
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಲ್‌ರೌಂಡರ್ ಡ್ವೇನ್ ಬ್ರಾವೋ ಐಪಿಎಲ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಐಪಿಎಲ್ ಚುಟುಕು ಕ್ರಿಕೆಟ್ ಲೀಗ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ದಾಖಲೆ ಮಾಡಿದ್ದು, ಮುಂಬೈ ಇಂಡಿಯನ್ಸ್ ತಂಡದ ಲಸಿತ್ ಮಾಲಿಂಗಾ ದಾಖಲೆಯನ್ನ ಮುರಿದಿದ್ದಾರೆ.
ಐಪಿಎಲ್‌ನಲ್ಲಿ ಇತಿಹಾಸ ನಿರ್ಮಿಸಲು ಡ್ವೇನ್ ಬ್ರಾವೋಗೆ ಕೇವಲ ಒಂದು ವಿಕೆಟ್ ಅವಶ್ಯಕತೆಯಿತ್ತು. ಇಂದು ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬ್ರಾವೋ ತನ್ನ ನಾಲ್ಕನೇ ಓವರ್ ಮತ್ತು ತಂಡದ 18ನೇ ಓವರ್‌ನ 2ನೇ ಎಸೆತದಲ್ಲಿ 13ರನ್‌ಗಳಿಸಿದ್ದ ದೀಪಕ್ ಹೂಡ ವಿಕೆಟ್ ಪಡೆಯುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಮುರಿದಿದ್ದಾರೆ.
ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮಾಜಿ ಬೌಲರ್ ಲಸಿತ್ ಮಾಲಿಂಗ (170) ದಾಖಲೆ ಮುರಿದಿದ್ದಾರೆ. ಪ್ರಸ್ತುತ ಬ್ರಾವೋ 171 ವಿಕೆಟ್‌ಗಳೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದು, ಐಪಿಎಲ್ ಟಾಪ್ 6 ವಿಕೆಟ್ ಪಡೆದವರ ಪಟ್ಟಿಯಲ್ಲಿ ಬ್ರಾವೋ ಮತ್ತು ಮಾಲಿಂಗ ನಂತರ ಅಮಿತ್ ಮಿಶ್ರಾ (166), ಪಿಯೂಷ್ ಚಾವ್ಲಾ (157), ಹರ್ಭಜನ್ ಸಿಂಗ್ (150) ಮತ್ತು ರವಿಚಂದ್ರನ್ ಅಶ್ವಿನ್ (145) ಇದ್ದಾರೆ.
ಐಪಿಎಲ್‌ನಲ್ಲಿ 153 ಪಂದ್ಯಗಳನ್ನ ಆಡಿರುವ ಡ್ವೇನ್ ಬ್ರಾವೋ ಬೆಸ್ಟ್ ಬೌಲಿಂಗ್ ಪರ್ಫಾಮೆನ್ಸ್ 22 ರನ್‌ಗೆ 4 ವಿಕೆಟ್ ಪಡೆದಿದ್ದು, 8.35 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ.