
ಮುಂಬೈ, ಮೇ 6: ಸಾಲಾಗಿ ಸೋತು ಸೋತು ಐಪಿಎಲ್ ಅಂಕಪಟ್ಟಿಯಲ್ಲಿ ತಳ ಸೇರಿದ್ದ ಮುಂಬೈ ಇಂಡಿಯನ್ಸ್ ತಂಡ ರವಿವಾರ ನಡೆದ ಕೋಲ್ಕತ್ತಾ-ಮುಂಬೈ ಪಂದ್ಯದಲ್ಲಿ 13 ರನ್ ರೋಚಕ ಗೆಲುವು ದಾಖಲಿಸಿದೆ.
ರಾಬಿನ್ ಉತ್ತಪ್ಪ (54) ಮತ್ತು ದಿನೇಶ್ ಕಾರ್ತಿಕ್ (36) ಹೋರಾಟದ ಹೊರತಾಗಿಯೂ ಕೋಲ್ಕತ್ತಾ ತಂಡ ಮುಂಬೈ ಎದುರು ಶರಣಾಯಿತು. 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 168 ರನ್ ಪೇರಿಸಲಷ್ಟೇ ಶಕ್ತವಾದ ಕೋಲ್ಕತ್ತಾ ಹಾಲಿ ಚಾಂಪಿಯನ್ಸ್ ಮುಂಬೈ ಎದುರು ಸೋಲೊಪ್ಪಿಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಮುಂಬೈ ಇಂಡಿಯನ್ಸ್ ಸೂರ್ಯಕುಮಾರ್ ಯಾದವ್ ಅರ್ಥಶತಕ (59/39) ರನ್ ನೆರವಿನೊಂದಿಗೆ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 181 ರನ್ ಕಲೆ ಹಾಕಿ ಕೋಲ್ಕತ್ತಾಗೆ 182 ರನ್ ಗುರಿ ನೀಡಿತ್ತು.
ಸೂರ್ಯಕುಮಾರ್ ಅವರೊಂದಿಗೆ ಎವಿನ್ ಲೆವಿಸ್ 43 (28), ಹಾರ್ದಿಕ್ ಪಾಂಡ್ಯ ಅಜೇಯ 35 (30), ಜೆಪಿ ಡುಮಿನಿ ಅಜೇಯ 13 (11), ರೋಹಿತ್ ಶರ್ಮ 11 (11) ಮತ್ತು ಕೃಣಾಲ್ ಪಾಂಡ್ಯ 14 (11) ರನ್ ಸೇರಿಸಿ ತಂಡಕ್ಕೆ ತಕ್ಕ ಮಟ್ಟಿನ ಸಾಥ್ ನೀಡಿದರು.
ಕೋಲ್ಕತ್ತಾ ಪರ ಸುನೀಲ್ ನಾರಾಯಣ್ ಮತ್ತು ಆಂಡ್ರೆ ರಸೆಲ್ ಬೌಲಿಂಗ್ ದಾಳಿ ನಡೆಸಿದರು. ಸುನೀಲ್ 35 ರನ್ನಿಗೆ 2 ವಿಕೆಟ್ ಕಬಳಿಸಿದರೆ, ರಸೆಲ್ 12 ರನ್ನಿಗೆ 2 ವಿಕೆಟ್ ಉರುಳಿಸಿ ಎದುರಾಳಿಗೆ ಕೊಂಚ ಮಟ್ಟಿಗೆ ತಡೆಯೊಡ್ಡಿದರು.
ಆದರೆ ಕೋಲ್ಕತ್ತಾ ಆರಂಭದಿಂದಲೂ ಜಾಣ್ಮೆಯ ಆಟ ಮೆರೆಯಲಿಲ್ಲ. ಮುಂಬೈ ಮೊದಲ ವಿಕೆಟ್ ಉದುರುವಾಗ 91 ರನ್ ಗಳು ತಂಡದ ಖಾತೆಯಲ್ಲಿದ್ದರೆ, ಕೋಲ್ಕತ್ತಾ 28 ರನ್ನಿಗೇ ಕ್ರಿಸ್ ಲಿನ್ ಅವರ ವಿಕೆಟ್ ಕಳೆದು ಆರಂಭದಲ್ಲೇ ಭೀತಿಗೊಳಗಾಯಿತು.
ರಾಬನ್ ಉತ್ತಪ್ಪ 54 (35), ನಿತೀಶ್ ರಾಣ 31 (27), ಕ್ರಿಸ್ ಲಿನ್ 17 (13) ರನ್ ಕೊಡುಗೆ ಕೋಲ್ಕತ್ತಾ ಎದುರಾಳಿಗೆ ಪೈಪೋಟಿ ನೀಡುವಲ್ಲಿ ನೆರವಾಯಿತು. ಆದರೆ ರಸೆಲ್ (9/10) ಮತ್ತು ಸುನೀಲ್ ನಾರಾಯಣ್ (5/4) ರನ್ ಕೊಡುಗೆ ತಂಡವನ್ನು ಬಲಗೊಳಿಸಲಿಲ್ಲ. ನಾಯಕ ದಿನೇಶ್ ಕಾರ್ತೀಕ್ ಅವರ ಹೋರಾಟ (36/26 ಅಜೇಯ) ವ್ಯರ್ಥವಾಯಿತು.
ಹಾರ್ದಿಕ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.