
ಹರಿದ ರನ್ ಹೊಳೆ
ಬ್ಯಾಟಿಂಗ್ ಸ್ವರ್ಗವಾದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಷ್ಟು ಪ್ರಮಾಣದ ರನ್ ಹೊಳೆ ಹರಿಯುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಇದಕ್ಕೆ ಕಾರಣ ಆರ್‌ಸಿಬಿ ಬ್ಯಾಟಿಂಗ್ ವೈಫಲ್ಯ ಮತ್ತು ಹೈದರಾಬಾದ್ ತಂಡದ ಬೌಲಿಂಗ್ ಶಕ್ತಿ.
ಆದರೆ, ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ತಂಡ ಹೈದರಾಬಾದ್ ಬೌಲರ್‌ಗಳನ್ನು ಮನಬಂದಂತೆ ಚಚ್ಚಿದರು. 40 ಓವರ್‌ಗಳಲ್ಲಿ 422 ರನ್ ಹರಿದುಬಂತು. ಆದರೆ ಕಳೆದುಕೊಂಡಿದ್ದು 9 ವಿಕೆಟ್‌ಗಳನ್ನು ಮಾತ್ರ. ಗೆಲುವು ಕಾಣುವುದಲ್ಲದೆ ರನ್‌ರೇಟ್ ಹೆಚ್ಚಿಸಿಕೊಳ್ಳುವ ಒತ್ತಡದಲ್ಲಿರುವ ಆರ್‌ಸಿಬಿ ಉತ್ತಮ ರನ್ ಕಲೆಹಾಕಿತು. ಇದಕ್ಕೆ ಮರುಹೋರಾಟ ನಡೆಸಿದರೂ ಹೈದರಾಬಾದ್ ಪ್ರಯತ್ನ ಸಾಕಾಗಲಿಲ್ಲ.

ಎಬಿಡಿ ಎಂಬ ಆಪದ್ಭಾಂದವ
ಕಳೆದ ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದಾಗ ಹೈದರಾಬಾದ್ ತಂಡದ ಸ್ಪಿನ್ನರ್‌ಗಳು ಆರ್‌ಸಿಬಿಯ ಎಬಿ ಡಿವಿಲಿಯರ್ಸ್ ಅವರಿಗೆ ರಟ್ಟೆ ಅರಳಿಸಲು ಅವಕಾಶ ನೀಡಿರಲಿಲ್ಲ. ಆದರೆ, ಗುರುವಾರದ ಆಟ ಬೇರೆಯದೇ ಆಗಿತ್ತು.
ಪಟಪಟನೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆರ್‌ಸಿಬಿಗೆ ಎಬಿಡಿ ಜೀವ ನೀಡಲಿದ್ದಾರೆ ಎಂಬ ಅಭಿಮಾನಿಗಳ ವಿಶ್ವಾಸ ಹುಸಿಯಾಗಲಿಲ್ಲ. ಪಿಚ್‌ನ ಗತಿ ಅರಿಯಲು ಎಬಿಡಿಗೆ ಆರು ಎಸೆತಗಳಷ್ಟೇ ಸಾಕಾಯಿತು. ಸ್ಪಿನ್ ಕೈಚಳಕ ಪುನರಾವರ್ತಿಸಲಿದ್ದಾರೆ ಎಂಬ ನಂಬಿಕೆಯೊಂದಿಗೆ ಹೈದರಬಾದ್ ನಾಯಕ ವಿಲಿಯಮ್ಸನ್ ಅವರು ಶಕೀಬ್ ಉಲ್ ಹಸನ್ ಕೈಗೆ ಚೆಂಡಿತ್ತರು. ಆದರೆ, ಅಲ್ಲಿಂದ ಶುರುವಾಗಿದ್ದು ಎಡಿಬಿ ಆಟ. 13ನೇ ಓವರ್‌ವರೆಗೂ ಎಬಿಡಿ ತಮ್ಮ ಎಂದಿನ ಕರಾಮತ್ತು ಪ್ರದರ್ಶಿಸಿದರು. ಕ್ರೀಡಾಂಗಣದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದರು.

ಕೊನೆಗೂ ಮಿಂಚಿದ ಮೊಯಿನ್ ಅಲಿ
ಆರಂಭದ ಕೆಲವು ಪಂದ್ಯಗಳಲ್ಲಿ ಆಡುವ ಅವಕಾಶ ಪಡೆದುಕೊಳ್ಳದ ಇಂಗ್ಲೆಂಡ್‌ನ ಆಟಗಾರ ಮೊಯಿನ್ ಅಲಿ, ಆಡಿದ ಕೆಲವು ಪಂದ್ಯಗಳಲ್ಲಿ ಅಷ್ಟೇನೂ ಪ್ರಭಾವಿ ಎನಿಸಿರಲಿಲ್ಲ. ಒಂದು ಪಂದ್ಯದಲ್ಲಿ ಆರಂಭಿಕ ಆಟಗಾರನಾಗುವ ಅವಕಾಶವನ್ನೂ ಸದುಪಯೋಗಪಡಿಸಿಕೊಂಡಿರಲಿಲ್ಲ. ಆದರೆ, ಗುರುವಾರ ಎಬಿಡಿ ಜತೆಗೂಡಿದ ಅವರು ಪಂದ್ಯದ ಚಿತ್ರಣವನ್ನೇ ಬದಲಿಸಿದರು.
ಕೇವಲ 34 ಎಸೆತಗಳಲ್ಲಿ 65 ರನ್ ಚಚ್ಚಿದ ಮೊಯಿನ್ ಅಲಿ ಇನ್ನಿಂಗ್ಸ್‌ನಲ್ಲಿ 6 ಸಿಕ್ಸರ್‌ಗಳು ಇದ್ದವು ಎನ್ನುವುದು ಗಮನಾರ್ಹ. ಡಿವಿಲಿಯರ್ಸ್ ಜತೆಗೂಡಿ 107 ರನ್ ಕಲೆಹಾಕುವ ಮೂಲಕ ಹೈದರಾಬಾದ್ ಬೌಲರ್‌ಗಳನ್ನು ಗೋಳು ಹೋಯ್ದುಕೊಂಡರು.

ಗ್ರಾಂಡ್‌ಹೋಮ್ ಕಾಣಿಕೆ
ನ್ಯೂಜಿಲೆಂಡ್‌ನ ಆಲ್‌ರೌಂಡರ್ ಕಾಲಿನ್ ಗ್ರಾಂಡ್‌ಹೋಮ್, ಆರ್‌ಸಿಬಿ ತಂಡಕ್ಕೆ ಹಿಂದಿನ ಪಂದ್ಯಗಳಲ್ಲಿಯೂ ಉತ್ತಮ ಕಾಣಿಕೆ ನೀಡಿದ್ದರು. ಡಿವಿಲಿಯರ್ಸ್ ಮತ್ತು ಮೊಯಿನ್ ಅಲಿ ವಿಕೆಟ್‌ಗಳನ್ನು ಕೇವಲ ನಾಲ್ಕು ರನ್ ಅಂತರದಲ್ಲಿ ಕಳೆದುಕೊಂಡಾಗ ಆರ್‌ಸಿಬಿಗೆ ಹಿನ್ನಡೆಯಾಗುವ ಭೀತಿ ಮೂಡಿತ್ತು. ಆದರೆ, ಗ್ರಾಂಡ್‌ಹೋಮ್ ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿ ರನ್‌ವೇಗವನ್ನು ಮತ್ತಷ್ಟು ಹೆಚ್ಚಿಸಿದರು. ಅವರ ಜತೆಗೆ ಕೊನೆಯಲ್ಲಿ ಸರ್ಫರಾಜ್ ಖಾನ್ ಕೂಡ ಮಹತ್ವದ ಕಾಣಿಕೆ ನೀಡಿದರು. ಇದರಿಂದ ಆರ್‌ಸಿಬಿ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಯಿತು.

ಥಂಪಿ ದಾಖಲೆ!
ಹೈದರಾಬಾದ್ ತಂಡದ ವೇಗದ ಬೌಲರ್ ಬಸಿಲ್ ಥಂಪಿ ಐಪಿಎಲ್ ಇತಿಹಾಸದಲ್ಲಿ ದಾಖಲೆ ಬರೆದರು. ಆದರೆ ಅದು ಅವರ ಪಾಲಿಗೆ ಕಹಿಯಾದ ದಾಖಲೆ. ಭುವನೇಶ್ವರ್ ಕುಮಾರ್ ಬದಲು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡ ಬಸಿಲ್ ಥಂಪಿ ಹೆಗಲ ಮೇಲೆ ಹೊಣೆ ಹೆಚ್ಚಿತ್ತು. ಆದರೆ ಅವರು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ತತ್ತರಿಸಿದರು.
19, 18, 14, 19 ಇದು ಬಸಿಲ್ ಥಂಪಿ ತಮ್ಮ ನಾಲ್ಕು ಓವರ್‌ಗಳಲ್ಲಿ ನೀಡಿರುವ ರನ್. ಒಟ್ಟು 70 ರನ್‌ಗಳನ್ನು ಬಿಟ್ಟುಕೊಟ್ಟ ಥಂಪಿ, ಐಪಿಎಲ್ ಪಂದ್ಯವೊಂದರಲ್ಲಿ ಅತಿ ಹೆಚ್ಚು ರನ್ ನೀಡಿದ ದುಬಾರಿ ಬೌಲರ್ ಎನಿಸಿಕೊಂಡರು.

ಸ್ಪೈಡರ್‌ಮ್ಯಾನ್ ಎಬಿಡಿ
ಬ್ಯಾಟಿಂಗ್‌ನಲ್ಲಿ ಹೈದರಾಬಾದ್ ಬೌಲರ್‌ಗಳನ್ನು ಚೆಂಡಾಡಿದ ಡಿವಿಲಿಯರ್ಸ್ ಮತ್ತು ಮೊಯಿಲ್ ಅಲಿ ಜೋಡಿ ಫೀಲ್ಡಿಂಗ್ ವೇಳೆಯೂ ಮೋಡಿ ಮಾಡಿತು.
ಆರ್‌ಸಿಬಿಗೆ ಅಪಾಯಕಾರಿಯಾಗಿ ಪರಿಣಮಿಸುತ್ತಿದ್ದ ಹೈದರಾಬಾದ್ ಆರಂಭಿಕ ಆಟಗಾರ ಅಲೆಕ್ಸ್ ಹೇಲ್ಸ್ ಔಟಾಗಿದ್ದು ತಂಡಕ್ಕೆ ನಿರಾಳತೆ ನೀಡಿತು. ಮೊಯಿನ್ ಅಲಿ ಬೌಲಿಂಗ್‌ನಲ್ಲಿ ಹೇಲ್ಸ್ ನೀಡಿದ ಕ್ಯಾಚ್ ಅನ್ನು ಡಿವಿಲಿಯರ್ಸ್ ಬೌಂಡರಿ ಲೈನ್‌ನಲ್ಲಿ ಜಿಗಿದು ಅದ್ಭುತವಾಗಿ ಹಿಡಿತಕ್ಕೆ ಪಡೆದುಕೊಂಡ ಬಗೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಈಗಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಪಿಕ್ಚರ್ ಇನ್ನೂ ಮುಗಿದಿಲ್ಲ!
ಸದ್ಯ ಅಭಿಮಾನಿಗಳ ವಿಶ್ವಾಸವನ್ನು ಮರಳಿ ಗಳಿಸಿರುವ ಆರ್‌ಸಿಬಿ ಇಷ್ಟಕ್ಕೇ ನಿಟ್ಟುಸಿರುಬಿಡುವಂತಿಲ್ಲ. ಏಕೆಂದರೆ ಶನಿವಾರ ನಡೆಯಲಿರುವ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಗೆಲ್ಲಲೇಬೇಕು. ಉಭಯ ತಂಡಗಳಿಗೂ ಇದು ಕೊನೆಯ ಪಂದ್ಯ. ಮಾಡುವ ಇಲ್ಲವೇ ಮಡಿ ಎಂಬಂತಾಗಿರುವ ಪಂದ್ಯದಲ್ಲಿ ಸೋತ ತಂಡಕ್ಕೆ ಪ್ಲೇಆಫ್ ಪ್ರವೇಶಿಸುವ ಕನಸು ಭಗ್ನಗೊಳ್ಳಲಿದೆ.
ಹೈದರಾಬಾದ್ ತಂಡ ಈಗಾಗಲೇ ಪ್ಲೇಆಫ್‌ನಲ್ಲಿ ತನ್ನ ಸ್ಥಾನ ಖಾತರಿಪಡಿಸಿಕೊಂಡಿದೆ. ಮುಂದಿನ ಪಂದ್ಯದಲ್ಲಿ ಸೋಲು ಕಂಡರೂ ತೊಂದರೆಯಿಲ್ಲ. ಆದರೆ, ಶನಿವಾರ ತವರು ನೆಲದಲ್ಲಿ ಹೈದರಾಬಾದ್ ತಂಡವನ್ನು ಎದುರಿಸಲಿರುವ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಗೆಲುವು ಅನಿವಾರ್ಯ. ಹೀಗಾಗಿ ಶನಿವಾರ ನಡೆಯಲಿರುವ ಎರಡೂ ಪಂದ್ಯಗಳು ಕುತೂಹಲ ಮೂಡಿಸಿವೆ.


Click it and Unblock the Notifications











