
ಬೆಂಗಳೂರು, ಮೇ 18: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಹೈದರಾಬಾದ್ ವಿರುದ್ಧ ಬೆಂಗಳೂರು ಪಂದ್ಯದಲ್ಲಿ ಬೆಂಗಳೂರು ತಂಡದ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಆರ್ಭಟ ಮತ್ತು ಅತ್ಯಾಕರ್ಷಕ ಕ್ಯಾಚ್ ಈಗ ಹೆಚ್ಚು ಸದ್ದು ಮಾಡುತ್ತಿದೆ.
ಹೈದರಾಬಾದ್ ಇನ್ನಿಂಗ್ಸ್ ನ 7ನೇ ಓವರ್ ನಲ್ಲಿ ಮೋಯೀನ್ ಆಲಿ ಅವರ ಎಸೆತಕ್ಕೆ ಅಲೆಕ್ಸ್ ಹೇಲ್ಸ್ ಬೀಸಿದ ಬ್ಯಾಟ್ ಚೆಂಡನ್ನು ಸಿಕ್ಸ್ ಲೈನ್ ಗೆ ಅಟ್ಟಿತ್ತು. ಸುತ್ತ ನೆರೆವರೆಲ್ಲರೂ ಅದು ಸಿಕ್ಸ್ ಎಂದೇ ಭಾವಿಸಿದ್ದರು. ಅಷ್ಟರಲ್ಲೆ ಗಾಳಿಗೆ ಜಿಗಿದ ಡಿವಿಲಿಯರ್ಸ್ ಚೆಂಡನ್ನು ಹಿಡಿದೇಬಿಟ್ಟರು.
ಸ್ಪೈಡರ್ ಮ್ಯಾನ್ ಕೂಗು
ಇಷ್ಟಾಗುತ್ತಲೇ ಸುತ್ತ ಕುಳಿತಿದ್ದ ಪ್ರೇಕ್ಷಕರೆಡೆಯಿಂದ 'ಸ್ಪೈಡರ್ ಮ್ಯಾನ್' ಕೂಗು ಕೇಳಿಸಿತ್ತು. 14ರನ್ ನೊಂದಿಗೆ ಹೈದರಾಬಾದ್ ತಂಡವನ್ನು ಬಗ್ಗು ಬಡಿದ ಬೆಂಗಳೂರು ತಂಡ ಜಯದ ಕೇಕೆ ಹಾಕಿತು. ಅಷ್ಟರಲ್ಲಾಗಲೇ ಅದ್ಭುತ ಕ್ಯಾಚ್ ಹಿಡಿದಕ್ಕಾಗಿ ಡಿವಿಲಿಯರ್ಸ್ ಅವರನ್ನು 'ಸ್ಪೈಡರ್ ಮ್ಯಾನ್' ಎಂದೇ ಮೈದಾನದುದ್ದಕ್ಕೂ ಎಲ್ಲರೂ ಕರೆಯತೊಡಗಿದರು. ಇದರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೊಬ್ಬ ಸ್ಪೈಡರ್ ಮ್ಯಾನ್ ಹುಟ್ಟಿಕೊಂಡಾಯ್ತು!.
ಎಬಿ ಒಬ್ಬ ಅಸಾಮಾನ್ಯ ವ್ಯಕ್ತಿ
ಈಬಗ್ಗೆ ಐಸಿಸಿ ವೆಬ್ ಸೈಟ್ ನಲ್ಲಿ ಅನಿಸಿಕೆ ಹಂಚಿಕೊಂಡಿರುವ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ, 'ಎಬಿ ಒಬ್ಬ ಅಸಾಮಾನ್ಯ ವ್ಯಕ್ತಿ' ಎಂದು ಬಣ್ಣಿಸಿದ್ದಾರೆ. ಜೊತೆಗೆ ಅದ್ಭುತ ಕ್ಯಾಚ್ ಹಿಡಿದ ಎಬಿಸಿ ಒಂದು ರೀತಿಯಲ್ಲಿ ಸೂಪರ್ ಮ್ಯಾನ್ ಇದ್ದಂತೆ ಎಂದಿದ್ದಾರೆ.
ಗುರುವಾರ ಪಂದ್ಯದಲ್ಲಿ ಬೆಂಗಳೂರು ತಂಡವನ್ನು ಗೆಲ್ಲಿಸಿದ್ದು ಮತ್ತು ಆರ್ಸಿಬಿಯ ಪ್ಲೇಆಫ್ ಕನಸು ಜೀವಂತವಾಗಿಸಿದ್ದೇ ಎಬಿ ಡಿವಿಲಿಯರ್ಸ್. 39 ಎಸೆತಗಳನ್ನು ಎದುರಿಸಿದ ಎಬಿಡಿ 69 ರನ್ ಪೇರಿಸಿದರಲ್ಲದೆ ಅಮೋಘ ಫೀಲ್ಡಿಂಗ್ ಮೂಲಕ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಕಾಡಿದರು.
ಭರ್ಜರಿ 12 ಬೌಂಡರಿ
ಬ್ಯಾಟಿಂಗ್ ವೇಳೆ ಡಿವಿಲಿಯರ್ಸ್ ಬ್ಯಾಟ್ ನಿಂದ 12 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಿಡಿದಿತ್ತು. ಅತ್ತ ಹೈದರಾಬಾದ್ ತಂಡದಿಂದ ಕೇನ್ ವಿಲಿಯಮ್ಸ್ ಹೊರತು ಉಳಿದ ಬ್ಯಾಟ್ಸ್ಮನ್ ಗಳು ಹೆಚ್ಚಿನ ಬೆಂಬಲಕ್ಕೆ ನಿಲ್ಲದಿದ್ದಿದ್ದು ಹೈದರಾಬಾದ್ ತಂಡವನ್ನು ಸೋಲಿನಂಚಿಗೆ ತಳ್ಳಿತು.
ಸೂಪರ್ ಕ್ಯಾಚ್ ವೀಡಿಯೋ ಇಲ್ಲಿದೆ ನೋಡಿ.
ಬೆಂಗಳೂರು ನೀಡಿದ್ದ 119 ರನ್ ಗುರಿ ಬೆನ್ನಟ್ಟಿದ ಹೈದರಾಬಾದ್ 20 ಓವರ್ ಗಳಲ್ಲಿ 3 ವಿಕೆಟ್ ಕಳೆದು 204 ರನ್ ಪೇರಿಸಿ ಶರಣಾಯಿತು.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಗಳಲ್ಲಿ ಈಗಲೂ ಎಬಿಡಿಯ ಅದ್ಭುತ ಕ್ಯಾಚ್ ಕುರಿತ ಪೋಸ್ಟ್ (ಫೋಟೋ)ಗಳು ಹೆಚ್ಚೆಚ್ಚು ಹರಿದಾಡುತ್ತಿದೆ. ಐಪಿಎಲ್ ನ ಸ್ಪೈಡರ್ ಮ್ಯಾನ್, ಸೂಪರ್ ಮ್ಯಾನ್ ಎಂದೆಲ್ಲಾ ಡಿವಿಲಿಯರ್ಸ್ ಫೇಮಸ್ ಆಗುತ್ತಿದ್ದಾರೆ.