SRH vs GT: ಸೋಲನ್ನೇ ಕಾಣದಿದ್ದ ಗುಜರಾತ್‌ಗೆ ಮಣ್ಣು ಮುಕ್ಕಿಸಿ ಸತತ ಎರಡನೇ ಗೆಲುವು ಕಂಡ ಸನ್ ರೈಸರ್ಸ್

ಹದಿನೈದನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 21ನೇ ಪಂದ್ಯ ಸನ್ ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವೆ ಡಾ ಡಿವೈ ಪಾಟೀಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆದಿದ್ದು, ಈ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ 8 ವಿಕೆಟ್‌ಗಳ ಜಯ ಸಾಧಸಿ ಈ ಬಾರಿಯ ಟೂರ್ನಿಯಲ್ಲಿ ಸೋಲನ್ನೇ ಕಾಣದಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಸೋಲಿನ ರುಚಿ ತೋರಿಸಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಫೀಲ್ಡಿಂಗ್ ಆಯ್ದುಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ ಮತ್ತು ಶುಬ್ ಮನ್ ಗಿಲ್ ಉತ್ತಮ ಆರಂಭ ಕಟ್ಟಿ ಕೊಡುವಲ್ಲಿ ವಿಫಲರಾದರು. ಮ್ಯಾಥ್ಯೂ ವೇಡ್ 19 ರನ್ ಕಲೆಹಾಕಿದರೆ, ಶುಬ್ ಮನ್ ಗಿಲ್ 7 ರನ್ ಗಳಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ 11 ರನ್, ಡೇವಿಡ್ ಮಿಲ್ಲರ್ 12 ರನ್, ಅಭಿನವ್ ಮನೋಹರ್ 35 ರನ್, ರಾಹುಲ್ ತೆವಾಟಿಯಾ 6 ಮತ್ತು ರಶೀದ್ ಖಾನ್ ಶೂನ್ಯ ರನ್ ಮತ್ತು ನಾಯಕ ಹಾರ್ದಿಕ್ ಪಾಂಡ್ಯ ಅಜೇಯ 50 ರನ್ ಕಲೆಹಾಕಿದರು. ಹೀಗೆ ಹಾರ್ದಿಕ್ ಪಾಂಡ್ಯ ಜವಾಬ್ದಾರಿಯುತ ಅರ್ಧಶತಕ ಮತ್ತು ಅಭಿನವ್ ಮನೋಹರ್ 21 ಎಸೆತಗಳಿಗೆ 37 ರನ್ ಕಲೆಹಾಕಿ ಅಬ್ಬರಿಸಿದ ಕಾರಣ ಗುಜರಾತ್ ಟೈಟನ್ಸ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್‌ಗೆ 163 ರನ್‌ಗಳ ಗುರಿಯನ್ನು ನೀಡಿತ್ತು.
ಇನ್ನು ಈ ಗುರಿಯನ್ನು ಬೆನ್ನತ್ತಿದ ಸನ್ ರೈಸರ್ಸ್ ಹೈದರಾಬಾದ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ಜೋಡಿ 64 ರನ್‌ಗಳ ಜತೆಯಾಟವನ್ನಾಡಿ ಉತ್ತಮ ಆರಂಭವನ್ನು ಕಟ್ಟಿಕೊಟ್ಟಿತು. ಅಭಿಷೇಕ್ ಶರ್ಮಾ 42 ರನ್ ಕಲೆಹಾಕಿ ಮತ್ತೊಮ್ಮೆ ತಂಡಕ್ಕೆ ಆಸರೆಯಾದರೆ, ಕೇನ್ ವಿಲಿಯಮ್ಸನ್ 57 ರನ್ ಕಲೆಹಾಕಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಾಹುಲ್ ತ್ತಿಪಾಠಿ 17 ರನ್ ಗಳಿಸಿದರೆ, ನಿಕೋಲಸ್ ಪೂರನ್ 18 ಎಸೆತಗಳಲ್ಲಿ ಅಜೇಯ 34 ರನ್ ಬಾರಿಸಿದರು ಹಾಗೂ ಏಡನ್ ಮಾರ್ಕ್ರಮ್ ಅಜೇಯ 12 ರನ್ ಕಲೆಹಾಕಿದರು. ಹೀಗೆ ಇನ್ನೂ 5 ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ಮುಟ್ಟಿದ ಸನ್ ರೈಸರ್ಸ್ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 168 ರನ್ ಕಲೆಹಾಕಿ 8 ವಿಕೆಟ್‌ಗಳ ಜಯ ಸಾಧಿಸಿತು.
ಈ ಗೆಲುವಿನ ಮೂಲಕ ಸತತ ಎರಡನೇ ಜಯ ಸಾಧಿಸಿದ ಸನ್ ರೈಸರ್ಸ್ ಹೈದರಾಬಾದ್ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಈ ಪಂದ್ಯಕ್ಕೂ ಮುನ್ನ ಮೂರನೇ ಸ್ಥಾನದಲ್ಲಿದ್ದ ಗುಜರಾತ್ ಟೈಟನ್ಸ್ ಈ ಸೋಲಿನ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications