2022ರಲ್ಲಿ ವಿರಾಟ್ ಕೊಹ್ಲಿ ಧ್ವಂಸ ಮಾಡಿದ 5 ವಿಶ್ವದಾಖಲೆಗಳು ಇದು!

ಟೀಮ್ ಇಂಡಿಯಾ ಪಾಲಿಗೆ 2022 ಅಷ್ಟೇನೂ ಸ್ಮರಣೀಯವಲ್ಲದ ವರ್ಷವಾಗಿತ್ತು. ಟಿ20 ವಿಶ್ವಕಪ್ ಹಾಗೂ ಏಷ್ಯಾಕಪ್‌ನಲ್ಲಿ ಭಾರತ ತಂಡದ ಸೋಲು ಇದಕ್ಕೆ ಕಾರಣ. ಆದರೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮಾತ್ರ ನಿಜಕ್ಕೂ ಖುಷಿ ನೀಡುವ ವರ್ಷ ಎಂಬುದರಲ್ಲಿ ಅನುಮಾನವಿಲ್ಲ. ಸುದೀರ್ಘ ಕಾಲದಿಂದ ಫಾರ್ಮ್ ಕೊರತೆಯಿಂದ ಪರದಾಡುತ್ತಿದ್ಧ ವಿರಾಟ್ ಕೊಹ್ಲಿ ಏಷ್ಯಾಕಪ್‌ನಲ್ಲಿ ಫಾರ್ಮ್ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬಳಿಕ ವಿಶ್ವಕಪ್‌ನಲ್ಲಿಯೂ ತಮ್ಮ ಅದ್ಭುತ ಫಾರ್ಮ್ ಮುಂದುವರಿಸಿದ್ದರು.
2020 ಹಾಗೂ 2021ರಲ್ಲಿ ವಿರಾಟ್ ಕೊಹ್ಲಿ ಕನಿಷ್ಠ ಒಂದು ಶತಕವನ್ನು ಕೂಡ ಬಾರಿಸಲು ವಿಫಲವಾಗಿದ್ದರು. ಆದರೆ 2022ರಲ್ಲಿ ಎರಡು ಶತಕವನ್ನು ಸಿಡಿಸಿದ್ದಾರೆ. ಅಲ್ಲದೆ ಪಾಕಿಸ್ತಾನದ ವಿರುದ್ಧ ವಿಶ್ವಕಪ್‌ನಲ್ಲಿ ಜೀವಮಾನದ ಅತ್ಯುತ್ತಮ ಪ್ರದರ್ಶನವನ್ನು ನೀಡಿ ಭಾರತಕ್ಕೆ ಅವಿಸ್ಮರಣೀಯ ಗೆಲುವು ತಂದುಕೊಟ್ಟಿದ್ದರು.
ಇನ್ನು 2022ರಲ್ಲಿ ಕೂಡ ವಿರಾಟ್ ಕೊಹ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದಾರೆ. ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಿದ ವಿರಾಟ್ ಕೊಹ್ಲಿ 2022ರಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ಟಾಪ್ 5ರಲ್ಲಿ ಕೂಡ ಕಾಣಿಸಿಕೊಳ್ಳಲಿಲ್ಲ. ಹಾಗಿದ್ದರು ಕೂಡ ವಿರಾಟ್ ಕೊಹ್ಲಿ 2022ರಲ್ಲಿ ಕೆಲ ಮಹತ್ವದ ದಾಖಲೆಗಳನ್ನು ಮುರಿದಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 2022ರ ಕ್ಯಾಲೆಂಡರ್ ವರ್ಷದಲ್ಲಿ ಮುರಿದ 5 ಪ್ರಮುಖ ದಾಖಲೆಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ..

ಅತಿ ವೇಗವಾಗಿ 24000 ರನ್ ಗಳಿಸಿದ ಆಟಗಾರ ಕೊಹ್ಲಿ
ಏಷ್ಯಾ ಕಪ್‌ನ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿಶೇಷ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24000 ರನ್‌ಗಳ ಮೈಲಿಗಲ್ಲನ್ನು ವೇಗವಾಗಿ ದಾಟಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಸಾಧನೆಗಾಗಿ ಕೊಹ್ಲಿ 522 ಇನ್ನಿಂಗ್ಸ್‌ಗಳನ್ನು ಬಳಸಿಕೊಂಡಿದ್ದರು. ಇದಕ್ಕೂ ಮುನ್ನ ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದ ಸಚಿನ್ ತೆಂಡೂಲ್ಕರ್ ಅವರಿಗಿಂತ 21 ಇನ್ನಿಂಗ್ಸ್ ಮುನ್ನವೇ ಈ ಸಾಧನೆ ಮಾಡಿದ್ದಾರೆ.

ವೇಗವಾಗಿ 71ನೇ ಅಂತಾರಾಷ್ಟ್ರೀಯ ಶತಕ
ಇನ್ನು 2022ರಲ್ಲಿ ವಿರಾಟ್ ಕೊಹ್ಲಿ 71ನೇ ಅಂತಾರಾಷ್ಟ್ರೀಯ ಶತಕವನ್ನು ಪೂರ್ಣಗೊಳಿಸಿದ್ದಾರೆ. ಈ ಮೈಲಿಗಲ್ಲಿಗಾಗಿ ಕೊಹ್ಲಿ 522 ಇನ್ನಿಂಗ್ಸ್ ಬಳಸಿಕೊಂಡರು. ಈ ದಾಖಲೆ ಕೂಡ ಈ ಮುನ್ನ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿತ್ತು. ಸಚಿನ್ ತೆಂಡೂಲ್ಕರ್ ಅವರಿಗಿಂತ ಒಂದು ಇನ್ನಿಂಗ್ಸ್ ಕಡಿಮೆ ಬಳಸಿಕೊಂಡು ವಿರಾಟ್ ಕೊಹ್ಲಿ ಈ ಮೈಲಿಗಲ್ಲು ದಾಟಿದ್ದಾರೆ.

ಭಾರತೀಯ ಆಟಗಾರರ ಪೈಕಿ ಹೈಯೆಸ್ಟ್ ಟಿ20ಐ ಸ್ಕೋರ್
ಏಷ್ಯಾ ಕಪ್ 2022ರ ಸೂಪರ್ 4 ಹಂತದಲ್ಲಿ ಅಫ್ಘಾನಿಸ್ತಾನದ ವಿರುದ್ಧ ವಿರಾಟ್ ಕೊಹ್ಲಿ ಅಮೋಘ ಶತಕ ದಾಖಲಿಸಿದರು. ಇದು ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ವಿರಾಟ್ ಕೊಹ್ಲಿಯ ಚೊಚ್ಚಲ ಶತಕವೂ ಹೌದು. ಈ ಪಂದ್ಯದಲ್ಲಿ ಕೇವಲ 61 ಎಸೆತಗಳಲ್ಲಿ 122 ರನ್‌ಗಳಿಸಿದ ವಿರಾಟ್ ಕೊಹ್ಲಿ ಚುಟುಕು ಮಾದರಿಯಲ್ಲಿ ಇನ್ನಿಂಗ್ಸ್‌ವೊಂದರಲ್ಲಿ ಭಾರತೀಯರ ಪೈಕಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಟಿ20 ಏಷ್ಯಾ ಕಪ್‌ನಲ್ಲಿ ಅತೀ ಹೆಚ್ಚು ವೈಯಕ್ತಿಕ ಸ್ಕೋರ್
ಇನ್ನು ವಿರಾಟ್ ಕೊಹ್ಲಿ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅತೀ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಕೂಡ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಹಾಂಕಾಂಗ್‌ನ ಬಾಬರ್ ಹೇಯತ್ ಹೆಸರಿನಲ್ಲಿದ್ದ ಈ ದಾಖಲೆ ಕೊಹ್ಲಿ ಪಾಲಾಗಿದೆ.

ಏಕದಿನ ಮಾದರಿಯಲ್ಲಿ ವೇಗವಾಗಿ 44ನೇ ಶತಕ
ಇನ್ನು ಇತ್ತೀಚೆಗಷ್ಟೇ ಅಂತ್ಯವಾದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಕೊಹ್ಲಿ ಅಮೋಘ ಶತಕ ಸಿಡಿಸಿದ್ದಾರೆ. ಈ ಮೂಲಕ 50 ಓವರ್‌ಗಳ ಮಾದರಿಯಲ್ಲಿ ಅತ್ಯಂತ ವೇಗವಾಗಿ 44 ಶತಕ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ. 256ನೇ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಈ ಮಹತ್ವದ ಮೈಲಿಗಲ್ಲು ಸಾಧಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ 2022ರಲ್ಲಿ ಅನೇಕ ಪ್ರಮುಖ ದಾಖಳೆಗಳನ್ನು ಕೂಡ ಬರೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications