GT vs DC : ಇಶಾಂತ್ ಮ್ಯಾಜಿಕ್, ಪಾಂಡ್ಯ ಅರ್ಧಶತಕ ವ್ಯರ್ಥ; ಟೇಬಲ್ ಟಾಪರ್ಸ್ ವಿರುದ್ಧ ಡೆಲ್ಲಿಗೆ ರೋಚಕ ಜಯ!

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 44ನೇ ಪಂದ್ಯದಲ್ಲಿ ಇಂದು ( ಮೇ 2 ) ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದು, ರೋಚಕ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಜಯ ಸಾಧಿಸಿದೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ಹೀನಾಯ ಆರಂಭವನ್ನು ಪಡೆದುಕೊಂಡಿತು. 5 ಓವರ್‌ಗಳಲ್ಲಿಯೇ ಕೇವಲ 23 ರನ್‌ಗಳಿಗೆ ತನ್ನ 5 ವಿಕೆಟ್‌ಗಳನ್ನು ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ಅಮನ್ ಖಾನ್ ಹಾಗೂ ಅಕ್ಷರ್ ಪಟೇಲ್ ನೆಲಕಚ್ಚಿ ನಿಂತು ಆಡಿದ ಕಾರಣ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿ ತನ್ನ ಎದುರಾಳಿ ತಂಡ ಗುಜರಾತ್ ಟೈಟನ್ಸ್ ತಂಡಕ್ಕೆ ಗೆಲ್ಲಲು 131 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲವಾದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 125 ರನ್ ಗಳಿಸಿತು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 5 ರನ್‌ಗಳ ರೋಚಕ ಗೆಲುವನ್ನು ದಾಖಲಿಸಿ ಟೇಬಲ್ ಟಾಪರ್ಸ್‌ಗೆ ಸೋಲುಣಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ಇನ್ನಿಂಗ್ಸ್: ಡೆಲ್ಲಿ ಕ್ಯಾಪಿಟಲ್ಸ್ ಪರ ಆರಂಭಿಕ ಆಟಗಾರರಾಗಿ ಫಿಲಿಪ್ ಸಾಲ್ಟ್ ಹಾಗೂ ನಾಯಕ ಡೇವಿಡ್ ವಾರ್ನರ್ ಕಣಕ್ಕಿಳಿದರು. ಈ ಪೈಕಿ ಫಿಲಿಪ್ ಸಾಲ್ಟ್ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಗೋಲ್ಡನ್ ಡಕ್ ಔಟ್ ಆದರು. ಇದರ ಬೆನ್ನಲ್ಲೇ ಡೇವಿಡ್ ವಾರ್ನರ್ 2 ರನ್ ಬಾರಿಸಿ ರನ್ ಔಟ್ ಆದರು. ಇನ್ನುಳಿದಂತೆ ಪ್ರಿಯಾಮ್ ಗಾರ್ಗ್ 10, ರಿಲೇ ರೊಸ್ಸೋ 8 ಹಾಗೂ ಮನೀಶ್ ಪಾಂಡೆ ಕೇವಲ 1 ರನ್ ಗಳಿಸಿದರು.
ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 5 ಓವರ್‌ಗಳಲ್ಲಿ ಕೇವಲ 23 ರನ್‌ಗಳಿಗೆ ತನ್ನ 5 ವಿಕೆಟ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿತು. ಈ ಸಂದರ್ಭದಲ್ಲಿ ಆರನೇ ವಿಕೆಟ್‌ಗೆ ಒಂದಾದ ಅಕ್ಷರ್ ಪಟೇಲ್ ಹಾಗೂ ಅಮನ್ ಖಾನ್ ಆಸರೆಯಾದರು. ಅಕ್ಷರ್ ಪಟೇಲ್ 30 ಎಸೆತಗಳಲ್ಲಿ 27 ರನ್ ಗಳಿಸಿದರೆ, ಅಮನ್ ಖಾನ್ 44 ಎಸೆತಗಳಲ್ಲಿ 3 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 51 ರನ್ ಬಾರಿಸಿದರು.
ರಿಪಲ್ ಪಟೇಲ್ ಸಹ 13 ಎಸೆತಗಳಲ್ಲಿ 21 ರನ್ ಗಳಿಸಿ ಅಗತ್ಯವಿದ್ದ ಕೊಡುಗೆಯನ್ನು ನೀಡಿದರು. ಇನ್ನುಳಿದಂತೆ ಅನ್ರಿಚ್ ನಾರ್ಕಿಯಾ ಅಜೇಯ 3 ಹಾಗೂ ಕುಲ್‌ದೀಪ್ ಯಾದವ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದುಕೊಂಡರು. ಮೊದಲ 5 ಓವರ್‌ಗಳಲ್ಲಿ ಕೇವಲ 23 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಅಮನ್ ಖಾನ್, ಅಕ್ಷರ್ ಪಟೇಲ್ ಹಾಗೂ ರಿಪಲ್ ಪಟೇಲ್ ಕೈಹಿಡಿದ ಕಾರಣದಿಂದ ಕೊನೆಯ 15 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 107 ರನ್ ಗಳಿಸಿತು.
ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ 4 ವಿಕೆಟ್, ಮೋಹಿತ್ ಶರ್ಮಾ 2 ವಿಕೆಟ್ ಹಾಗೂ ರಶೀದ್ ಖಾನ್ ಒಂದು ವಿಕೆಟ್ ಪಡೆದರು.
ಗುಜರಾತ್ ಟೈಟನ್ಸ್ ಇನ್ನಿಂಗ್ಸ್: ಗುಜರಾತ್ ಟೈಟನ್ಸ್ ಪರ ಆರಂಭಿಕರಾಗಿ ವೃದ್ಧಿಮಾನ್ ಸಹಾ ಡಕ್ ಔಟ್ ಆದರೆ, ಶುಭ್‌ಮನ್ ಗಿಲ್ 6 ರನ್ ಗಳಿಸಿದರು. ಬಳಿಕ ಕಣಕ್ಕಿಳಿದ ವಿಜಯ್ ಶಂಕರ್ 6 ಹಾಗೂ ಡೇವಿಡ್ ಮಿಲ್ಲರ್ ಡಕ್ ಔಟ್ ಆದರು. ಅಭಿನವ್ ಮನೋಹರ್ 26, ರಾಹುಲ್ ತೆವಾಟಿಯಾ 20 ರನ್, ರಶೀದ್ ಖಾನ್ ಅಜೇಯ 3 ರನ್ ಹಾಗೂ ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 59 ರನ್ ಗಳಿಸಿದರು.
ಆರಂಭಿಕ ಕುಸಿತ ಕಂಡಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಆಸರೆಯಾಗಿ ಕೊನೆಯವರೆಗೂ ಕಣದಲ್ಲಿದ್ದರೂ ಸಹ ಗೆಲುವು ತಂದುಕೊಡಲಿಲ್ಲ. ಕೊನೆಯ 12 ಎಸೆತಗಳಲ್ಲಿ ಗೆಲ್ಲಲು 32 ರನ್ ಬೇಕಿದ್ದಾಗ 19ನೇ ಓವರ್‌ನ ಕೊನೆಯ ಮೂರು ಎಸೆತಗಳಲ್ಲಿ ರಾಹುಲ್ ತೆವಾಟಿಯಾ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿದರಾದರು. ಈ ಮೂಲಕ ಕೊನೆಯ 6 ಎಸೆತಗಳಲ್ಲಿ ಗುಜರಾರ್ ಟೈಟನ್ಸ್ ತಂಡಕ್ಕೆ ಗೆಲ್ಲಲು 12 ರನ್‌ಗಳ ಅಗತ್ಯವಿತ್ತು.
ಕೊನೆಯ ಓವರ್ ಎಸೆದ ಇಶಾಂತ್ ಶರ್ಮಾ ಮೊದಲ ಎಸೆತದಲ್ಲಿ 2 ರನ್, ಎರಡನೇ ಎಸೆತದಲ್ಲಿ 1 ರನ್, ಮೂರನೇ ಎಸೆತದಲ್ಲಿ ಡಾಟ್ ಬಾಲ್ ಹಾಕಿದರು ಹಾಗೂ ನಾಲ್ಕನೇ ಎಸೆತದಲ್ಲಿ ರಾಹುಲ್ ತೆವಾಟಿಯಾ ವಿಕೆಟ್ ಪಡೆದರು. ಐದನೇ ಎಸೆತದಲ್ಲಿ ಎರಡು ರನ್ ಹಾಗೂ ಕೊನೆಯ ಎಸೆತದಲ್ಲಿ ಒಂದು ರನ್ ನೀಡಿದರು. ಈ ಮೂಲಕ ಇಶಾಂತ್ ಶರ್ಮಾ ಕೊನೆಯ ಓವರ್‌ನಲ್ಲಿ ಕೇವಲ 7 ರನ್ ನೀಡಿ ಹೀರೋ ಆದರು.
ಡೆಲ್ಲಿ ಕ್ಯಾಪಿಟಲ್ಸ್ ಪರ ಖಲೀಲ್ ಅಹ್ಮದ್ ಹಾಗೂ ಇಶಾಂತ್ ಶರ್ಮಾ ತಲಾ 2 ವಿಕೆಟ್ ಮತ್ತು ಅನ್ರಿಚ್ ನಾರ್ಕಿಯಾ ಹಾಗೂ ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications