
ಅನುಭವಿ ಆಟಗಾರ ರಾಬಿನ್ ಉತ್ತಪ್ಪ ಈ ಬಾರಿ ಐಪಿಎಲ್‌ನ ಆರಂಭದಲ್ಲಿ ಅವಕಾಶವನ್ನೇ ಪಡೆಯದಿದ್ದರೂ ಅಂತಿಮ ಘಟ್ಟದಲ್ಲಿ ಉತ್ತಪ್ಪ ಆಡುವ ಬಳಗದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಉತ್ತಪ್ಪ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಕಣಕ್ಕಿಳಿದಿದ್ದರು. ಆದರೆ ಮೊದಲ ಎರಡು ಪಂದ್ಯಗಳಲ್ಲಿ ಸಂಪೂರ್ಣ ವಿಫಲವಾಗಿದ್ದ ಉತ್ತಪ್ಪ ಪ್ಲೇಆಪ್‌ನ ಪಂದ್ಯದಲ್ಲಿ ಅದ್ಭುತ ಆಟದ ಮೂಲಕ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದರು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಉತ್ತಪ್ಪ ಭರ್ಜರಿ ಅರ್ಧ ಶತಕವನ್ನು ಕೂಡ ಗಳಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಬಿನ್ ಉತ್ತಪ್ಪ ನೀಡಿದ ಈ ಪ್ರದರ್ಶನ ಚೆನ್ನೈ ಸೂಪರ್ ಕಿಂಗ್ಸ್ ತಂಡ ಈ ಬಾರಿಯ ಫೈನಲ್‌ಗೇರಲು ಪ್ರಮುಖ ಪಾತ್ರವಹಿಸಿತು. ಈ ಪಂದ್ಯದಲ್ಲಿ ಉತ್ತಪ್ಪ 63 ರನ್‌ಗಳನ್ನು ಗಳಿಸಿದ್ದಾರೆ. ಈ ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಈ ಮ್ಯಾಚ್ ವಿನ್ನಿಂಗ್ ಪ್ರದರ್ಶನವನ್ನು ಉತ್ತಪ್ಪ ತನ್ನ ಮಗನಿಗೆ ಅರ್ಪಿಸಿದ್ದಾರೆ. ರಾಬಿನ್ ಉತ್ತಪ್ಪ ಪುತ್ರ ಭಾನುವಾರ ನಾಲ್ಕನೇ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲ ವಿಕೆಟ್‌ಅನ್ನು ಸಿಎಸ್‌ಕೆ ಕೇವಲ 3 ರನ್‌ಗಳಿದ್ದಾಗ ಕಳೆದುಕೊಂಡ ಬಳಿಕ ಎರಡನೇ ವಿಕೆಟ್‌ಗೆ ರಾಬಿನ್ ಉತ್ತಪ್ಪ ಹಾಗು ಋತುರಾಜ್ ಗಾಯಕ್ವಾಡ್ ಜೋಡಿ ಶತಕದ ಜೊತೆಯಾಟ ನಿಡುವ ಮೂಲಕ ಗೆಲುವಿನತ್ತ ಮುನ್ನಡೆಸಿದರು. ಈ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿದ ಉತ್ತಪ್ಪ 63 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ಋತುರಾಜ್ ಗಾಯಕ್ವಾಡ್ 50 ಎಸೆತಗಳನ್ನು ಎದುರಿಸಿ 70 ರನ್ ಬಾರಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಸಿಎಸ್‌ಕೆ ಗೆಲುವಿನ ಸನಿಹಕ್ಕೆ ತಲುಪಲು ಸಾಧ್ಯವಾಗಿತ್ತು.
ಈ ಪ್ರದರ್ಶನದ ಬಳಿಕ ರಾಬಿನ್ ಉತ್ತಪ್ಪ ಮಾತನಾಡಿ ಸಂತಸವನ್ನು ಹಂಚಿಕೊಂಡಿದ್ದಾರೆ. "ತುಂಬಾ ಉತ್ತಮವಾದ ಅನುಭವವಾಗುತ್ತಿದೆ. ಉತ್ತಮ ರೀತಿಯಾಗಿ ಕೊಡುಗೆ ನೀಡಲು ಸಾಧ್ಯವಾಗಿದ್ದಕ್ಕೆ ಸಂತಸವಾಗುತ್ತಿದೆ. ಇವತ್ತು ನನ್ನ ಮಗನ ನಾಲ್ಕನೇ ವರ್ಷದ ಹುಟ್ಟುಹಬ್ಬ. ಹಾಗಾಗಿ ನಾನು ಈ ಇನ್ನಿಂಗ್ಸ್‌ಅನ್ನು ಆತನಿಗೆ ಅರ್ಪಿಸುತ್ತೇನೆ. ನಾವು ಉತ್ತಮವಾದ ಆರಂಭವನ್ನು ಪಡೆಯಬೇಕು ಎಂಬ ಯೋಜನೆ ಹಾಕಿಕೊಂಡಿದ್ದೆವು" ಎಂದಿದ್ದಾರೆ ರಾಬಿನ್ ಉತ್ತಪ್ಪ.
ಇನ್ನು ಉತ್ತಪ್ಪ ಬ್ಯಾಟಿಂಗ್ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದವರ ಬಗ್ಗೆಯೂ ಉತ್ತಪ್ಪ ಉತ್ತರಿಸಿದ್ದಾರೆ. "ಹೊರಗಡೆಯಿಂದ ನೀವು ಸಾಕಷ್ಟು ಸದ್ದುಗಳನ್ನು ಕೇಳಿಸಿಕೊಳ್ಳುತ್ತೀರಿ. ಆದರೆ ಆದರೆ ನನಗೆ ನಾನು ಉತ್ತಮವಾಗಿ ಪ್ರದರ್ಶನ ನೀಡಬಲ್ಲೆ ಎಂಬ ವಿಶ್ವಾಸವಿತ್ತು. ಚೆನ್ನೈ ಸೂಪರ್ ಕಿಂಗ್ಸ್ ಅತ್ಯಂತ ಸುರಕ್ಷಿತ ಭಾವನೆಯನ್ನು ಮೂಡಿಸುವಂತಾ ಫ್ರಾಂಚೈಸಿಗಳಲ್ಲಿ ಒಂದು" ಎಂದು ಇದೇ ಸಂದರ್ಭದಲ್ಲಿ ತಮ್ಮ ಫ್ರಾಂಚೈಸಿ ಬಗ್ಗೆಯೂ ಉತ್ತಮ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
ಮೂರು ಬಾರಿಯ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿಯ ಐಪಿಎಲ್‌ನಲ್ಲಿ ಮತ್ತೊಂದು ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಈ ಮೂಲಕ 9ನೇ ಬಾರಿ ಫೈನಲ್‌ಗೇರಿದ ಸಾಧನೆ ಮಾಡಿದೆ ಚೆನ್ನೈ ಸೂಪರ್ ಕಿಂಗ್ಸ್. ಮತ್ತೊಂದೆಡೆ ಕಳೆದ ಬಾರಿದ ಫೈನಲಿಸ್ಟ್ ಆಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಫೈನಲ್‌ಗೇರುವ ಮತ್ತೊಂದು ಅವಕಾಶವಿದೆ. ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗೆದ್ದರೆ ಡೆಲ್ಲಿಗೆ ಈ ಅವಕಾಶ ದೊರೆಯಲಿದೆ.
ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್, ಶಿಖರ್ ಧವನ್ 7, ಪೃಥ್ವಿ ಶಾ 60 (34), ರಿಷಭ್ ಪಂತ್ 51 (35), ಶ್ರೇಯಸ್ ಅಯ್ಯರ್ 1, ಶಿಮ್ರಾನ್ ಹೆಟ್ಮೈರ್ 37 (24), ಅಕ್ಸರ್ ಪಟೇಲ್ 10 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ಕಳೆದು 172 ರನ್ ಗಳಿಸಿತು. ಜೋಶ್ ಹ್ಯಾಝಲ್ವುಡ್ 2, ರವಿಂದ್ರ ಜಡೇಜಾ 1, ಮೊಯೀನ್ ಅಲಿ 1, ಡ್ವೇನ್ ಬ್ರಾವೋ 1 ವಿಕೆಟ್ ಪಡೆದರು. ಗುರಿ ಬೆನ್ನಟ್ಟದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕವಾಡ್ 70, ಫಾಫ್ ಡು ಪ್ಲೆಸಿಸ್ 1, ಮೊಯೀನ್ ಅಲಿ 16, ರಾಬಿನ್ ಉತ್ತಪ್ಪ 63, ಅಂಬಟಿ ರಾಯುಡು 1, ಎಂಎಸ್ ಧೋನಿ 18, ಶಾರ್ದೂಲ್ ಠಾಕೂರ್ 0 ರನ್‌ನೊಂದಿಗೆ 19.4 ಓವರ್‌ಗಳಲ್ಲಿ 6 ವಿಕೆಟ್ ಕಳೆದು 173 ರನ್ ಗಳಿಸಿ ಗೆಲುವಿನ ನಗು ಬೀರಿತು.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಜೋಶ್ ಹ್ಯಾಝಲ್ವುಡ್ 2, ರವೀಂದ್ರ ಜಡೇಜಾ 1, ಮೊಯೀನ್ ಅಲಿ 1, ಡ್ವೇನ್ ಬ್ರಾವೋ 1 ವಿಕೆಟ್ ಪಡೆದರೆ, ಚೆನ್ನೈ ಇನ್ನಿಂಗ್ಸ್‌ನಲ್ಲಿ ಡೆಲ್ಲಿಯ ಟಾಮ್ ಕರನ್ 3, ಅನ್ರಿಕ್ ನಾರ್ಕಿಯಾ 1, ಆವೇಶ್ ಖಾನ್ 1 ವಿಕೆಟ್ ಪಡೆದರು. ಋತುರಾಜ್ ಗಾಯಕ್ವಾಡ್ ಪಂದ್ಯ ಶ್ರೇಷ್ಠರೆನಿಸಿದರು.