
ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ಪಂದ್ಯದಲ್ಲಿ ನಾಯಕ ಕೆ.ಎಲ್ ರಾಹುಲ್ ಭರ್ಜರಿ ಶತಕದ ನೆರವಿನಿಂದ ಎಲ್‌ಎಸ್‌ಜಿ 4 ವಿಕೆಟ್ ನಷ್ಟಕ್ಕೆ 199ರನ್ ಕಲೆಹಾಕಿದೆ. ಮುಂಬೈ ಇಂಡಿಯನ್ಸ್ 200ರನ್‌ಗಳ ಟಾರ್ಗೆಟ್ ನೀಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ಸ್ಫೋಟಕ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಕೆ.ಎಲ್ ರಾಹುಲ್ ಮತ್ತು ಕ್ವಿಂಟನ್ ಡಿಕಾಕ್ ಅರ್ಧಶತಕದ ಜೊತೆಯಾಟವಾಡಿದ್ರು.
ಉತ್ತಮವಾಗಿ ಆಡ್ತಿದ್ದ ಕ್ವಿಂಟನ್ ಡಿಕಾಕ್ 13 ಎಸೆತಗಳಲ್ಲಿ 24ರನ್‌ಗಳಿಸಿದ್ದಾಗ ಮುಂಬೈ ಪರ ಪದಾರ್ಪಣೆ ಮಾಡಿದ ಫ್ಯಾಬಿಯನ್ ಅಲೆನ್ ಸ್ಪಿನ್‌ಗೆ ಬಲಿಯಾದ್ರು. ಇದಾದ ಬಳಿಕ ಕೆ. ಗೌತಮ್ ಬದಲು ಚಾನ್ಸ್ ಪಡೆದಿದ್ದ ಮನೀಷ್ ಪಾಂಡೆ ಮೊದಲ ಎಸೆತದಿಂದಲೇ ಆತ್ಮವಿಶ್ವಾಸದಿಂದ ಬೌಲರ್ ಅನ್ನು ಎದುರಿಸಿದ್ರು.
ಓಪನರ್ ಜೊತೆಗೆ ನಾಯಕನ ಜವಾಬ್ದಾರಿಯುತ ಆಟವಾಡಿದ ಕೆ.ಎಲ್ ರಾಹುಲ್ ಒಂದೆಡೆ ನಿರಂತರವಾಗಿ ಸ್ಕೋರ್ ಕಲೆಹಾಕುತ್ತಾ ಸಾಗಿದ್ರು. ಮನೀಷ್ ಪಾಂಡೆ 29 ಎಸೆತಗಳಲ್ಲಿ ಆರು ಬೌಂಡರಿಯೊಂದಿಗೆ 38 ರನ್‌ಗಳಿಸಿ ಮುರುಗನ್ ಅಶ್ವಿನ್ ಎಸೆತಗಳಲ್ಲಿ ಕ್ಲೀನ್ ಬೌಲ್ಡ್ ಆದ್ರು.
ಮೊದಲ ಎಸೆತದಲ್ಲೇ ಸಿಕ್ಸರ್ ಸಿಡಿಸಿದ ಮಾರ್ಕಸ್ ಸ್ಟೋಯ್ನಿಸ್ ಆಟ 10ರನ್‌ಗೆ ಮುಕ್ತಾಯಗೊಂಡಿತು. ದೀಪಕ್ ಹೂಡಾ 8 ಎಸೆತಗಳಲ್ಲಿ 15ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಹೀಗೆ ಒಂದೆಡೆ ಅಂತಹ ಒಳ್ಳೆಯ ಸಾಥ್ ಸಿಗದಿದ್ರೂ, ನಾಯಕ ಕೆ.ಎಲ್ ರಾಹುಲ್ ಮಾತ್ರ ಅಮೋಘ ಇನ್ನಿಂಗ್ಸ್ ಆಡುವ ಮೂಲಕ ತಮ್ಮ 100ನೇ ಐಪಿಎಲ್ ಪಂದ್ಯವನ್ನ ಸ್ಮರಣೀಯವಾಗಿಸಿದ್ರು.

ಐಪಿಎಲ್‌ನಲ್ಲಿ ಮೂರನೇ ಅಮೋಘ ಶತಕ ದಾಖಲಿಸಿದ ಕೆ.ಎಲ್ ರಾಹುಲ್ 56 ಎಸೆತಗಳಲ್ಲಿ ಶತಕದ ಗಡಿ ಮುಟ್ಟಿದ್ರು. ಒಟ್ಟಾರೆ 60 ಎಸೆತಗಳಲ್ಲಿ ಅಜೇಯ 103 ರನ್ ಕಲೆಹಾಕಿದ ಕೆ.ಎಲ್ ರಾಹುಲ್ ಇನ್ನಿಂಗ್ಸ್‌ನಲ್ಲಿ 9 ಬೌಂಡರಿ ಮತ್ತು 5 ಭರ್ಜರಿ ಸಿಕ್ಸರ್‌ಗಳಿದ್ದವು.
ಹೀಗೆ ಐಪಿಎಲ್ ಇತಿಹಾಸದಲ್ಲಿ 100ನೇ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಪ್ಲೇಯರ್ ಎಂಬ ಹೆಗ್ಗಳಿಕೆಗೆ ಪಾತ್ರನಾದ ಕೆ.ಎಲ್ ರಾಹುಲ್ ತಂಡಕ್ಕೆ ಉತ್ತಮ ಮೊತ್ತ ತಂದುಕೊಟ್ಟಿದ್ದಾರೆ. ಎಲ್‌ಎಸ್‌ಜಿ 4 ವಿಕೆಟ್ ನಷ್ಟಕ್ಕೆ 199ರನ್ ಕಲೆಹಾಕಿದೆ. ಮುಂಬೈ ಗೆಲ್ಲಲು 200 ರನ್ ಹೊಡೆಯಬೇಕಿದೆ.
ಮುಂಬೈ ಪರ ಅತ್ಯುತ್ತಮ ಬೌಲಿಂಗ್ ಮಾಡಿದ ಜಯದೇವ್ ಉನಾದ್ಕಟ್ 4 ಓವರ್‌ಗೆ 32ರನ್ ನೀಡಿ 2 ವಿಕೆಟ್ ಪಡೆದ್ರೆ, ಮುರುಗನ್ ಅಶ್ವಿನ್ ಮತ್ತು ಫ್ಯಾಬಿಯನ್ ಅಲೆನ್ ತಲಾ ಒಂದು ವಿಕೆಟ್ ಪಡೆದ್ರು. ಟೈಮಲ್ ಮಿಲ್ಸ್ ಅತ್ಯಂತ ದುಬಾರಿ ಬೌಲಿಂಗ್ ಮಾಡಿ 3 ಓವರ್‌ಗೆ ವಿಕೆಟ್ ಇಲ್ಲದೆ 54ರನ್ ನೀಡಿದ್ರು.