ನವದೆಹಲಿ, ಜೂ.29: ಟೀಂ ಇಂಡಿಯಾದ ಜಿಂಬಾಬ್ವೆ ಪ್ರವಾಸಕ್ಕೆ ಭಾರತೀಯ ಕ್ರಿಕೆಟ್ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ನಾಯಕ ಎಂಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅಜಿಂಕ್ಯ ರಹಾನೆ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಸಂದೀಪ್ ಪಾಟೀಲ್ ನೇತೃತ್ವದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಯ್ಕೆ ಸಮಿತಿ ಸದಸ್ಯರು ಜೂ.29ರಂದು ದೆಹಲಿಯಲ್ಲಿ ಸಭೆ ಸೇರಿ ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾ ಸದಸ್ಯರನ್ನು ಅಯ್ಕೆ ಮಾಡಿದ್ದಾರೆ.[2015-16 ಟೀಂ ಇಂಡಿಯಾಕ್ಕೆ ಬಿಗಿ ವೇಳಾಪಟ್ಟಿ ]
ಐಸಿಸಿ ವಿಶ್ವಕಪ್ 2015, ಐಪಿಎಲ್, ಬಾಂಗ್ಲಾ ದೇಶ ಪ್ರವಾಸ ನಂತರ ಟೀಂ ಇಂಡಿಯಾದ ಪ್ರಮುಖ ಆಟಗಾರರು ಜಿಂಬಾಬ್ವೆ ಪ್ರವಾಸದಿಂದ ಹೊರಗುಳಿದಿದ್ದಾರೆ. ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಸುರೇಶ್ ರೈನಾ, ಆರ್ ಅಶ್ವಿನ್, ರೋಹಿತ್ ಶರ್ಮ ಹಾಗೂ ಉಮೇಶ್ ಯಾದವ್ ಪ್ರವಾಸ ಕೈಗೊಳ್ಳುತ್ತಿಲ್ಲ. ಹರ್ಭಜನ್ ಸಿಂಗ್ ಮತ್ತೊಮ್ಮೆ ತಂಡ ಸೇರಿದ್ದರೆ, ರವೀಂದ್ರ ಜಡೇಜರನ್ನು ತಂಡದಿಂದ ಕೈಬಿಡಲಾಗಿದೆ. [ರಾಹುಲ್ ದ್ರಾವಿಡ್ ಕೋಚಿಂಗ್ ಮಾಡಲು ತಂಡ ಪ್ರಕಟ]

ಟೀಂ ಇಂಡಿಯಾ ಇಂತಿದೆ: ಅಜಿಂಕ್ಯ ರಹಾನೆ (ನಾಯಕ), ಮುರಳಿ ವಿಜಯ್, ಅಂಬಟಿ ರಾಯುಡು, ಮನೋಜ್ ತಿವಾರಿ, ಕೇದಾರ್ ಜಾಧವ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ, ಹರ್ಭಜನ್ ಸಿಂಗ್, ಅಕ್ಷರ್ ಪಟೇಲ್, ಕರಣ್ ಶರ್ಮ, ಧವಳ್ ಕುಲಕರ್ಣಿ, ಸ್ಟುವರ್ಟ್ ಬಿನ್ನಿ, ಭುವನೇಶ್ವರ್ ಕುಮಾರ್, ಮೋಹಿತ್ ಶರ್ಮ ಹಾಗೂ ಸಂದೀಪ್ ಶರ್ಮ
ಕರ್ನಾಟಕದಿಂದ ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ (ಮೊದಲ ಪ್ರವಾಸ), ಸ್ಟುವರ್ಟ್ ಬಿನ್ನಿ ತಂಡದಲ್ಲಿದ್ದಾರೆ. ಜಿಂಬಾಬ್ವೆಯಲ್ಲಿ 3 ಏಕದಿನ ಪಂದ್ಯ 2 ಟಿ20 ಪಂದ್ಯಗಳು ನಡೆಯಲಿದ್ದು ಜುಲೈ 10 ರಿಂದ ಪ್ರವಾಸ ಆರಂಭಗೊಳ್ಳಲಿದೆ.
ಲಭ್ಯವಿರುವ ಮಾಹಿತಿ ಪ್ರಕಾರ ಜಿಂಬಾಬ್ವೆ vs ಭಾರತ ಪ್ರವಾಸದ ವೇಳಾಪಟ್ಟಿ
* ಜುಲೈ 10: ಮೊದಲ ಏಕದಿನ ಪಂದ್ಯ, ಹರಾರೆ (12.30 IST)
* ಜುಲೈ 12: ಎರಡನೇ ಏಕದಿನ ಪಂದ್ಯ, ಹರಾರೆ (12.30 IST)
* ಜುಲೈ 14: ಮೂರನೇ ಏಕದಿನ ಪಂದ್ಯ, ಹರಾರೆ (12.30 IST)
* ಜುಲೈ 17: ಮೊದಲ ಟ್ವೆಂಟಿ 20 ಪಂದ್ಯ, ಹರಾರೆ (16.30 IST)
* ಜುಲೈ 19: ಎರಡನೇ ಟ್ವೆಂಟಿ 20 ಪಂದ್ಯ, ಹರಾರೆ (16.30 IST)
(ಒನ್ ಇಂಡಿಯಾ ಸುದ್ದಿ)