ಸುರೇಶ್ ರೈನಾ ಟ್ರೆಂಡಿಂಗ್: ಮತ್ತೆ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಮಿಸ್ಟರ್ ಐಪಿಎಲ್!

ಈ ಬಾರಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಒಂದು ತಿಂಗಳಿಗೂ ಕಡಿಮೆ ಸಮಯವಿದೆ. ಈ ಬಾರಿಯ ಟೂರ್ನಿಯಲ್ಲಿ 10 ತಂಡಗಳು ಭಾಗವಹಿಸುತ್ತಿರುವ ಕಾರಣ ಟೂರ್ನಿಯ ಕುತೂಹಲ ಹೆಚ್ಚಿಸಿದೆ. ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟನ್ಸ್ ತಂಡದ ಪಾಲಾಗಿದ್ದ ಇಂಗ್ಲೆಂಡ್ ಮೂಲದ ಆಟಗಾರ ಜೇಸನ್ ರಾಯ್ ಐಪಿಎಲ್ 2022ರ ಆವೃತ್ತಿಯಿಂದ ಹಿಂದಕ್ಕೆ ಸರಿದಿದ್ದಾರೆ. ಬೆಳವಣಿಗೆ ಈಗ ಐಪಿಎಲ್ ಅಭಿಮಾನಿಗಳಲ್ಲಿ ಮತ್ತೊಂದು ಚರ್ಚೆಗೆ ಕಾರಣವಾಗಿದೆ.
ಗುಜರಾತ್ ಟೈಟನ್ಸ್ ತಂಡದ ಆಟಗಾರ ಜೇಸನ್ ರಾಯ್ ಐಪಿಎಲ್‌ನಿಂದ ಹಿಂದಕ್ಕೆ ಸರಿಯುತ್ತಿದ್ದಂತೆಯೇ ಟ್ವಿಟ್ಟರ್‌ನಲ್ಲಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಹೆಸರು ಟ್ರೆಂಡಿಂಗ್‌ನಲ್ಲಿತ್ತು. ಈ ಭಾರಿಯ ಐಪಿಎಲ್ ಹರಾಜು ಸಂದರ್ಭದಲ್ಲಿ ಬಿಕರಿಯಾಗದೆ ಉಳಿದ ಸುರೇಶ್ ರೈನಾ ಗುಜರಾತ್ ಟೈಟನ್ಸ್ ತಂಡಕ್ಕೆ ಸೇರ್ಪಡೆಯಾಗಬಹುದು ಎಂಬ ನಿಟ್ಟಿನಲ್ಲಿ ಅಭಿಮಾನಿಗಳು ಸಾಕಷ್ಟು ಚರ್ಚೆ ನಡೆಸಿದ್ದಾರೆ. ಸುರೇಶ್ ರೈನಾ ಅಭಿಮಾನಿಗಳು ಗುಜರಾತ್ ಟೈಟನ್ಸ್ ತಂಡ ಬದಲಿ ಆಟಗಾರನಾಗಿ ಸುರೇಶ್ ರೈನಾ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಬೇಕು ಎಂಬ ಭಾರೀ ಒತ್ತಾಯವನ್ನು ಮಾಡುತ್ತಿದ್ದಾರೆ.

ಐಪಿಎಲ್ 2022ರಲ್ಲಿ ಭಾಗವಹಿಸಲ್ಲ ಎಂದ ಜೇಸನ್ ರಾಯ್
ಇಂಗ್ಲೆಂಡ್ ಕ್ರಿಕೆಟ್ ತಂಡದ ಆಟಗಾರ ಜೇಸನ್ ರಾಯ್ ಮಂಗಳವಾರ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ತಾನು ಭಾಗವಹಿಸುತ್ತಿಲ್ಲ ಎಂಬುದನ್ನು ಘೋಷಿಸಿದ್ದರು. ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವ ನಿಟ್ಟಿನಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳುತ್ತಿರುವುದಾಗಿ ಜೇಸನ್ ರಾಯ್ ತಿಳಿಸಿದ್ದಾರೆ. ಗುಜರಾತ್ ಟೈಟನ್ಸ್ ಜೇಸನ್ ರಾಯ್ ಅವರನ್ನು 2 ಕೋಟಿ ಮೂಲಬೆಲೆಗೆ ತಂಡಕ್ಕೆ ಸೇರ್ಪಡೆಗೊಳಿಸಿತ್ತು.

ಹರಾಜಾಗದೆ ಉಳಿದ ಸುರೇಶ್ ರೈನಾ
ಮತ್ತೊಂದೆಡೆ ಐಪಿಎಲ್ ಇತಿಹಾಸದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ಸುರೇಶ್ ರೈನಾ ಈ ಬಾರಿಯ ಐಪಿಎಲ್ ಮೆಗಾ ಹರಾಜಿನಲ್ಲಿ ಯಾವುದೇ ತಂಡಕ್ಕೂ ಬಿಕರಿಯಾಗದೇ ಉಳಿದುಕೊಂಡಿದ್ದಾರೆ. ಸುದೀರ್ಘ ಕಾಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿದ್ದ ರೈನಾ ಕಳೆದ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಅದಾದ ನಂತರ ಹರಾಜಿಗಾಗಿ ಸಿಎಸ್‌ಗೆ ಫ್ರಾಂಚೈಸಿ ಬಿಡುಗಡೆಗೊಳಿಸಿತ್ತು. ನಂತರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಮತ್ತೊಮ್ಮೆ ತಂಡಕ್ಕೆ ಸೇರ್ಪಡೆಗೊಳಿಸುವ ಯಾವ ಪ್ರಯತ್ನವನ್ನು ಕೂಡ ಸಿಎಸ್‌ಕೆ ಮಾಡಲಿಲ್ಲ. ಇತರ ತಂಡಗಳು ಕೂಡ ರೈನಾ ಮೇಲೆ ಮಿಡ್ ಮಾಡಲು ಮುಂದಾಗಲಿಲ್ಲ.
ಕುಡಿದು ಹುಚ್ಚಾಟ ಮೆರೆದಿದ್ದ ಕ್ರಿಕೆಟರ್ ವಿನೋದ್ ಕಾಂಬ್ಳಿಯ ವೀಡಿಯೋ ವೈರಲ್

ಆರಂಭಿಕ ಆವೃತ್ತಿಯಿಂದಲೂ ಸಿಎಸ್‌ಕೆ ಪರ ಆಡಿರುವ ರೈನಾ
ಮಿಸ್ಟರ್ ಐಪಿಎಲ್ ಎಂದೇ ಖ್ಯಾತವಾಗಿರುವ ಸುರೇಶ್ ರೈನಾ ಐಪಿಎಲ್ ಆರಂಭಿಕ ಆವೃತ್ತಿಯಿಂದಲೂ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಐಪಿಎಲ್‌ನ ಬಹುತೇಕ ಭಾಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಿರುವ ರೈನಾ ಸಿಎಸ್‌ಕೆ ಬ್ಯಾನ್ ಆಗಿದ್ದ ಎರಡು ವರ್ಷಗಳ ಅವಧಿಯಲ್ಲಿ ಮಾತ್ರ ಪ್ರಸ್ತುತ ಟೂರ್ನಿಯ ಭಾಗವಾಗಿಲ್ಲದಿರುವ ಗುಜರಾತ್ ಲಯನ್ಸ್ ತಂಡದ ಭಾಗವಾಗಿದ್ದರು.

ಬದಲಿ ಆಟಗಾರನನ್ನು ಘೋಷಣೆ ಮಾಡಿಲ್ಲ ಟೈಟನ್ಸ್
ಇನ್ನು ಜೇಸನ್ ರಾಯ್ ಈ ಬಾರಿಯ ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಂಡಿದ್ದರೂ ಗುಜರಾತ್ದ ಟೈಟನ್ಸ್ ತಂಡ ಈವರೆಗೆ ಬದಲಿ ಆಟಗಾರನನ್ನು ಘೋಷಣೆ ಮಾಡಿಲ್ಲ. ಹೀಗಾಗಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸುರೇಶ್ ರೈನಾಗೆ ಟೈಟನ್ಸ್ ಪರವಾಗಿ ಆಡುವ ಅವಕಾಶ ದೊರೆಯಲಿದೆಯಾ ಎಂಬುದು ಕೂಡ ಕುತೂಹಲ ಮೂಡಿಸಿದೆ. 35ರ ಹರೆಯದ ಸುರೇಶ್ ರೈನಾ ಐಪಿಎಲ್‌ನಲ್ಲಿ 5000ಕ್ಕೂ ಅಧಿಕ ರನ್‌ಗಳಿಸಿದ ಆರು ಆಟಗಾರರ ಪೈಕಿ ಒಬ್ಬರಾಗಿದ್ದಾರೆ. ಈವರೆಗೆ 205 ಐಪಿಎಲ್ ಪಂದ್ಯಗಳನ್ನು ಆಡಿರುವ ರೈನಾ 5528 ರನ್‌ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರ ಪಟ್ಟಿಯಲ್ಲಿ ರೈನಾ ಈಗ ನಾಲ್ಕನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications