
ನವದೆಹಲಿ, ಮೇ 21: ಐಪಿಎಲ್ ಪ್ಲೇ-ಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳುವಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸೋತಿದೆ. ಆದರೆ ಪಂಜಾಬ್ ಸಹ ಮಾಲಕಿ ಪ್ರೀತಿಝಿಂಟಾಗೆ ಪಂಜಾಬ್ ಪ್ಲೇಆಫ್ ನಿಂದ ಹೊರಬಿದ್ದ ಬೇಸರಗಿಂತ ಮುಂಬೈ ಇಂಡಿಯನ್ಸ್ ತಂಡ ಪ್ಲೇ-ಆಫ್ ಗೆ ಅರ್ಹತೆ ಗಿಟ್ಟಿಸಿಕೊಳ್ಳದಿದ್ದಿದ್ದು ಹೆಚ್ಚು ಖುಷಿ ನೀಡಿದೆ.
ಭಾನುವಾರ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ ತಂಡಗಳ ನಡುವಿನ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ವಿರುದ್ಧ 11 ರನ್ ಸೋಲೊಪ್ಪಿಕೊಂಡಿತ್ತಲ್ಲದೆ ಪ್ಲೇಆಫ್ ಸುತ್ತಿಗೆ ಅರ್ಹತೆ ಗಿಟ್ಟಿಸಿಕೊಳ್ಳಲು ಸಿಕ್ಕಿದ್ದ ಕೊನೆಯ ಅವಕಾಶವನ್ನೂ ಬಿಟ್ಟುಕೊಟ್ಟಿತ್ತು.
ಮುಂಬೈ ಸೋತಿದ್ದೇ ತಡ ಪ್ರೀತಿಝಿಂಟಾ ತುಂಬಾ ಖುಷಿಗೊಂಡಿದ್ದರು. ಅವರ ಈ ಖುಷಿ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವೇಳೆ ವ್ಯಕ್ತವಾಗಿತ್ತು. ಝಿಂಟಾ ಖುಷಿ ವ್ಯಕ್ತ ಪಡಿಸಿದ್ದು ವೀಡಿಯೋದಲ್ಲಿ ಸೆರೆಯಾಗಿತ್ತಲ್ಲದೆ ವೈರಲ್ ಕೂಡ ಆಗಿತ್ತು.
ಅಂಬಾನಿ ಮಾಲಕತ್ವದ ಮುಂಬೈ ಇಂಡಿಯನ್ಸ್ ಕಳೆದ ಐದು ವರ್ಷಗಳ ನಡುವಲ್ಲೇ ಮೂರು ಬಾರಿ ಚಾಂಪಿಯನ್ಸ್ ಎನಿಸಿಕೊಂಡಿತ್ತು. ಕಳೆದ ಬಾರಿಯೂ ಮುಂಬೈ ಇಂಡಿಯನ್ಸ್ ತಂಡವೇ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಹೀಗಾಗಿ ಈಬಾರಿಯೂ ಒಂದು ವೇಳೆ ಪ್ಲೇಆಫ್ ಸುತ್ತಿಗೆ ಮುಂಬೈ ಪ್ರವೇಶಿಸಿದ್ದರೆ ಮತ್ತೆ ಚಾಂಪಿಯನ್ ಆಗುವ ಸಾಧ್ಯತೆ ಹೆಚ್ಚಿತ್ತು.
ಝಿಂಟಾ ಸಂಭ್ರಮಿಸುತ್ತಿರುವ ವೀಡಿಯೋ ಇಲ್ಲಿದೆ.
ಹೊಸ ತಂಡ ಟ್ರೋಫಿ ಗೆಲ್ಲಬೇಕು ಎನ್ನುವ ಮಾತುಗಳೇ ಹೆಚ್ಚಿನವರ ಬಾಯಿಯಲ್ಲಿ ಕೇಳಿಬರುತ್ತಿದ್ದು, ಪ್ರೀತಿ ಝಿಂಟಾ ಅವರೂ, 'ಮುಂಬೈಗೆ ಫೈನಲ್ ಪ್ರವೇಶಿಸುವ ಅವಕಾಶವಿಲ್ಲ ಎನ್ನಲು ನನಗೀಗ ತುಂಬಾ ಖುಷಿಯಾಗುತ್ತದೆ. ನಾನು ತುಂಬಾ ಸಂತೋಷಗೊಂಡಿದ್ದೇನೆ' ಎಂದು ಪ್ರತಿಕ್ರಿಯಿಸಿದ್ದ ವೀಡಿಯೋ ವೈರಲ್ ಆಗಿತ್ತು.
ಜೊತೆಗೆ ಝಿಂಟಾ ಅವರ ಈ ಸಂಭ್ರಮ ಅಭಿಮಾನಿಗಳ ಟೀಕೆಗೂ ಗುರಿಯಾಗಿತ್ತು.