
ಚೆನ್ನೈ ಸೂಪರ್ ಕಿಂಗ್ಸ್ ತಂಡ ಅನುಭವಿ ಆರಂಭಿಕ ರಾಬಿನ್ ಉತ್ತಪ್ಪ ಐಪಿಎಲ್ ಇತಿಹಾಸದಲ್ಲಿ ಎರಡು ಮೈಲಿಗಲ್ಲುಗಳನ್ನು ತಲುಪಲು ಒಂದು ಹೆಜ್ಜೆ ಅಷ್ಟೇ ಹಿಂದಿದ್ದಾರೆ. ಗುರುವಾರ ನವಿ ಮುಂಬೈನ ಡಾ. ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸುವ ಮೂಲಕ ಈ ಮೈಲುಗಲ್ಲುಗಳನ್ನು ತಲುಪಲಿದ್ದಾರೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
2008 ರ ಐಪಿಎಲ್ ನ ಮೊದಲ ಆವೃತ್ತಿಯಲ್ಲಿ ಮುಂಬೈ ತಂಡದ ಮೂಲಕ ರಾಬಿನ್ ಉತ್ತಪ್ಪ ಐಪಿಎಲ್ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ತೆರಳಿದರು. 2011 ರ ಮೆಗಾ ಹರಾಜಿನಲ್ಲಿ ಪುಣೆ ವಾರಿಯರ್ಸ್‌ನಿಂದ ಖರೀದಿಸಲ್ಪಟ್ಟ ಅವರು, 2013 ರ ಅಕ್ಟೋಬರ್‌ನಲ್ಲಿ ಬಿಸಿಸಿಐ ಯಿಂದ ಅಧಿಕೃತವಾಗಿ ಫ್ರಾಂಚೈಸಿಯನ್ನು ಕೊನೆಗೊಳಿಸಿದ ನಂತರ, ಉತ್ತಪ್ಪ ಕೆಕೆಆರ್ ತಂಡಕ್ಕೆ ಸೇರಿಕೊಂಡರು. 2014 ರಿಂದ 2019 ರ ವರೆಗೆ ಕೆಕೆಆರ್ ಪರವಾಗಿ ಆಡಿರುವ ಉತ್ತಪ್ಪ, ತಮ್ಮ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಕಾಲ ಕೆಕೆಆರ್ ನೊಂದಿಗೆ ಗುರುತಿಸಿಕೊಂಡು, ಈ ಅವಧಿಯಲ್ಲಿ ಎರಡು ಬಾರಿ ಐಪಿಎಲ್ ಚಾಂಪಿಯನ್ ತಂಡದ ಭಾಗವಾಗಿದ್ದಾರೆ.

ಐಪಿಎಲ್ 2014ರಲ್ಲಿ ಕೆಕೆಆರ್ ಚಾಂಪಿಯನ್ ಆಗಿ ಹೊರಹೊಮ್ಮಿದ ಆವೃತ್ತಿಯಲ್ಲಿ ಉತ್ತಪ್ಪ, 16 ಪಂದ್ಯಗಳಲ್ಲಿ 660 ರನ್ ಗಳಿಸುವ ಮೂಲಕ ಪ್ರಮುಖ ರನ್ ಸ್ಕೋರರ್ ಆಗಿದ್ದರು. ಆ ಐಪಿಎಲ್ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್ ನಂತರ ಆರೆಂಜ್ ಕ್ಯಾಪ್ ಪಡೆದ ಎರಡನೇ ಭಾರತೀಯ ಆಟಗಾರನಾಗಿ ಹೊರಹೊಮ್ಮಿದ್ದರು.
ಉತ್ತಪ್ಪ ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಒಂದು ವರ್ಷ ಕಳೆದರು, ಆದರೆ ಫ್ರಾಂಚೈಸ್‌ನಲ್ಲಿ ಸೂಕ್ತವಾಗಿ ಸ್ಥಾನ ಸಿಗದ ಹಿನ್ನಲೆಯಲ್ಲಿ, ಐಪಿಎಲ್ 2021ರ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ತೆರಳಿದರು. ಸಿಎಸ್‌ಕೆ ಯ ನಾಕೌಟ್ ಹಂತದಲ್ಲಿ ತೋರಿದ ಉತ್ತಮ ಪ್ರದರ್ಶನದೊಂದಿಗೆ, ಉತ್ತಪ್ಪ ಅವರನ್ನು ಫ್ರಾಂಚೈಸಿ ಮೂಲ ಬೆಲೆ 2 ಕೋಟಿಗೆ ಮರು-ಖರೀದಿಸಿತು.
ಎರಡು ಮೈಲಿಗಲ್ಲುಗಳು:
ಐಪಿಎಲ್ 2022ರಲ್ಲಿ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ಕ್ರೀಸ್‌ಗೆ ಇಳಿದ ಉತ್ತಪ್ಪ ಕಳೆದ ಆರು ಪಂದ್ಯಗಳಲ್ಲಿ 197 ರನ್ ಗಳಿಸಿದರು. 36 ವಯಸ್ಸಿನ ಅವರು ಈವರೆಗೂ 199 ಐಪಿಎಲ್ ಪಂದ್ಯಗಳಲ್ಲಿ 4,919 ರನ್ ಗಳಿಸಿದ್ದಾರೆ.
ಉತ್ತಪ್ಪ ಅವರಿಗೆ ಐಪಿಎಲ್ ನಲ್ಲಿ 5,000 ರನ್‌ಗಳನ್ನು ಪೂರೈಸಲು 81 ರನ್‌ಗಳ ಅವಶ್ಯಕತೆ ಇದೆ. ಮುಂಬರುವ ಮುಂಬೈ ವಿರುದ್ದದ ಪಂದ್ಯದಲ್ಲಿ ಉತ್ತಮ ಪ್ರದರ್ಶನದ ಮೂಲಕ 81ರನ್ ಗಳಿಸಿದ್ರೆ , 5,000 ರನ್ ಪೂರೈಸಿದ ಆಟಗಾರ ಎಂಬ ಮೈಲುಗಲ್ಲನ್ನು ತಲುಪಲಿದ್ದಾರೆ.

ಮುಂಬೈ ತಂಡದ ಮೂಲಕ ಐಪಿಎಲ್ ಪಾದಾರ್ಪಣೆ ಮಾಡಿರುವ ರಾಬಿನ್, ಈ ಆವೃತ್ತಿಯಲ್ಲಿ ಅದೇ ತಂಡದ ವಿರುದ್ದ ಸೆಣಸಾಡುವ ಮೂಲಕ ವೃತ್ತಿ ಜೀವನದಲ್ಲಿ ಮೈಲುಗಲ್ಲು ತಲುಪಲಿದ್ದಾರೆ. ಈವರೆಗೂ 199 ಪಂದ್ಯಗಳನ್ನಾಡಿರುವ ಅವರು, ಮುಂಬೈ ವಿರುದ್ದ ಪಂದ್ಯವನ್ನಾಡಿದಲ್ಲಿ ಐಪಿಎಲ್ ಇತಿಹಾಸದಲ್ಲಿ 200ಪಂದ್ಯಗಳನ್ನು ಪೂರೈಸಿದ ಏಳನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಎಂ.ಎಸ್ ಧೋನಿ (226), ದಿನೇಶ್ ಕಾರ್ತಿಕ್ (220), ರೋಹಿತ್ ಶರ್ಮಾ (219), ವಿರಾಟ್ ಕೊಹ್ಲಿ (214), ರವೀಂದ್ರ ಜಡೇಜಾ (206) ಮತ್ತು ಸುರೇಶ್ ರೈನಾ (205) ಪಂದ್ಯಗಳನ್ನಾಡಿ ಮೈಲುಗಲ್ಲು ಸಾಧಿಸಿದ್ದಾರೆ. ಉತ್ತಪ್ಪ ಐಪಿಎಲ್‌ನಲ್ಲಿ ಎಂಟನೇ ಅತಿ ಹೆಚ್ಚು ರನ್ ಗಳಿಸಿದವರಾಗಿದ್ದಾರೆ . ಜೊತೆಗೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಸುರೇಶ್ ರೈನಾ ಅವರೊಂದಿಗೆ ಐಪಿಎಲ್‌ನಲ್ಲಿ 5000 ರನ್ ಗಳಿಸಲು ಮತ್ತು 200 ಪಂದ್ಯಗಳನ್ನಾಡಿದ ಕ್ರಿಕೆಟಿಗ ಎಂಬ ಮೈಲುಗಲ್ಲು ತಲುಪಲಿದ್ದಾರೆ.