
ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 35ನೇ ಪಂದ್ಯ ಇಂದು ( ಏಪ್ರಿಲ್ 23 ) ನಡೆಯುತ್ತಿದ್ದು, ಈ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಸೆಣಸಾಟ ನಡೆಸುತ್ತಿವೆ. ಮುಂಬೈನ ಡಾ ಡಿವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಹೀಗೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಕಲೆಹಾಕಿ ಎದುರಾಳಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ 157 ರನ್‌ಗಳ ಗುರಿಯನ್ನು ನೀಡಿದೆ.
ಗುಜರಾತ್ ಟೈಟನ್ಸ್ ತಂಡದ ಕೊನೆಯ ಪಂದ್ಯಕ್ಕೆ ಅಲಭ್ಯರಾಗಿದ್ದ ಹಾರ್ದಿಕ್ ಪಾಂಡ್ಯ ಈ ಪಂದ್ಯಕ್ಕೆ ಮರಳಿ ತಂಡ ಸೇರಿಕೊಂಡಿದ್ದು, ಈ ಪಂದ್ಯದಲ್ಲಿ ಜವಾಬ್ದಾರಿಯುತ ಅರ್ಧಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶುಬ್‌ಮನ್ ಗಿಲ್ 5 ಎಸೆತಗಳಿಗೆ 7 ರನ್ ಗಳಿಸಿ ಔಟ್ ಆದರೆ, ಮತ್ತೋರ್ವ ಆರಂಭಿಕ ಆಟಗಾರ ವೃದ್ಧಿಮಾನ್ ಸಹಾ 25 ಎಸೆತಗಳಿಗೆ 25 ರನ್ ಕಲೆಹಾಕಿ ಔಟ್ ಆದರು. ಹೀಗೆ ಗುಜರಾತ್ ಟೈಟನ್ಸ್ ಈ ಪಂದ್ಯದಲ್ಲಿ ಅಬ್ಬರದ ಆರಂಭವನ್ನೇನೂ ಪಡೆದುಕೊಳ್ಳಲಿಲ್ಲ. ಇನ್ನು ಶುಬ್‌ಮನ್ ಗಿಲ್ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಆಸರೆಯಾದದ್ದು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಹಾರ್ದಿಕ್ ಪಾಂಡ್ಯ.
49 ಎಸೆತಗಳಲ್ಲಿ 67 ರನ್ ಕಲೆಹಾಕಿದ ಹಾರ್ದಿಕ್ ಪಾಂಡ್ಯ ನಾಲ್ಕು ಬೌಂಡರಿ ಮತ್ತು ಎರಡು ಸಿಕ್ಸರ್ ಸಿಡಿಸಿ ಮಿಂಚಿದರು. ಇನ್ನುಳಿದಂತೆ ಡೇವಿಡ್ ಮಿಲ್ಲರ್ 20 ಎಸೆತಗಳಲ್ಲಿ 27 ರನ್ ಕಲೆಹಾಕಿದರೆ, ಕಳೆದ ಪಂದ್ಯದಲ್ಲಿ ಅಬ್ಬರಿಸಿದ್ದ ರಶೀದ್ ಖಾನ್ ಈ ಪಂದ್ಯದಲ್ಲಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು, ಅಭಿನವ್ ಮನೋಹರ್ 2 ರನ್, ಲಾಕಿ ಫೆರ್ಗ್ಯುಸನ್ ೦, ರಾಹುಲ್ ತೆವಾಟಿಯಾ 17, ಯಶ್ ದಯಾಳ್ ೦ ಮತ್ತು ಅಲ್ಜಾರಿ ಜೋಸೆಫ್ ಅಜೇಯ 1 ರನ್ ಕಲೆಹಾಕಿದರು.
ಅತ್ತ ಆರಂಭದಿಂದಲೂ ಗುಜರಾತ್ ಟೈಟನ್ಸ್ ತಂಡದ ಬ್ಯಾಟ್ಸ್‌ಮನ್‌ಗಳ ಮೇಲೆ ಹಿಡಿತ ಸಾಧಿಸುತ್ತಾ ಹೆಚ್ಚು ರನ್ ಬಿಟ್ಟುಕೊಡದೇ ನಿಯಂತ್ರಣ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರ ಆಂಡ್ರೆ ರಸೆಲ್ 4 ವಿಕೆಟ್ ಮತ್ತು ಟಿಮ್ ಸೌಥಿ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ ಮತ್ತು ಶಿವಮ್ ಮಾವಿ ತಲಾ ಒಂದೊಂದು ವಿಕೆಟ್ ಪಡೆದರು.
ಪಂದ್ಯದಲ್ಲಿ ಒಂದೇ ಒಂದು ಓವರ್ ಕೂಡ ಮಾಡದೇ ಇದ್ದ ಆಂಡ್ರೆ ರಸೆಲ್ ಅಂತಿಮ ಓವರ್ ಬೌಲಿಂಗ್ ಮಾಡಿ 5 ರನ್ ನೀಡಿ 4 ವಿಕೆಟ್ ಪಡೆದರು. ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ಲಾಕಿ ಫೆರ್ಗ್ಯುಸನ್ ಮತ್ತು ಯಶ್ ದಯಾಳ್ ರಸೆಲ್‌ಗೆ ವಿಕೆಟ್ ಒಪ್ಪಿಸಿದರು.
ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಅಭಿನವ್ ಮನೋಹರ್, ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಅಲ್ಜಾರಿ ಜೋಸೆಫ್, ಲಾಕಿ ಫರ್ಗುಸನ್, ಯಶ್ ದಯಾಲ್ ಮತ್ತು ಮೊಹಮ್ಮದ್ ಶಮಿ
ಕೋಲ್ಕತ್ತಾ ನೈಟ್ ರೈಡರ್ಸ್ ಆಡುವ ಬಳಗ: ವೆಂಕಟೇಶ್ ಅಯ್ಯರ್, ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ನಿತೀಶ್ ರಾಣಾ, ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ರಿಂಕು ಸಿಂಗ್, ಆಂಡ್ರೆ ರಸೆಲ್, ಟಿಮ್ ಸೌಥಿ, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ