
ಪುಣೆ, ಮೇ 5: ಮತ್ತದೇ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 35ನೇ ಪಂದ್ಯಾಟದಲ್ಲಿ ಚೆನ್ನೈ ಎದುರು 6 ವಿಕೆಟ್ ಸೋಲೊಪ್ಪಿಕೊಂಡಿತು. ಆರ್ಸಿಬಿ ನೀಡಿದ್ದ 128 ಕನಿಷ್ಠ ರನ್ ಗುರಿ ಬೆನ್ನಟ್ಟಿದ ಚೆನ್ನೈ 18 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 128 ರನ್ ಪೇರಿಸಿ ಗೆಲುವಿನ ಸಂಭ್ರಮಾಚರಿಸಿತು.
ಬೆಂಗಳೂರು ಪರ ಪಾರ್ಥೀವ್ ಪಟೇಲ್ 53 (41), ಟಿಮ್ ಸೌಥೀ ಅಜೇಯ 36 (26) ರನ್ ಪೇರಿಸಿದ್ದು ಬಿಟ್ಟರೆ, ಬೇರೆಲ್ಲ ಆಟಗಾರರು ಬೆರಳೆಣಿಕೆಯ ರನ್ನಿಗೆ ಪೆವಿಲಿಯನ್ ನತ್ತ ಮುಖ ಮಾಡಿದ್ದು ಆರ್ಸಿಬಿ ಹೀನಾಯ ಸೋಲಿಗೆ ಕಾರಣವಾಯಿತು.
ಧೋನಿ ಕಾಲಿಗೆರಗಿದ ಅಭಿಮಾನಿ
ಬೆಂಗಳೂರು ವಿರುದ್ಧ ಚೆನ್ನೈ ಜಯ ಸಾಧಿಸುತ್ತಲೇ ಮೈದಾನದೊಳಗೆ ನುಗ್ಗಿ ಬಂದ ಎಳೆಯ ಧೋನಿ ಅಭಿಮಾನಿಯೊಬ್ಬ ಕೂಲ್ ಕ್ಯಾಪ್ಟನ್ ಕಾಲಿಗೆರಗಿದರು. ಆ ಸಂದರ್ಭ ಚೆನ್ನೈ ಎಲ್ಲಾ ಆಟಗಾರರು ಚಪ್ಪಾಳೆ ತಟ್ಟಿ ಇದಕ್ಕೆ ಮೆಚ್ಚುಗೆ ಸೂಚಿಸಿದ್ದು ಮೈದಾನದಲ್ಲಿ ಎಲ್ಲರ ಗಮನ ಸೆಳೆಯಿತು.
ಚೆನ್ನೈಯಿಂದ ಅಂಬಾಟಿ ರಾಯುಡು 32 (25), ಸುರೇಶ್ ರೈನ 25 (21), ಎಂಎಸ್ ಧೋನಿ ಅಜೇಯ 31 (23) ಮತ್ತು ಡ್ವೇನ್ ಬ್ರಾವೋ ಅಜೇಯ 14 (17) ರನ್ನುಗಳೊಂದಿಗೆ ಬೆಂಗಳೂರು ಎದುರು ಸುಲಭ ಜಯ ಸಾಧಿಸಿದರು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಆರಂಭದಲ್ಲೇ ವಿಕೆಟ್ ಗಳನ್ನು ಕಳೆದುಕೊಳ್ಳುತ್ತಾ ಬಂತು. ಬ್ರೆಂಡನ್ ಮೆಕಲಮ್ 5, ವಿರಾಟ್ ಕೊಹ್ಲಿ 8, ಎಬಿ ಡಿವಿಲಿಯರ್ಸ್ 1, ಮನ್ ದೀಪ್ ಸಿಂಗ್ 7, ಕಾಲಿನ್ ಡೆ ಗ್ರ್ಯಾಂಡ್ ಹೋಂ 8, ಅಶ್ವಿನ್ 1, ಉಮೇಶ್ ಯಾದವ್ 1, ಮೊಹಮ್ಮದ್ ಸಿರಾಜ್ 3 ರನ್ ಗಳೊಂದಿಗೆ ಸಾಲು ಸಾಲಾಗಿ ಪೆವಿಲಿಯನ್ ದಾರಿ ಹಿಡಿಯುವ ಮೂಲಕ ಆರ್ಸಿಬಿ ಕೆಟ್ಟ ಬ್ಯಾಟಿಂಗ್ ಗೆ ಸಾಕ್ಷಿ ಹೇಳಿದರು.
ಬೆಂಗಳೂರು 20 ಓವರ್ ಗಳಲ್ಲಿ 9 ವಿಕೆಟ್ ಕಳೆದು 127 ರನ್ ಪೇರಿಸಿ ಅದಾಗಲೇ ಚೆನ್ನೈಗೆ ಸುಲಭ ಗೆಲುವನ್ನು ಘೋಷಿಸಿತ್ತು. ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಈ ಪಂದ್ಯದ ಬಳಿಕ ಅಂಕ ಪಟ್ಟಿಯಲ್ಲಿ ಚೆನ್ನೈ ಅಗ್ರ ಸ್ಥಾನಕ್ಕೇರಿದ್ದರೆ, ಆರ್ಸಿಬಿ 3ನೇ ಸ್ಥಾನದಲ್ಲಿದೆ.