ಮೂರು ಬಾರಿ ಶೂನ್ಯಕ್ಕೆ ಔಟಾದರು.
ಇದೀಗ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರು ವಿಶ್ವದ ನಂ.1 ಟಿ20 ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಬೆಂಬಲಕ್ಕೆ ನಿಂತಿದ್ದು, ಉತ್ತಮವಾಗಿ ಪುನರಾಗಮನ ಮಾಡಲು ಬೆಂಬಲಿಸಿದ್ದಾರೆ.
ಸೂರ್ಯಕುಮಾರ್ ಯಾದವ್ 2022ರ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಆದರೆ ಏಕದಿನ ಕ್ರಿಕೆಟ್ ಸ್ವರೂಪದಲ್ಲಿ ಅವರ ಫಾರ್ಮ್ ಅತ್ಯಂತ ಕಳಪೆಯಿಂದ ಕೂಡಿತ್ತು. ಸ್ಟೀವನ್ ಸ್ಮಿತ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಬಲಗೈ ಬ್ಯಾಟರ್ ಸೂರ್ಯಕುಮಾರ್ ಯಾದವ್ ತಮ್ಮ ಆಯ್ಕೆ ಸಮರ್ಥಿಸಿಕೊಳ್ಳಲು ಎಡವಿದರು.

ಸರಣಿಯ ಎಲ್ಲಾ ಮೂರು ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ರನ್ ಖಾತೆ ತೆರೆಯಲು ವಿಫಲವಾದರು ಮತ್ತು ಪ್ರತಿ ಬಾರಿಯೂ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿದರು. ಸತತ ಮೂರು ಡಕ್ ಔಟ್‌ಗಳೊಂದಿಗೆ ಭಾರತೀಯ ಲೆಜೆಂಡ್ ಸಚಿನ್ ತೆಂಡೂಲ್ಕರ್ ಸೇರಿದಂತೆ ಇತರ ಬ್ಯಾಟರ್‌ಗಳ ಕೆಟ್ಟ ದಾಖಲೆಯ ಪಟ್ಟಿಗೆ ಸೇರಿದರು.
ಸತತ ಕಳಪೆ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಪ್ರಮುಖ ಆಟಗಾರ ಮತ್ತು ಇನ್ನಷ್ಟು ಅವಕಾಶ ನೀಡಿದರೆ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿಯೇ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ದೊಡ್ಡ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಂದಾಜಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಯುವರಾಜ್ ಸಿಂಗ್, "ಪ್ರತಿಯೊಬ್ಬ ಕ್ರೀಡಾಪಟು ತಮ್ಮ ವೃತ್ತಿಜೀವನದಲ್ಲಿ ಏರಿಳಿತಗಳನ್ನು ಎದುರಿಸುತ್ತಾನೆ. ನಾವೆಲ್ಲರೂ ಅದನ್ನು ಒಂದು ಹಂತದಲ್ಲಿ ಅನುಭವಿಸಿದ್ದೇವೆ. ಸೂರ್ಯಕುಮಾರ್ ಯಾದವ್ ಭಾರತ ತಂಡಕ್ಕೆ ಪ್ರಮುಖ ಆಟಗಾರ ಮತ್ತು ಅವಕಾಶಗಳನ್ನು ನೀಡಿದರೆ ವಿಶ್ವಕಪ್‌ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಎಂದು ನಾನು ನಂಬುತ್ತೇನೆ. ನಮ್ಮ ಸೂರ್ಯ ಮತ್ತೆ ಉದಯಿಸುತ್ತಾನೆ," ಎಂದು ಬರೆದುಕೊಂಡಿದ್ದಾರೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಆಸ್ಟ್ರೇಲಿಯಾ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್‌ಗೆ ಎಲ್‌ಬಿಡಬ್ಲ್ಯೂ ಮೂಲಕ ವಿಕೆಟ್ ಒಪ್ಪಿಸಿದರು. ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿಯೂ ಮತ್ತೊಮ್ಮೆ ಮಿಚೆಲ್ ಸ್ಟಾರ್ಕ್ ಅವರ ಎಸೆತದಲ್ಲಿ ಎಲ್‌ಬಿಡಬ್ಲ್ಯೂ ಆದರು.
ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಸ್ಪಿನ್ನರ್ ಆಶ್ಟನ್ ಅಗರ್ ಅವರನ್ನು ಮತ್ತೊಮ್ಮೆ ಶೂನ್ಯಕ್ಕೆ ಪೆವಿಲಿಯನ್ ದಾರಿ ತೋರಿಸಿದರು. ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದರೂ ಯಾವುದೇ ರನ್ ಗಳಿಸಲು ವಿಫಲವಾದರು.
ಸೂರ್ಯಕುಮಾರ್ ಯಾದವ್ ಅವರು ಇದೇ ಮಾರ್ಚ್ 31ರಿಂದ ನಡೆಯಲಿರುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 16ನೇ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಲಿದ್ದಾರೆ. 2018ರಿಂದ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯಕುಮಾರ್ ಯಾದವ್ ಪ್ರಮುಖ ಬ್ಯಾಟ್ಸ್‌ಮನ್ ಆಗಿದ್ದಾರೆ.
ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ವಿರುದ್ಧ ಏಪ್ರಿಲ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಡಲಿದೆ.