
ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ 23ರನ್‌ಗಳಿಂದ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದ ಸಿಎಸ್‌ಕೆ, ಸೀಸನ್‌ನಲ್ಲಿ ಕೊಂಚ ನಿಟ್ಟುಸಿರು ಬಿಟ್ಟಿದೆ. ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿದ ಜಡೇಜಾ ಟೀಂ ಮೊದಲ ಗೆಲುವು ಪಡೆದಿದೆ.
ಈ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ 217ರನ್‌ಗಳ ಗುರಿ ಬೆನ್ನತ್ತಿದ ಆರ್‌ಸಿಬಿ ಟಾಪ್ ಆರ್ಡರ್ ವೈಫಲ್ಯದಿಂದ ಗುರಿ ಮುಟ್ಟಲು ವಿಫಲಗೊಂಡಿತು. ಆದ್ರೂ ಸಹ ಶಬಾಜ್ ಅಹ್ಮದ್, ಸುಯಾಶ್ ಪ್ರಭುದೇಸಾಯಿ, ದಿನೇಶ್ ಕಾರ್ತಿಕ್ ಸ್ಫೋಟಕ ಇನ್ನಿಂಗ್ಸ್ ಮೂಲಕ ಸಿಎಸ್‌ಕೆಗೆ ಬೆದರಿಸಿದ್ದು ಸುಳ್ಳಲ್ಲ. ಇದರ ನಡುವೆ ಎರಡು ಕ್ಯಾಚ್ ಕೈಚೆಲ್ಲಿದ್ದ ಮುಕೇಶ್ ಚೌಧರಿಗೆ ಧೋನಿ ನೀಡಿದ ಸಲಹೆ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ.
ಸಿಎಸ್ ಕೆ ತಂಡದ ಹಿನ್ನಡೆಗೆ ಕಾರಣವಾಗಿದ್ದ ಯುವ ಆಟಗಾರನಿಗೆ ಧೋನಿ ನೀಡಿದ ಸಲಹೆಯು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಮೊದಲು ಬ್ಯಾಟ್ ಮಾಡಿದ ಸಿಎಸ್‌ಕೆ ಪರ ರಾಬಿನ್ ಉತ್ತಪ್ಪ ಮತ್ತು ಶಿವಂ ದುಬೆ ಅಬ್ಬರದಿಂದಾಗಿ ಚೆನ್ನೈ 216/4 ಸ್ಕೋರ್ ಮಾಡಿದರು. ಇದಾದ ಬಳಿಕ ಆಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 193/9 ಮಾತ್ರ ಗಳಿಸಿತು. ಚೆನ್ನೈನ ಈ ಯಶಸ್ಸಿಗಿಂತ, ಒಟ್ಟಾರೆ ಅಭಿಮಾನಿಗಳ ಗಮನ ಸೆಳೆದದ್ದು ಧೋನಿ ಮಾತ್ರ.

ನಿನ್ನೆಯ ಪಂದ್ಯದಲ್ಲಿ ಆರ್‌ಸಿಬಿ ಪರ ಪ್ರಭು ದೇಸಾಯಿ 18 ಎಸೆತಗಳಲ್ಲಿ 34 ರನ್ ಗಳಿಸಿ ಸಿಎಸ್‌ಕೆಗೆ ತಲೆನೋವು ತಂದಿದ್ದರು. ನಂತರ 14ನೇ ಓವರ್‌ನಲ್ಲಿ ಬ್ರಾವೊ ಎಸೆದ ಬಾಲ್‌ಗೆ ಕ್ಯಾಚ್ ನೀಡಿದರು. ಸುಲಭವಾಗಿ ಬಂದ ಕ್ಯಾಚ್ ಅನ್ನು ಯುವ ಆಟಗಾರ ಮುಖೇಶ್ ಚೌಧರಿ ಕೈ ಚೆಲ್ಲಿದರು. ಇದನ್ನು ಕೂಡ ಅಭಿಮಾನಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಆದರೆ 15ನೇ ಓವರ್ ನಲ್ಲಿ ದಿನೇಶ್ ಕಾರ್ತಿಕ್ ಬ್ಯಾಟ್‌ನಿಂದ ಸಿಡಿದ ಸುಂದರ ಕ್ಯಾಚ್ ಅನ್ನು ಮುಖೇಶ್ ಮತ್ತೊಮ್ಮೆ ಕೈ ಚೆಲ್ಲಿದರು. ಆ ಕ್ಯಾಚ್‌ನೊಂದಿಗೆ ಆಟ ಬದಲಾಗಲಿದೆ ಎಂದೇ ಊಹಿಸಲಾಗಿತ್ತು. ಏಕೆಂದರೆ ಡಿಕೆ ಆರ್‌ಸಿಬಿ ಪರ ಫಿನಿಷರ್ ಆಗಿರುವುದರಿಂದ ಅವರ ಕ್ಯಾಚ್ ಅಮೂಲ್ಯವಾಗಿತ್ತು. ಆದ್ರೆ ಈ ಕ್ಯಾಚ್ ಬಿಟ್ಟಿದ್ದರ ವಿರುದ್ಧವಾಗಿ ಅಭಿಮಾನಿಗಳೆಲ್ಲ ಮುಖೇಶ್ ವಿರುದ್ಧ ಕಟು ಟೀಕೆ ಮಾಡಿದರು. ಸಿಎಸ್‌ಕೆ ಸೋತ್ರೆ ಅವರನ್ನೇ ದೂರುವಷ್ಟರ ಮಟ್ಟಿಗೆ ಸಿಟ್ಟಾಗಿದ್ದರು.
ಆದ್ರೆ ಈ ವೇಳೆ ಮಹೇಂದ್ರ ಸಿಂಗ್ ಧೋನಿ ಯುವ ಆಟಗಾರ ಮುಕೇಶ್ ಚೌಧರಿಗೆ ಸಲಹೆ ನೀಡುವ ಮೂಲಕ ಸಮಾಧಾನ ಮಾಡಿದ ರೀತಿ ಎಲ್ಲರನ್ನೂ ಮೆಚ್ಚುವಂತಿತ್ತು.
ಹಾರ್ದಿಕ್ ಪಾಂಡ್ಯ ಧೋನಿಯನ್ನ ನೋಡಿ ಕಲಿಯಲಿ: ನೆಟ್ಟಿಗರ ಟೀಕೆ
ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಇತ್ತೀಚೆಗೆ ಫೀಲ್ಡಿಂಗ್ ನಲ್ಲಿ ಹಿರಿಯ ಬೌಲರ್ ಮೊಹಮ್ಮದ್ ಶಮಿ ವಿರುದ್ಧ ಆಕ್ರಮಣಕಾರಿಯಾಗಿ ವರ್ತನೆ ತೋರಿದ್ದರು. ಆತ ಸೀನಿಯರ್ ಆಗಿದ್ದರೂ ಕ್ಯಾಚ್ ಹಿಡಿಯಲು ಹೆಚ್ಚಿನ ಪ್ರಯತ್ನ ಮಾಡದಿದ್ದಕ್ಕೆ ಮೈದಾನದಲ್ಲಿ ಪಾಂಡ್ಯ ಬೈದಿದ್ದು ವಿವಾದಕ್ಕೆ ಕಾರಣವಾಗಿತ್ತು. ಧೋನಿಯಿಂದ ಹಾರ್ದಿಕ್ ಕಲಿಯುವುದು ಸಾಕಷ್ಟಿದೆ ಎಂದು ಅಭಿಮಾನಿಗಳು ಇದೀಗ ಪಾಂಡ್ಯಗೆ ಪಾಠ ಹೇಳುತ್ತಿದ್ದಾರೆ.