Lowest Team Scores in IPL: ತಂಡಗಳು ಸ್ಮರಿಸಲು ಇಷ್ಟ ಪಡದಿರುವ ಕೆಟ್ಟ ದಾಖಲೆ: ಬೇಡದ ದಾಖಲೆಯಲ್ಲೂ ಆರ್‌ಸಿಬಿಯೇ ಮುಂದು!

ಐಪಿಎಲ್‌ನಲ್ಲಿ ಪ್ರತೀ ಬಾರಿಯೂ ಒಂದಲ್ಲಾ ಒಂದು ದಾಖಲೆಗಳು ಸೃಷ್ಟಿಯಾಗುತ್ತಲೇ ಇರುತ್ತದೆ. ದಾಖಲೆಗಳು ಎಂದರೆ ಆಟಗಾರರು ಹಾಗೂ ತಂಡಗಳು ಸಹಜವಾಗಿಯೇ ಸಂಭ್ರಮಿಸುತ್ತವೆ. ಆದರೆ ಕೆಲ ಕೆಟ್ಟ ದಾಖಲೆಗಳು ಕೂಡ ಈ ಟೂರ್ನಿಯಲ್ಲಿ ದಾಖಲಾಗಿದೆ. ತಂಡಗಳು ಎಂದಿಗೂ ಸ್ಮರಿಸಿಕೊಳ್ಳಲು ಇಷ್ಟಪಡದಂತಾ ಒಂದು ಕೆಟ್ಟ ದಾಖಲೆಯ ಬಗ್ಗೆ ಈ ವರದಿಯಲ್ಲಿ ಮಾಹಿತಿ ನೀಡಲಿದ್ದೇವೆ.
ಟಿ20 ಕ್ರಿಕೆಟ್ ಎಂದರೆ ಅದು ಬ್ಯಾಟರ್‌ಗಳ ಆಟ ಎಂಬ ಆಪಾದನೆಗಳಿದೆ. ಆದರೆ ಈ ಆಪಾದನೆಗೆ ವಿರುದ್ಧವಾಗಿ ಬೌಲರ್‌ಗಳ ಮೇಲಾಟಗಳು ಹೆಚ್ಚಿನ ಸಂದರ್ಭದಲ್ಲಿ ನಡೆಯುವುದನ್ನು ಐಪಿಎಲ್‌ನಲ್ಲಿಯೂ ಗಮನಿಸಿದ್ದೇವೆ. ಹೀಗೆ ಬೌಲರ್‌ಗಳ ಆರ್ಭಟದ ಮುಂದೆ ಎದುರಾಳಿ ತಂಡಗಳು ಸಂಪೂರ್ಣವಾಗಿ ಮಂಡಿಯೂರಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿರುವ ಪಂದ್ಯಗಳು ನಡೆದಿದೆ. ಹೀಗಾಗಿ ಈ ವರದಿಯಲ್ಲಿ ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತ್ಯಂತ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿರುವ ತಂಡಗಳ ಮಾಹಿತಿಯನ್ನು ನೋಡೋಣ.

5ನೇ ಸ್ಥಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ - 67 ರನ್‌ಗಳಿಗೆ ಆಲೌಟ್
ಐಪಿಎಲ್‌ನ ಚೊಚ್ಚಲ ಆವೃತ್ತಿಯಲ್ಲಿಯೇ ಕೆಕೆಆರ್ ಈ ಕಳಪೆ ಸಾಧನೆ ಮಾಡಿತ್ತು. 2008ರ ಐಪಿಎಲ್ ಆವೃತ್ತಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 67 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಮೊದಲ ಬಾರಿಗೆ ಈ ಕಳಪೆ ಸಾಧನೆ ಮಾಡಿತು. 68 ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ತಂಡ ಕೇವಲ 5.3 ಓವರ್‌ಗಳಲ್ಲಿ ಗೆಲುವು ಸಾಧಿಸಿತು.

4. ಡೆಲ್ಲಿ ಡೇರ್ ಡೆವಿಲ್ಸ್ - 67 ರನ್‌ಗಳಿಗೆ ಆಲೌಟ್
2017ರ ಐಪಿಎಲ್ ಆವೃತ್ತಿಯಲ್ಲಿ ದೆಹಲಿ ಮೂಲದ ಫ್ರಾಂಚೈಸಿ ಡೆಲ್ಲಿ ಡೇರ್ ಡೆವಿಲ್ಸ್ ಈ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿತು. ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ 67 ರನ್‌ಗಳಿಗೆ ಆಲ್ಔಟ್ ಆಗುವ ಮೂಲಕ ಅತಿ ಕನಿಷ್ಠ ರನ್‌ಗಳಿಸಿದ ಪಟ್ಟಿಗೆ ಸೇರಿಕೊಂಡಿತು. 68 ರನ್‌ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗಪ್ಟಿಲ್ ಅವರ ಅರ್ಧಶತಕದ ನೆರವಿನಿಂದ ಕೇವಲ 7.5 ಓವರ್‌ಗಳಲ್ಲಿ ಗುರಿ ತಲುಪಿ ಗೆಲುವಿನ ಸಂಭ್ರಮವನ್ನಾಚರಿಸಿತು.

3. ಡೆಲ್ಲಿ ಡೇರ್ ಡೆವಿಲ್ಸ್ - 67 ರನ್‌ಗಳಿಗೆ ಆಲೌಟ್
ಡೆಲ್ಲಿ ಡೇರ್ ಡೆವಿಲ್ಸ್ ತಂಡ ಒಂದೇ ಆವೃತ್ತಿಯಲ್ಲಿ ಎರಡನೇ ಬಾರಿಗೆ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿತ್ತು. 2017ರ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ 3 ವಿಕೆಟ್ ನಷ್ಟಕ್ಕೆ 213 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿತ್ತು. ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆಘಾತ ಅನುಭವಿಸಿತು. ಕೇವಲ 66 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿಯೂ ತಾನೇ ಕಾಣಿಸಿಕೊಂಡಿದೆ.

2. ರಾಜಸ್ಥಾನ್ ರಾಯಲ್ಸ್ - 58 ರನ್ಸ್
ಐಪಿಎಲ್ ಟೂರ್ನಿಯ ಪಂದ್ಯವೊಂದರಲ್ಲಿ ಅತೀ ಕಡಿಮೆ ರನ್‌ಗಳಿಸಿದ ತಂಡಗಳ ಪಟ್ಟಿಯಲ್ಲಿ 2008ರ ಚಾಂಪಿಯನ್ ತಂಡವಾಗಿರುವ ರಾಜಸ್ಥಾನ್ ರಾಯಲ್ಸ್ ಎರಡನೇ ಸ್ಥಾನದಲ್ಲಿದೆ. ವಿಚಿತ್ರವೆಂದರೆ ಈ ಕಳಪೆ ಸಾಧನೆಯನ್ನು ಆರ್ಆರ್ ತಂಡ ಚಾಂಪಿಯನ್ ಆದ ಮುಂದಿನ ವರ್ಷ ಆಡಿದ ಮೊದಲ ಪಂದ್ಯದಲ್ಲಿಯೇ ಮಾಡಿತ್ತು. ಅಂದರೆ 2009ರಲ್ಲಿ ನಡೆದ ಐಪಿಎಲ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ಮಾಡಿತ್ತು. 2008ರಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ರಾಜಸ್ಥಾನ್ ರಾಯಲ್ಸ್ 2009ರ ಐಪಿಎಲ್ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಈ ಕಳೆಪ ಸಾಧನೆ ಮಾಡಿದೆ. ಈ ಪಂದ್ಯದಲ್ಲಿ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 133 ರನ್‌ಗಳ ಸಾಧಾರಣ ಮೊತ್ತವನ್ನು ಪೇರಿಸಿತ್ತು . 134 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಆರ್‌ಆರ್ ಬಳಗ ಕೇವಲ 58 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಳ್ಳುವ ಮೂಲಕ ಕನಿಷ್ಠ ಮೊತ್ತ ದಾಖಲಿಸಿತು. ಪ್ರಸ್ತುತ ಈ ಸ್ಕೋರ್ ಅತೀ ಕನಿಷ್ಠ ರನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 2017ರ ವರೆಗೂ ಈ ಪಟ್ಟಿಯಲ್ಲಿ ಆರ್‌ಆರ್ ಮೊದಲ ಸ್ಥಾನದಲ್ಲಿತ್ತು.


1. ರಾಯಲ್ ಚಾಲೆಂಜರ್ಸ್ ಬೆಂಗಳೂರು - 49 ರನ್‌ಗಳಿಗೆ ಆಲೌಟ್
ಐಪಿಎಲ್‌ನಲ್ಲಿ ಅತ್ಯಂತ ಬಲಿಷ್ಠ ಆಟಗಾರರರ ಪಡೆಯನ್ನು ಹೊಂದಿದ್ದರೂ ಹೆಚ್ಚು ಬಾರಿ ನಿರಾಸೆಯನ್ನೇ ಅನುಭವಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸಾಕಷ್ಟು ದಾಖಲೆಗಳನ್ನು ತನ್ನ ಹೆಸರಿನಲ್ಲಿ ಬರೆದುಕೊಂಡಿದೆ. ಆದರೆ ಪಂದ್ಯದಲ್ಲಿ ಅತ್ಯಂತ ಕನಿಷ್ಠ ರನ್ ಬಾರಿಸಿರುವ ತಂಡ ಎಂಬ ಬೇಡದ ದಾಖಲೆಯೂ ಆರ್‌ಸಿಬಿ ಹೆಸರಿನಲ್ಲಿದೆ. 2017ರ ಐಪಿಎಲ್ ಟೂರ್ನಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧಧ ಪಂದ್ಯದಲ್ಲಿ ಈ ಬೇಡದ ದಾಖಲೆ ಬರೆದಿದೆ ಆರ್‌ಸಿಬಿ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತಾ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 131 ರನ್‌ಗಳನ್ನು ಗಳಿಸಿತು. 132 ರನ್‌ಗಳ ಸಾಧಾರಣ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಅಭಿಮಾನಿಗಳಿಗೆ ಆಘಾತ ನೀಡಿತು. ಸುಲಭ ಸವಾಲು ಮುಂದಿದ್ದರೂ ರನ್‌ಗಳಿಸಲು ಪರದಾಡಿದ ವಿರಾಟ್ ಕೊಹ್ಲಿ ನೇತೃತ್ವದ ಪಡೆ ಕೇವಲ 49 ರನ್‌ಗಳಿಗೆ ಆಲ್ಔಟ್ ಆಗಿತ್ತು. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಅತಿ ಕಡಿಮೆ ರನ್ ಗಳಿಸಿದ ತಂಡ ಎಂಬ ಕೆಟ್ಟ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications