ಪಾಕ್ ಜಾಹಿರಾತಿಗೆ ತಪರಾಕಿ ಕೊಟ್ಟ ಭಾರತದ 'ಸ್ಟಾರ್'ಗಳು: ವೈರಲ್ ವಿಡಿಯೋ

ನವದೆಹಲಿ, ಜೂನ್ 15: ಇತ್ತೀಚೆಗಷ್ಟೇ ಭಾರತದ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಬಂಧನವನ್ನು ಅಣಕಿಸಿ ವಿವಾದಾತ್ಮಕ ಜಾಹೀರಾತು ಪ್ರಸಾರ ಮಾಡಿದ್ದ ಪಾಕಿಸ್ತಾನದ ಟಿವಿ ಜಾಹೀರಾತುಗಳಿಗೆ ಭಾರತದ ಯೂಟ್ಯೂಬ್ ಸ್ಟಾರ್‌ಗಳು ಚೆನ್ನಾಗಿ ತಪರಾಕಿ ಕೊಟ್ಟಿದ್ದಾರೆ.
ಭಾರತದ ವಿ ಸೆವೆನ್ ಪಿಕ್ಚರ್ಸ್ ಎಂಬ ಯೂಟ್ಯೂಬ್ ಚಾನೆಲ್ ಪಾಕಿಸ್ತಾನದ ಅವಹೇಳನಾಕಾರಿ ಜಾಹೀರಾತನ್ನು ಅತ್ಯಂತ ಹೀನಾಯವಾಗಿ ಲೇವಡಿ ಮಾಡಿ ವಿಡಿಯೋ ಪ್ರಸಾರ ಮಾಡಿದೆ.
ಮತ್ತೆ ಬಯಲಾಯ್ತು ಪಾಕ್ ವಿಕೃತಿ: ಕ್ರಿಕೆಟ್ ಜಾಹೀರಾತಿನಲ್ಲಿ ಅಭಿನಂದನ್ ಗೆ ಅವಮಾನ
ಮಾತ್ರವಲ್ಲ, ಇಡೀ ದೇಶಕ್ಕೆ ಹೆಮ್ಮೆ ಮೂಡಿಸಿದ್ದ ಅಭಿನಂದನ್ ವರ್ಧಮಾನ್ ಅವರ ಲುಕ್‌ಗೆ ಹೊಸ ಆಯಾಮ ನೀಡಿದೆ. ಈ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಪಾಕಿಸ್ತಾನದ ಜಾಹೀರಾತಿಗೆ ತಿರುಗೇಟು ನೀಡುವ ವಿಡಿಯೋ ಕಥೆ ಹೇರ್ ಸಲೂನ್ ಅಂಗಡಿಯಲ್ಲಿ ನಡೆಯುತ್ತದೆ. ಹೇರ್ ಕಟ್ ಮಾಡಿಸುತ್ತಿದ್ದ ಭಾರತದ ವ್ಯಕ್ತಿ ಯುವರಾಜ್ ಸಿಂಗ್ ಸಿಡಿಸಿದ ಆರು ಸಿಕ್ಸರ್‌ಗಳನ್ನು ಟಿವಿಯಲ್ಲಿ ವೀಕ್ಷಿಸುತ್ತಿರುತ್ತಾನೆ. ಕೆಲವು ವ್ಯಕ್ತಿಗಳನ್ನು ನಾವು ಮರೆಯಲಾಗುವುದಿಲ್ಲ ಎಂದು ಆತ ಸಲೂನ್ ಶಾಪ್‌ನ ಕ್ಷೌರಿಕನಿಗೆ ಹೇಳುತ್ತಾನೆ. ಆಗ ಪಾಕಿಸ್ತಾನದ ಬೆಂಬಲಿಗ ಒಳಗೆ ಪ್ರವೇಶಿಸುತ್ತಾನೆ.

'ಹ್ಯಾಪಿ ಫಾದರ್ಸ್ ಡೇ ಅಪ್ಪ'
ಭಾರತದ ವ್ಯಕ್ತಿಯ ಪಕ್ಕ ಕೂರುವ ಪಾಕಿಸ್ತಾನಿ ಗಿಫ್ಟ್ ಬಾಕ್ಸ್ ಒಂದನ್ನು ಭಾರತೀಯನಿಗೆ ಕೊಟ್ಟು 'ಹ್ಯಾಪಿ ಫಾದರ್ಸ್ ಡೇ ಅಪ್ಪ' ಎಂದು ಹೇಳುತ್ತಾನೆ. ಭಾರತೀಯ ಅದನ್ನು ತೆರೆದಾಗ ಒಳಗೆ ಕರ್ಚೀಫ್ ಇರುತ್ತದೆ. 'ಇದೇನು' ಎಂದು ಕೇಳಿದಾಗ, 'ಕರ್ಚೀಫ್, ಸೋತ ಬಳಿಕ ನೀವು ಮುಖಮುಚ್ಚಿಕೊಳ್ಳಲು' ಎಂದು ಪಾಕಿಸ್ತಾನಿ ವ್ಯಂಗ್ಯವಾಗಿ ನಗುತ್ತಾನೆ.
ಬಳಿಕ ಸಲೂನ್ ಶಾಪ್‌ನ ಕ್ಷೌರಿಕನನ್ನು ಕರೆದು 'ನನಗೆ ಚೆನ್ನಾಗಿ ಶೇವ್ ಮಾಡು. ಈ ಪಂದ್ಯ ಬಹಳ ಕ್ರೂರವಾಗಿದೆ. ಮಗ ಅಪ್ಪನಾಗಿ ಬಿಡಲು ಒಂದೇ ದಿನ ಸಾಕು' ಎಂದು ಮತ್ತೆ ವ್ಯಂಗ್ಯವಾಗಿ ಹೇಳುತ್ತಾನೆ.

ಅಫ್ರಿದಿಯಂತೆ ಕಾಣುತ್ತೀರಿ ನೋಡಿ
ಆಗ ಭಾರತದ ಅಭಿಮಾನಿ ಮತ್ತು ಸಲೂನ್ ಶಾಪ್‌ನ ಕ್ಷೌರಿಕ ಇಬ್ಬರೂ ಪರಸ್ಪರ ಮುಖ ನೋಡಿಕೊಳ್ಳುತ್ತಾರೆ. ಭಾರತೀಯ ಜೆರ್ಸಿ ತೊಟ್ಟ ಅಭಿಮಾನಿಯೊಂದಿಗೆ ಕಣ್ಣಲ್ಲೇ ವ್ಯವಹರಿಸುವ ಕ್ಷೌರಿಕ ಪಾಕ್ ಅಭಿಮಾನಿಯ ಕಣ್ಣಿಗೆ ವೃತ್ತಾಕಾರದಲ್ಲಿ ಕತ್ತರಿಸಿದ ಸೌತೆಕಾಯಿ ತುಂಡು ಇರಿಸುತ್ತಾನೆ. ಬಳಿಕ ಶೇವ್ ಮಾಡಿ ಅಫ್ರಿದಿಯಂತೆ ಕಾಣುಸುತ್ತೀರಿ ನೋಡು ಎನ್ನುತ್ತಾನೆ.
ಭಾರತ-ಪಾಕಿಸ್ತಾನದ ನಡುವೆ ಗೆಲ್ಲೋರು 'ಇವರು' ಎಂದ ಶೋಯೆಬ್ ಅಖ್ತರ್

ಮುಖ ಮುಚ್ಚಿಕೊಳ್ಳಲು ಕರ್ಚೀಫ್
'ನಿನಗೆ ಆಮೇಲೆ ದುಡ್ಡು ಕೊಡುತ್ತೀನಿ' ಎಂದು ಎದ್ದ ಪಾಕ್ ಅಭಿಮಾನಿ ಕನ್ನಡಿ ನೋಡಿ ಗಾಬರಿಯಾಗುತ್ತಾನೆ. 'ಇದೇನು? ಏನು ಮಾಡಿದ್ದೀಯಾ' ಎಂದು ರೇಗುತ್ತಾನೆ. ಆಗ ಭಾರತದ ಅಭಿಮಾನಿ 'ಇದು ಅಭಿನಂದನ್ ಕಟ್. ನಮ್ಮ ಹೀರೋನ ಸ್ಟೈಲ್' ಎಂದು ಕಿಚಾಯಿಸುತ್ತಾನೆ. 'ಆದರೆ ಆತ ನಮ್ಮ ಹೀರೋ ಅಲ್ಲ' ಎಂದು ಪಾಕ್ ಅಭಿಮಾನಿ ಅರಚುತ್ತಾನೆ.
'ನನ್ನ ಗೆಳೆಯರು ಹೊರಗೆ ಕಾಯ್ತಿದ್ದಾರೆ. ಅವರಿಗೆ ಏನು ಹೇಳುವುದು?' ಎಂದು ಹತಾಶೆಯಿಂದ ಕೇಳುತ್ತಾನೆ. ಆಗ ಭಾರತದ ಅಭಿಮಾನಿ ಆತ ಕೊಟ್ಟಿದ್ದ ಕರ್ಚೀಫನ್ನು ಮರಳಿಸಿ, 'ಇದನ್ನು ತಗೋ, ಮುಖ ಮುಚ್ಚಿಕೊಳ್ಳಲು ಬೇಕಾಗುತ್ತದೆ' ಎಂದು ಅಣಕಿಸುತ್ತಾನೆ.

ನಿನ್ನ ಹಣೆ ಬರಹದಲ್ಲಿ ವಿಶ್ವಕಪ್ ಇಲ್ಲ
'ಅಪ್ಪನಿಗೆ ಮಗನನ್ನು ಅರ್ಥ ಮಾಡಿಕೊಳ್ಳಲು ಒಂದು ದಿನ ಸಾಕು. ನಿನ್ನ ಹಣೆಬರಹದಲ್ಲಿ ವಿಶ್ವಕಪ್ ಇಲ್ಲ. ಆದರೆ, ಅಭಿನಂದನ್‌ನ ಚಾಯ್ ಕಪ್ ಮಾತ್ರ ಇದ್ದೇ ಇರುತ್ತದೆ' ಎಂದು ಲೇವಡಿ ಮಾಡಿ ಅಲ್ಲಿಂದ ಹೊರಡುತ್ತಾನೆ. ಹಿನ್ನೆಲೆಯಲ್ಲಿ 'ಮೌಕಾ ಮೌಕಾ' ಹಾಡು ಕೇಳಿಬರುತ್ತದೆ.
ಭಾರತ Vs ಪಾಕಿಸ್ತಾನ: ವಿಶ್ವಕಪ್‌ನ ಮರೆಯಲಾಗದ ಐದು ಕ್ಷಣಗಳು

ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಜತೆಗೆ ಪರ-ವಿರೋಧದ ಅಭಿಪ್ರಾಯವೂ ವ್ಯಕ್ತವಾಗಿದೆ. ಇದೊಂದು ಅತ್ಯಂತ ಸೃಜನಾತ್ಮಕ ವಿಡಿಯೋ. ಪಾಕಿಸ್ತಾನದ ಜಾಹೀರಾತಿಗೆ ತೀಕ್ಷ್ಣವಾಗಿ ತಿರುಗೇಟು ನೀಡುವ ವಿಡಿಯೋ ಎಂದು ಅನೇಕರು ಕೊಂಡಾಡಿದ್ದಾರೆ.
ಆದರೆ, ಇದು ಕೀಳುಮಟ್ಟದ ಮತ್ತು ಅವಮಾನಕಾರಿ ಜಾಹೀರಾತು ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ಕೂಡ ವ್ಯಕ್ತವಾಗಿದೆ.

ಅಭಿನಂದನ್ ಹೋಲುವ ವಿಡಿಯೋ
ಪಾಕಿಸ್ತಾನದ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ತಮಗೆ ಅರಿವಿಲ್ಲದೆ ಪಾಕಿಸ್ತಾನದ ನೆಲದಲ್ಲಿ ಇಳಿದು ಬಂಧನಕ್ಕೆ ಒಳಗಾಗಿದ್ದರು. ಈ ಸಂದರ್ಭದಲ್ಲಿ ಅವರು ಟೀ ಕುಡಿಯುತ್ತಾ ಪಾಕಿಸ್ತಾನದ ಸೇನೆಯ ಪ್ರಶ್ನೆಗಳಿಗೆ ಉತ್ತರಿಸುವ ವಿಡಿಯೋ ವೈರಲ್ ಆಗಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಪಾಕಿಸ್ತಾನದ ಚಾನೆಲ್‌ಗಳು ಅಭಿನಂದನ್ ಅವರಂತೆ ವೇಷ ತೊಟ್ಟ ಭಾರತೀಯನ್ನು ವಿಚಾರಣೆ ಮಾಡುವಂತಹ ವಿಡಿಯೋ ಪ್ರಸಾರ ಮಾಡಿದ್ದವು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications