
ಕೋಲ್ಕತ್ತಾ, ಮೇ 25: ಐಪಿಎಲ್ ಕ್ವಾಲಿಫೈಯರ್-2ರಲ್ಲಿ ರಶೀದ್ ಖಾನ್ ಸಾಹಸದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ 14 ರನ್ ಜಯ ಸಾಧಿಸುವುದರೊಂದಿಗೆ ಫೈನಲ್ ಗೆ ಲಗ್ಗೆಯಿಟ್ಟಿದೆ.
ಹೈದರಾಬಾದ್ ನೀಡಿದ್ದ 175 ರನ್ ಗುರಿ ಬೆನ್ನಟ್ಟಿದ ಕೋಲ್ಕತ್ತಾ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 160 ರನ್ ಪೇರಿಸಲಷ್ಟೇ ಶಕ್ತವಾಯಿತು. ಕ್ರಿಸ್ ಲಿನ್ 48 (31), ಶುಬ್ ಮಾನ್ ಗಿಲ್ 30 (20), ಸುನೀಲ್ ನರೈನ್ 26 (13) ರನ್ ಬಿಟ್ಟರೆ ಇನ್ಯಾರೂ 25 ರನ್ ಗೆರೆ ದಾಟದಿದ್ದುದು ಕೋಲ್ಕತ್ತಾ ಸೋಲಿಗೆ ಕಾರಣವಾಯಿತು.
ಭಾನುವಾರ ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಚೆನ್ನೈ ಸೂಪರ್ ಕಿಂಗ್ ವಿರುದ್ಧ ಸೆಣಸಾಡಲಿದೆ.
ಕ್ವಾಲಿಫೈಯರ್-2ರಲ್ಲಿ ಮುಖಾಮುಖಿಯಾಗಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ರಶೀದ್ ಖಾನ್ 34 ರನ್, ಸಾಹ 35 ರನ್, ಧವನ್ 34ರನ್ ನೆರವಿನೊಂದಿಗೆ ಹೈದರಾಬಾದ್ ತಂಡ ಕೋಲ್ಕತ್ತಾಕ್ಕೆ 175 ರನ್ ಗುರಿ ನೀಡಿತ್ತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಹೈದರಾಬಾದ್ ಬ್ಯಾಟ್ಸ್ಮನ್ ಗಳ ಬೆಂಬಲವಿಲ್ಲದೆ ಆರಂಭದಲ್ಲಿ ರನ್ ಗಾಗಿ ಪರದಾಡಿತು. ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಪೇರಿಸಿ ಕೋಲ್ಕತ್ತಾಕ್ಕೆ 175ರ ಉತ್ತಮ ರನ್ ಗುರಿ ನೀಡಿತು.
ಸನ್ ರೈಸರ್ಸ್ ಆರಂಭಿಕ ಆಟಗಾರರಾದ ವೃದ್ಧಿಮಾನ್ ಸಾಹ 35 (27) ರನ್ ಮತ್ತು ಶಿಖರ್ ಧವನ್ 34 (24) ರನ್ ಗಳಿಸಿ ಕ್ರಮವಾಗಿ ಚಾವ್ಲಾ ಮತ್ತು ಕುಲದೀಪ್ ಓವರ್ ನಲ್ಲಿ ನಿರ್ಗಮಿಸಿದ್ದು ಸನ್ ರೈಸರ್ಸ್ ರನ್ ಕದಿಯುವಿಕೆಗೆ ತಡೆಹಾಕಿತು.
ನಾಯಕ ಕೇನ್ ವಿಲಿಯಮ್ಸನ್ ಕೂಡ 3 ಎಸೆತಗಳನ್ನು ಎದುರಿಸಿ 3 ರನ್ ಪೇರಿಸಿ ಕುಲದೀಪ್ ಯಾದವ್ ಎಸೆತಕ್ಕೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ನಡೆದಿದ್ದು ಹೈದರಾಬಾದ್ ತಂಡವನ್ನು ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸಿತ್ತು.
ಶಕೀಬ್ ಅಲ್ ಹಸನ್ 28 (24), ದೀಪಕ್ ಹೂಡ 19 (19), ಯೂಸೂಫ್ ಪಠಾನ್ 3 (7), ಬ್ರಾತ್ ವೇಟ್ 28 (9) ರನ್ ಮಾತ್ರ ತಂಡಕ್ಕೆ ಕೊಡುಗೆ ನೀಡಿದರು.
ಆದರೆ ಪಂದ್ಯಾಂತ್ಯಕ್ಕೆ ಬ್ಯಾಟ್ ಕೈಗೆತ್ತಿಕೊಂಡ ರಶೀದ್ ಖಾನ್ (34/10) ಭರ್ಜರಿ ಹೊಡೆತಗಳು ಹೈದರಾಬಾದ್ ತಂಡ ಎದುರಾಳಿಗೆ ಗರಿಷ್ಟ ರನ್ ನೀಡುವಲ್ಲಿ ನೆರವಾಯಿತು.