
ಮುಂಬೈ, ಮೇ 21: ಐಪಿಎಲ್ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ಮತ್ತು ಎರಡನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮಂಗಳವಾರ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿವೆ.
ಪ್ಲೇ-ಆಫ್ ಸುತ್ತಿಗೆ ಆಯ್ಕೆಯಾಗಿರುವ ನಾಲ್ಕು ತಂಡಗಳಲ್ಲಿ ಮೊದಲ (ಕ್ವಾಲಿಫೈಯರ್) ಕಾದಾಟ ಚೆನ್ನೈ ಮತ್ತು ಹೈದರಾಬಾದ್ ನಡುವೆ ನಡೆಯಲಿದ್ದು ಪ್ರಶಸ್ತಿ ಸುತ್ತಿಗೆ ದಾರಿ ಮಾಡಿಕೊಳ್ಳಲು ಎರಡೂ ತಂಡಗಳು ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆಯಿದೆ.
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಎರಡೂ ತಂಡಗಳೂ ಬಲಿಷ್ಟ ಎನ್ನುವುದಕ್ಕೆ ಅಂಕಪಟ್ಟಿಯಲ್ಲಿ ಎರಡೂ ತಂಡಗಳ ಖಾತೆಯಲ್ಲಿರುವ 18 ಅಂಕಗಳು ಸಾಕ್ಷಿ. ಆಡಿರುವ 14 ಪಂದ್ಯಗಳಲ್ಲಿ ಎರಡೂ ತಂಡಗಳು 9ಪಂದ್ಯಗಳನ್ನು ಜಯಿಸಿವೆ.
ಸನ್ ರೈಸರ್ಸ್ ಸೋತಿರುವ 5 ಪಂದ್ಯಗಳಲ್ಲಿ 2 ಸೋಲುಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ಎದುರೇ ಕಂಡಿತ್ತು. ಎರಡೂ ಪಂದ್ಯಗಳಲ್ಲೂ ಚೆನ್ನೈಯ ಅಂಬಾಟಿ ರಾಯುಡು ಸನ್ ರೈಸರ್ಸ್ ಸೋಲಿಗೆ ಕಾರಣವಾಗಿದ್ದರು.. ರಾಯುಡು ಭರ್ಜರಿ ಬ್ಯಾಟಿಂಗ್ ಹೈದರಾಬಾದ್ ತಂಡವನ್ನು ಸೋಲಿನಂಚಿಗೆ ತಳ್ಳಿತ್ತು.
ಹಾಗಂತ ಸೂಪರ್ ಕಿಂಗ್ಸ್ ತಂಡ ಅಂಬಾಟಿ ರಾಯುಡು ಒಬ್ಬರನ್ನೇ ಅವಲಂಭಿಸಿಲ್ಲ. ಚೆನ್ನೈಯ ಬಹುತೇಕ ಬ್ಯಾಟ್ಸ್ಮನ್ ಗಳು ತಂಡಕ್ಕೆ ರನ್ ಕೊಡುಗೆ ನೀಡಬಲ್ಲರು. ತಂಡದ ಗೆಲುವಿಗೂ ಕಾರಣರಾಗಬಲ್ಲರು. ಅದರಲ್ಲೂ ಧೋನಿ ಅನುಭವಿ ಆಟಗಾರರ ಸಾಲಿನಲ್ಲಿ ಹೈದರಾಬಾದ್ ಗೆ ಹೆಚ್ಚು ಅಪಾಯಕಾರಿ ಆಟಗಾರ.
ಮೇಲ್ನೋಟಕ್ಕೆ ಚೇಸಿಂಗ್ ಚಾಂಪಿಯನ್ ಚೆನ್ನೈ ತಂಡವೇ ಗೆಲ್ಲುವ ನೆಚ್ಚಿನ ತಂಡವಾಗಿದ್ದರೂ ಹೈದರಾಬಾದ್ ತಂಡದ ಸಾಧನೆಯನ್ನು, ಆಟಗಾರರನ್ನೂ ಕಡೆಗಣಿಸುವಂತಿಲ್ಲ. ಒಟ್ಟಿನಲ್ಲಿ ನಾಳಿನ ಪಂದ್ಯ ಎರಡರ ನಡುವಿನ ಬಲಾಡ್ಯ ತಂಡವನ್ನು ಹೆಕ್ಕಿ ತೆಗೆಯಲಿದೆ.