
ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2022 ಸೀಸನ್‌ಗೆ ಸಿದ್ಧವಾಗುತ್ತಿದೆ. ಸಿದ್ಧತೆಯ ಭಾಗವಾಗಿ ಶುಕ್ರವಾರ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಆರ್ ಸಿಬಿ ಬ್ಯಾಟ್ಸ್ ಮನ್ ಗಳು ಧೂಳೆಬ್ಬಿಸಿದರು. ತಮ್ಮದೇ ಬ್ಯಾಟಿಂಗ್ ಮೂಲಕ ದೊಡ್ಡ ಶಾಟ್ ಗಳನ್ನು ಆಡುವ ಮೂಲಕ ಬೌಲರ್ ಗಳಿಗೆ ಬೆವರು ಸುರಿಸಿದ್ರು.
ತಂಡದ ಆಟಗಾರರನ್ನು ಫಾಫ್ ಡುಪ್ಲೆಸಿಸ್ 11 ಮತ್ತು ಹರ್ಷಲ್ ಪಟೇಲ್ 11 ತಂಡಗಳಾಗಿ ವಿಂಗಡಿಸಿ ಅಭ್ಯಾಸ ಪಂದ್ಯವನ್ನು ಆಯೋಜಿಸಲಾಗಿತ್ತು. ಅಭ್ಯಾಸ ಪಂದ್ಯವನ್ನು ಫಾಫ್ ಡುಪ್ಲೆಸಿಸ್ ತಂಡ 2 ರನ್‌ಗಳಿಂದ ಪಂದ್ಯ ಗೆದ್ದುಕೊಂಡಿತು. ಅದರೊಂದಿಗೆ, ಸೀಸನ್ ಆರಂಭಕ್ಕೂ ಮೊದಲೇ ಫಾಫ್ ನಾಯಕನಾಗಿ ತನ್ನ ಮೊದಲ ಗೆಲುವು ಪಡೆದರು.
ಅಭ್ಯಾಸ ಪಂದ್ಯದಲ್ಲಿ ಮೊದಲು ಫಾಫ್ ಇಲೆವೆನ್ ತಂಡ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿತು. ನಾಯಕ ಫಾಫ್ ಡುಪ್ಲೆಸಿಸ್ (40 ಎಸೆತಗಳಲ್ಲಿ 76) ಮತ್ತು ಬಿಗ್ ಹಿಟ್ಟರ್ ರುದರ್‌ಫೋರ್ಡ್ (59) ಅರ್ಧಶತಕ ಬಾರಿಸಿದರೆ, ಯುವ ಆಟಗಾರ ಅನುಜ್ ರಾವತ್ (46) ನಿರ್ಣಾಯಕ ಇನ್ನಿಂಗ್ಸ್ ಆಡಿದರು. ಹರ್ಷಲ್ ಪಟೇಲ್ ಮೂರು ವಿಕೆಟ್ ಪಡೆದರೆ, ಕರಣ್ ಶರ್ಮಾ ಎರಡು ವಿಕೆಟ್ ಪಡೆದರು.
ನಂತರ ಹರ್ಷಲ್ ಪಟೇಲ್ ತಂಡ ನಿಗದಿತ 20 ಓವರ್‌ಗಳಲ್ಲಿ 213 ರನ್ ಗಳಿಸಿ ಎರಡು ರನ್‌ಗಳಿಂದ ಸೋಲು ಕಂಡಿತು. ತಂಡದಲ್ಲಿ ಯುವ ಆಟಗಾರ ಸುಯೇಶ್ (46 ಎಸೆತಗಳಲ್ಲಿ 87) ಅರ್ಧಶತಕ ಗಳಿಸಿದರು. ದಿನೇಶ್ ಕಾರ್ತಿಕ್ (21 ಎಸೆತಗಳಲ್ಲಿ 49) ಮತ್ತು ಡೇವಿಡ್ ವಿಲ್ಲೆ (17 ಎಸೆತಗಳಲ್ಲಿ 25) ಗಳಿಸಿದರು. ಆಕಾಶ್ ದೀಪ್ 4 ವಿಕೆಟ್ ಪಡೆದರು. ಈ ಅಭ್ಯಾಸ ಪಂದ್ಯದಿಂದ ವಿರಾಟ್ ಕೊಹ್ಲಿ ದೂರ ಉಳಿದಿದ್ದರು.
ನಾಯಕನಾಗಿ ಅಭ್ಯಾಸ ಪಂದ್ಯವನ್ನು ಗೆದ್ದಿರುವ ಫಾಫ್, ಲೀಗ್‌ನಲ್ಲೂ ಅದೇ ವೇಗವನ್ನು ಮುಂದುವರಿಸಬೇಕೆಂದು ಆರ್‌ಸಿಬಿ ಅಭಿಮಾನಿಗಳು ಬಯಸಿದ್ದಾರೆ. ಪ್ಲೇಆಫ್ ತಲುಪುವುದೇ ತಮ್ಮ ಮೊದಲ ಗುರಿ ಎಂದು ನಾಯಕ ಫಾಫ್ ಡುಪ್ಲೆಸಿಸ್ ಈ ಸಂದರ್ಭದಲ್ಲಿ ಹೇಳಿದರು. ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಆರ್‌ಸಿಬಿ ಪ್ರಶಸ್ತಿ ಬೇಟೆ ಆರಂಭವಾಗಲಿದೆ.