ಟೀಮ್ ಇಂಡಿಯಾಗೆ ಮತ್ತೆ ಮರಳುತ್ತಾರಾ ದಿನೇಶ್ ಕಾರ್ತಿಕ್: ಅನುಭವಿ ಆಟಗಾರನಿಗೆ ಫಾಫ್ ಡು ಪ್ಲೆಸಿಸ್ ಬೆಂಬಲ

ಐಪಿಎಲ್ 15ನೇ ಆವೃತ್ತಿಯಲ್ಲಿನ ರೋಚಕ ಸೆಣೆಸಾಟಗಳು ಅಭಿಮಾನಿಗಳು ರಸದೌತಣವನ್ನು ಉಣಬಡಿಸುತ್ತಿದೆ. ಮಂಗಳವಾರ ನಡೆದ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನೇತೃತ್ವದ ರಾಜಸ್ಥಾನ್ ರಾಯಲ್ಸ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದು ಅದ್ಭುತ ಮನರಂಜನೆ ನೀಡಿದೆ. ಅದ್ಭುತ ಹೋರಾಟವನ್ನು ಪ್ರದರ್ಶಿಸಿದ ಆರ್‌ಸಿಬಿ ತಂಡ ಈ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿದೆ. ದಿನೇಶ್ ಕಾರ್ತಿಕ್ ಹಾಗೂ ಶಹ್ಬಾಜ್ ಅಹ್ಮದ್ ಅವರ ಅಮೋಘ ಆಟ ಆರ್‌ಸಿಬಿ ಗೆಲುವನ್ನು ಖಾತ್ರಿಪಡಿಸಿತು.
ಈ ಪಂದ್ಯದ ಬಳಿಕ ಮಾತನಾಡಿದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್ ತಂಡದ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಹಾಗೂ ಶಹ್ಬಾಜ್ ಅಹ್ಮದ್ ಬಗ್ಗೆ ವಿಶೇಷ ಮೆಚ್ಚಿಗೆಯ ಮಾತುಗಳನ್ನಾಡಿದ್ದಾರೆ.

ಆರ್‌ಆರ್ ಕೈಯಿಂದ ಪಂದ್ಯ ಕಸಿದ ಡಿಕೆ- ಶಹ್ಬಾಸ್ ಜೋಡಿ
ಈ ಪಂದ್ಯದಲ್ಲಿ ಆರ್‌ಆರ್ ತಂಡ ನೀಡಿದ್ದ 170 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡ ಉತ್ತಮ ಆರಂಭವನ್ನು ಪಡೆದುಕೊಂಡರೂ ನಂತರ ಆಘಾತ ಅನುಭವಿಸಿತು. ಒಂದು ಹಂತದಲ್ಲಿ 87 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿತ್ತು. ನಂತರ ಜೊತೆಯಾದ ದಿನೇಶ್ ಕಾರ್ತಿಕ್ ಹಾಗೂ ಶಹ್ಬಾಸ್ ಅಹ್ಮದ್ ಪಂದ್ಯವನ್ನು ಎದುರಾಳಿ ಕೈಯಿಂದ ಸಂಪೂರ್ಣವಾಗಿ ಕಸಿದುಕೊಳ್ಳುವಲ್ಲಿ ಯಶಸ್ವಿಯಾದರು.

ಮತ್ತೆ ರಾಷ್ಟ್ರೀಯ ತಂಡದ ಪರವಾಗಿ ಆಡಲಿ
ಪಂದ್ಯದ ನಂತರ ಮಾತನಾಡಿದ ನಾಯಕ ಫಾಫ್ ದಿನೇಶ್ ಕಾರ್ತಿಕ್ ಅವರ ಫಿನಿಷಿಂಗ್ ಕೌಶಲ್ಯದ ಬಗ್ಗೆ ಭಾರೀ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ನನ್ನ ಪ್ರಕಾರ ಮೈದಾನದಲ್ಲಿ ಸಮರ್ಥವಾಗಿದ್ದುಕೊಂಡು ಉತ್ತಮವಾಗಿ ಚಲನೆಯನ್ನು ಹೊಂದಿರಬೇಕಾದರೆ ನಿಮ್ಮ ಮನಸ್ಸು ಕೂಡ ಅದೇ ರೀತಿ ಸ್ಪಂದಿಸಬೇಕಾಗುತ್ತದೆ. ಡಿಕೆ ಅವರ ಅತ್ಯುತ್ತಮ ಕ್ರಿಕೆಟ್ ಆಟವನ್ನು ಪ್ರದರ್ಶಿಸಿದ್ದಾರೆ. ನನ್ನ ಪ್ರಕಾರ ಅವರ ಹೆಸರು ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಳ್ಳಬೇಕಿದೆ" ಎಂದು ಫಾಫ್ ಡು ಪ್ಲೆಸಿಸ್ ಪ್ರತಿಕ್ರಿಯಿಸಿದ್ದಾರೆ.

ಕೆಕೆಆರ್‌ನಲ್ಲಿ ಮಿಂಚಲು ವಿಫಲವಾಗಿದ್ದ ಕಾರ್ತಿಕ್
ದಿನೇಶ್ ಕಾರ್ತಿಕ್ ಈ ಹಿಂದಿನ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಆಡಿದ್ದರು. ಅದಕ್ಕೂ ಹಿಂದಿನ ಆವೃತ್ತಿಯಲ್ಲಿ ತಂಡದ ನಾಯಕನಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ ಕೆಕೆಆರ್ ತಂಡದಲ್ಲಿ ಡಿಕೆ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಹೀಗಾಗಿಯೇ ಈ ಬಾರಿಯ ಆವೃತ್ತಿಗೂ ಮುನ್ನ ಅವರನ್ನು ರೀಟೈನ್ ಮಾಡುವ ಮನಸ್ಸು ಮಾಡಿರಲಿಲ್ಲ ಕೊಲ್ಕತ್ತಾ ನೈಟ್ ರೈಡರ್ಸ್.

ರಾಷ್ಟ್ರೀಯ ತಂಡದಿಂದಲೂ ದೂರವಾಗಿರುವ ಡಿಕೆ
ದಿನೇಶ್ ಕಾರ್ತಿಕ್ ಪ್ರಸ್ತುತ ಭಾರತ ರಾಷ್ಟ್ರೀಯ ತಂಡದಿಂದಲೂ ಹೊರಗುಳಿದಿದ್ದಾರೆ. 2019ರ ಏಕದಿನ ವಿಶ್ವಕಪ್‌ನಲ್ಲಿ ಕಾಣಿಸಿಕೊಂಡ ಬಳಿಕ ಡಿಕೆ ಭಾರತ ತಂಡದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಸದ್ಯಕ್ಕೆ ನೀಡುತ್ತಿರುವ ಪ್ರದರ್ಶನವನ್ನು ಮುಂದುವರಿಸಿದರೆ ದಿನೇಶ್ ಕಾರ್ತಿಕ್ ಮತ್ತೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡರೆ ಅಚ್ಚರಿಯಿಲ್ಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications