ಶನಿವಾರ, ಏಪ್ರಿಲ್ 8ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ 2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 12ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ಮತ್ತು ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಸೆಣಸಾಡಲಿವೆ.
ಇದೇ ವೇಳೆ, ಐಪಿಎಲ್ 2023ರ ಹೈ-ವೋಲ್ಟೇಜ್ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಲು ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಬೆಂಬಲಿಸಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರುದ್ಧ ಸೋತ ನಂತರ, ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಗೆಲುವಿನ ಖಾತೆ ತೆರೆಯಲು ಎದುರು ನೋಡುತ್ತಿದೆ.
ತನ್ನ ಯುಟ್ಯೂಬ್ ಚಾನೆಲ್ ಆಕಾಶವಾಣಿಯಲ್ಲಿ ಮಾತನಾಡಿದ ಆಕಾಶ್ ಚೋಪ್ರಾ, ಸಿಎಸ್‌ಕೆ ವಿರುದ್ಧ ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮೆರಾನ್ ಗ್ರೀನ್ ಹೆಚ್ಚಿನ ರನ್ ಗಳಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದೇ ವೇಳೆ ಪಿಚ್ ವೇಗದ ಬೌಲಿಂಗ್‌ಗೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮೆರಾನ್ ಗ್ರೀನ್ ಇಬ್ಬರೂ ಆರ್‌ಸಿಬಿ ವಿರುದ್ಧ ಕಳಪೆ ಪ್ರದರ್ಶನ ನೀಡಿದರು. ಭಾರತೀಯ ಸೂರ್ಯಕುಮಾರ್ 16 ಎಸೆತಗಳಲ್ಲಿ 15 ರನ್ ಗಳಿಸಿದರೆ, ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮೆರಾನ್ ಗ್ರೀನ್ ನಾಲ್ಕು ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿದರು.

"ಸೂರ್ಯಕುಮಾರ್ ಯಾದವ್ ಮತ್ತು ಕ್ಯಾಮರೂನ್ ಗ್ರೀನ್ ತಲಾ 65ಕ್ಕಿಂತ ಹೆಚ್ಚು ರನ್ ಗಳಿಸುತ್ತಾರೆ. ಈ ಪಿಚ್‌ನಲ್ಲಿ ಬೌನ್ಸ್ ಮತ್ತು ಪೇಸ್ ಇದ್ದು, ವೇಗದ ಬೌಲರ್‌ಗಳಿಗೆ ಸಹಕಾರಿಯಾಗಲಿದೆ. ಇಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವನ್ನು ಭಾರತ ಗೆದ್ದಿದೆ. ಆ ವೇಳೆ ವೇಗದ ಬೌಲರ್‌ಗಳು ತಮ್ಮ ವರ್ಚಸ್ಸನ್ನು ತೋರಿಸಿದರು. ಹಾಗಾಗಿ ನಾನು ಮತ್ತೊಮ್ಮೆ ವೇಗದ ಬೌಲರ್‌ಗಳಿಗೆ ಹೆಚ್ಚಿನ ಸಹಾಯವಾಗುವುದನ್ನು ನಿರೀಕ್ಷಿಸುತ್ತಿದ್ದೇನೆ," ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಮುಂಬೈನ ವಾಂಖೆಡೆ ಪಿಚ್ ಸಿಎಸ್‌ಕೆ ವೇಗಿ ದೀಪಕ್ ಚಹಾರ್‌ಗೆ ಹೊಂದಿಕೆಯಾಗುತ್ತದೆ ಮತ್ತು ಅವರಿಂದ ಉತ್ತಮ ಪ್ರದರ್ಶನ ಬರಲಿದೆ ಎಂದು ಆಕಾಶ್ ಚೋಪ್ರಾ ತಿಳಿಸಿದರು.
ದೀಪಕ್ ಚಹಾರ್ 2023ರ ಐಪಿಎಲ್‌ನಲ್ಲಿ ಇನ್ನೂ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಸಿಎಸ್‌ಕೆ ತಂಡದ ಮೊದಲ ಎರಡು ಪಂದ್ಯಗಳಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದಾರೆ. ಅಲ್ಲದೇ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 55 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿಯಾದರು.

"ಜೋಫ್ರಾ ಆರ್ಚರ್ ಮತ್ತು ದೀಪಕ್ ಚಹಾರ್ ತಲಾ ಮೂರಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆಯುತ್ತಾರೆ. ದೀಪಕ್ ಚಹಾರ್ ಇಲ್ಲಿಯವರೆಗೆ ಅತ್ಯಂತ ಕಳಪೆ ಪಂದ್ಯಾವಳಿಯನ್ನು ಹೊಂದಿದ್ದಾರೆ. ಆದರೆ ಇಂದಿನ ಪಂದ್ಯದಲ್ಲಿ ಉತ್ತಮಗೊಳ್ಳುತ್ತಾರೆ. ಇದು ಅವರಿಂದ ಉತ್ತಮ ಪ್ರದರ್ಶನ ಹೊರತರುವ ಪಿಚ್ ಆಗಿದೆ. ಕನಿಷ್ಠ ಒಂದು ಅಥವಾ ಎರಡು ವಿಕೆಟ್‌ಗಳನ್ನು ಪಡೆಯಲಿದ್ದಾರೆ," ಎಂದು ಆಕಾಶ್ ಚೋಪ್ರಾ ಭವಿಷ್ಯ ನುಡಿದರು.
ಅಂತಿಮವಾಗಿ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ ಗೆಲ್ಲಲಿದೆ ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟರು. ಮುಂಬೈ ಇಂಡಿಯನ್ಸ್ ಅಂತಿಮವಾಗಿ 2023ರ ಐಪಿಎಲ್‌ನಲ್ಲಿ ತಮ್ಮ ಗೆಲುವಿನ ಖಾತೆಯನ್ನು ತೆರೆಯಲಿದೆ. ಈ ಪಂದ್ಯದಲ್ಲಿ ಹೆಚ್ಚಿನ ಸಿಕ್ಸರ್ ಬಾರಿಸುವುದನ್ನು ನಾವು ನೋಡಬಹುದು ಎಂದರು.
"ಈ ಪಂದ್ಯದಲ್ಲಿ ಕನಿಷ್ಠ 10 ಅಥವಾ ಅದಕ್ಕಿಂತ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸುವುದನ್ನು ನೋಡಬಹುದು. ಟಾಸ್ ಗೆದ್ದ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು, ಚೇಸಿಂಗ್ ಮಾಡಲು ಬಯಸುತ್ತದೆ. ಮುಂಬೈ ಇಂಡಿಯನ್ಸ್ ಅಂತಿಮವಾಗಿ ಖಾತೆ ತೆರೆಯುತ್ತದೆ ಎಂದು ನಾನು ಹೇಳುತ್ತಿದ್ದೇನೆ," ಎಂದು ಆಕಾಶ್ ಚೋಪ್ರಾ ತಿಳಿಸಿದರು.
ಒಂದು ಕಡೆ ಮುಂಬೈ ಇಂಡಿಯನ್ಸ್ ತಂಡ ತನ್ನ ಮೊದಲ ಗೆಲುವಿಗಾಗಿ ಎದುರು ನೋಡುತ್ತಿದ್ದರೆ, ಮತ್ತೊಂದೆಡೆ ಸಿಎಸ್‌ಕೆ ತಂಡ ತನ್ನ ಹಿಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿದ ಬಳಿಕ, ಅದೇ ಪ್ರದರ್ಶನವನ್ನು ಮುಂದುವರೆಸಲು ಪ್ರಯತ್ನಿಸಲಿದೆ.