ರಾಹುಲ್ ಹೋರಾಟ ವ್ಯರ್ಥ: ಪಂಜಾಬ್ ವಿರುದ್ಧ ರಾಜಸ್ಥಾನ್ ಗೆಲುವು

ಜೈಪುರ, ಮೇ 9: ಕಳೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಸೋಲನುಭವಿಸಿದ್ದ ರಾಜಸ್ಥಾನ್ ಈ ಸಾರಿ ಸೇಡು ತೀರಿಸಿಕೊಂಡಿತು. ಜೈಪುರದಲ್ಲಿ ನಡೆದ ಐಪಿಎಲ್ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 15 ರನ್ ಜಯ ಸಾಧಿಸಿದೆ.
ರಾಜಸ್ಥಾನ್ ನೀಡಿದ್ದ 159 ರನ್ ಗುರಿ ತಲುಪಲಾಗದೆ ಪಂಜಾಬ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದು 143 ರನ್ ಪೇರಿಸಿ ರಾಜಸ್ಥಾನ್ ಎದುರು ಸೋಲೊಪ್ಪಿಕೊಂಡಿತು.
ಪಂಜಾಬ್ ನ ಕೆಎಲ್ ರಾಹುಲ್ ಅಜೇಯ 95 (70) ರನ್ ಪೇರಿಸಿ ತಂಡವನ್ನು ಗೆಲ್ಲಿಸಲು ಹರಸಾಹಸ ಪಟ್ಟರಾದರೂ ತಂಡದ ಇತರ ಬ್ಯಾಟ್ಸ್ಮನ್ ಗಳ ಕಳಪೆ ಬ್ಯಾಟಿಂಗ್ ಗೆ ಪಂಜಾಬ್ ಬೆಲೆತೆರಲೇಬೇಕಾಯಿತು.
ಟಾಸ್ ಗೆದ್ದು ಬ್ಯಾಟಿಂಗ್ ಗೆ ಇಳಿದ ರಾಜಸ್ಥಾನ್ ರಾಯಲ್ಸ್ ಮೊದಲೆರಡು ಓವರ್ ಗಳಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ ಜೋಸ್ ಬಟ್ಲರ್ (82/58) ಮತ್ತು ಸಂಜು ಸ್ಯಾಮ್ಸನ್ (22/18) ಬಿಟ್ಟರೆ ಬೇರ್ಯಾರೂ ಹೆಚ್ಚು ಹೊತ್ತು ಕ್ರೀಸಿನಲ್ಲಿ ನಿಲ್ಲಲಿಲ್ಲ.
ರಾಜಸ್ಥಾನ್ ಪರ ಹೋರಾಡಿದ್ದು ಬಟ್ಲರ್ ಒಬ್ಬರೇ. ಅದು ಬಿಟ್ಟರೆ ಬೆನ್ ಸ್ಟೋಕ್ಸ್ 14 (11), ರಹಾನೆ 9 (10), ಕೆ ಗೌತಮ್ 8 (6), ಸ್ಟುವರ್ಟ್ ಬಿನ್ನಿ 11 (7), ಮಹಿಪಾಲ್ ಲಾಮ್ರಾರ್ ಅಜೇಯ 9 (9) ರನ್ ಬಿಟ್ಟರೆ ತಂಡಕ್ಕೆ ಹೆಚ್ಚಿನ ಬೆಂಬಲ ದೊರೆಯಲಿಲ್ಲ.
20 ಓವರ್ ಗಳಲ್ಲಿ 8 ವಿಕೆಟ್ ಕಳೆದು 158 ರನ್ ಪೇರಿಸಿ ರಾಜಸ್ಥಾನ್ ತಂಡ ಪಂಜಾಬ್ ಗೆ 159 ರನ್ ಟಾರ್ಗೆಟ್ ನೀಡಿತ್ತು. ಆದರೆ ಪಂಜಾಬ್ ಆಟಗಾರರ ಬ್ಯಾಟಿಂಗ್ ನಿರ್ಲಕ್ಷ್ಯ ಮತ್ತು ರಾಜಸ್ಥಾನ್ ತಂಡದ ಉತ್ತಮ ಬೌಲಿಂಗ್ ನಿರ್ವಹಣೆ ರಾಜಸ್ಥಾನ್ ರಾಯಲ್ಸ್ ಗೆ ಧನಾತ್ಮಕ ಅಂಶವಾಗಿ ಪರಿಣಮಿಸಿತು.
ಪಂಜಾಬ್ ಪರ ರಾಹುಲ್ ಬಿಟ್ಟರೆ ತಂಡಕ್ಕೆ ಬೇರೆ ಆಟಗಾರರ ಕಿಂಚಿತ್ತೂ ಬೆಂಬಲವೂ ಸಿಗದೆ ಹೋಯಿತು. ಜೊತೆಗೆ ರಾಜಸ್ಥಾನ್ ತಂಡದ ಗೌತಮ್ 12 ರನ್ನಿಗೆ 2 ವಿಕೆಟ್ ಕಬಳಿಸಿದ್ದು ಮತ್ತು ಜೋಫ್ರಾ ಆರ್ಚರ್, ಸ್ಟೋಕ್ಸ್, ಉನಾದ್ಕತ್, ಇಶ್ ಸೋಧಿ ತಲಾ ಒಂದೊಂದು ವಿಕೆಟ್ ಕಬಳಿಸಿ ಪಂಜಾಬ್ ತಂಡವನ್ನು 143 ರನ್ ಗೆ ಕಟ್ಟಿ ಹಾಕಿದರು.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ರಾಜಸ್ಥಾನ್ ಗೆಲುವಿಗೆ ಕಾರಣರಾದ ಬಟ್ಲರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಈ ಪಂದ್ಯದ ಫಲಿತಾಂಶದ ಬಳಿಕ ರಾಜಸ್ಥಾನ್ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಜಿಗಿದಿದ್ದು, ಪಂಜಾಬ್ ಹಿಂದಿನ (3ನೇ) ಸ್ಥಾನದಲ್ಲೇ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications