
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 40ನೇ ಪಂದ್ಯ ಮುಂಬೈನ ವಾಂಖೆಡೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಕಣಕ್ಕಿಳಿದಿವೆ.
ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಆರಂಭಿಸಿದ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆರಂಭಿಕ ಆಟಗಾರರಾಗಿ ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ಕಣಕ್ಕಿಳಿದರು. ಈ ಪೈಕಿ ನಾಯಕ ಕೇನ್ ವಿಲಿಯಮ್ಸನ್ 5 ರನ್ ಗಳಿಸಿ ಔಟ್ ಆದರೆ, ಅಭಿಷೇಕ್ ಶರ್ಮಾ 42 ಎಸೆತಗಳಲ್ಲಿ 65 ರನ್ ಗಳಿಸಿ ಅಬ್ಬರಿಸಿದರು. ಇನ್ನುಳಿದಂತೆ ರಾಹುಲ್ ತ್ರಿಪಾಠಿ 16 ರನ್, ಏಡನ್ ಮಾರ್ಕ್ರಮ್ 56 ರನ್, ನಿಕೋಲಸ್ ಪೂರನ್ 3 ರನ್, ವಾಷಿಂಗ್ಟನ್ ಸುಂದರ್ 3 ರನ್ ಗಳಿಸಿದರೆ, ಮಾರ್ಕೊ ಜನ್ಸೆನ್ ಅಜೇಯ 8 ರನ್ ಮತ್ತು ಶಶಾಂಕ್ ಸಿಂಗ್ ಅಜೇಯ 25 ರನ್ ಗಳಿಸಿದರು.
ಶಶಾಂಕ್ ಶರ್ಮಾ ಫೆರ್ಗ್ಯುಸನ್ ಎಸೆದ ಅಂತಿಮ ಓವರ್‌ನ ಕೊನೆಯ 3 ಎಸೆತಗಳಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸಿ ಅಬ್ಬರಿಸಿದರು. ಒಟ್ಟು 6 ಎಸೆತಗಳಲ್ಲಿ ಅಜೇಯ 25 ರನ್ ಬಾರಿಸಿದರು. ಈ ಮೂಲಕ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿ ಎದುರಾಳಿ ಗುಜರಾತ್ ಟೈಟನ್ಸ್ ತಂಡಕ್ಕೆ 196 ರನ್‌ಗಳ ಗುರಿ ನೀಡಿದೆ.
ಗುಜರಾತ್ ಟೈಟನ್ಸ್ ಪರ ಮೊಹಮ್ಮದ್ ಶಮಿ 3 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಅಲ್ಜಾರಿ ಜೋಸೆಫ್ ತಲಾ ಒಂದೊಂದು ವಿಕೆಟ್ ಪಡೆದರು.
ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್, ಮೊಹಮ್ಮದ್ ಶಮಿ
ಸನ್ ರೈಸರ್ಸ್ ಹೈದರಾಬಾದ್ ಆಡುವ ಬಳಗ: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (ನಾಯಕ), ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್